ಕೊಡಗು ಜಿಲ್ಲಾ ಯೋಜನಾ ಸಮಿತಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಎಸ್.ಜೆ. ಸೋಮಶೇಖರ್, ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಧರ್ಮಜ ಉತ್ತಪ್ಪ ಇದ್ದರು.
ಹೆಸರಿಗೆ ಅದು ಜಿಲ್ಲಾ ಯೋಜನಾ ಸಮಿತಿ ಸಭೆ. ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಈ ಸಮಿತಿ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡAತಿಲ್ಲ. ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ಆಗಬೇಕಿದ್ದ ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಕೆಡಿಪಿ ಸಭೆಯ ಅನುಪಾಲನಾ ವರದಿ ಮಾದರಿಯಲ್ಲಿ ಅಂಕಿ ಅಂಶ ಕೊಡುವ ಮೂಲಕ ನಗೆಪಾಟಲಿಗೆ ಈಡಾದರು. ಮುಂದಿನ ಸಭೆಗಾದರೂ ಪೂರ್ವ ಸಿದ್ಧತೆಗಳ ಜತೆಗೆ ಆಗಮಿಸಿ ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಜನಪ್ರತಿನಿಧಿಗಳಿಂದ ಬುದ್ಧಿಮಾತು ಹೇಳಿಸಿಕೊಂಡರು.
ಗ್ರಾಮೀಣ ಮತ್ತು ನಗರ ಯೋಜನೆಗಳನ್ನು ಸಮನ್ವಯಗೊಳಿಸಿ, ಸಂಪನ್ಮೂಲಗಳ ಹಂಚಿಕೆಯನ್ನು ನಿರ್ಧರಿಸುವುದು ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಂದು ದಿಕ್ಸೂಚಿ ನೀಡುವ ಉದ್ದೇಶದಿಂದ ಜಿಲ್ಲಾ ಯೋಜನಾ ಸಮಿತಿ ರಚನೆಯಾಗಿದ್ದು ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ತಯಾರಿಸಿದ ಯೋಜನೆಗಳನ್ನು ಸಂಯೋಜಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆಯ ಕರಡನ್ನು ಸಿದ್ಧಪಡಿಸುವುದು ಜಿಲ್ಲಾ ಮಟ್ಟದ ಯೋಜನಾ ಸಮಿತಿಯ ಕೆಲಸವಾಗಿದೆ. ಇದೇ ಉದ್ದೇಶದಿಂದ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಉಪಸ್ಥಿತಿಯಲ್ಲಿ ಕೊಡಗು ಜಿಲ್ಲಾ ಯೋಜನಾ ಸಮಿತಿಯ ಮೊದಲ ಸಭೆ ಕರೆಯಲಾಗಿತ್ತು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಎಸ್.ಪಿ. ಆರ್.ಎನ್. ಬಿಂದುಮಣಿ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಎಲ್ಲಾ ಪ್ರಮುಖ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದಾಗಿದ್ದ ಈ ಸಭೆ ತರಾತುರಿಯಲ್ಲಿ ನಡೆಸಿದ್ದು ಅಥವಾ ಅಧಿಕಾರಿಗಳಿಗೇ ಸರಿಯಾದ ಮಾಹಿತಿ ಇಲ್ಲದಿರುವ ಕಾರಣಕ್ಕೋ ಸಂಪೂರ್ಣ ಯಶಸ್ಸು ಕಾಣುವಲ್ಲಿ ವಿಫಲವಾಯಿತು ಎನ್ನುವ ಮಾತುಗಳು ಸಮಿತಿ ಸದಸ್ಯರಿಂದಲೇ ಕೇಳಿಬಂದವು.
ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಸಮಿತಿ ಸದಸ್ಯರೂ ಆದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ. ರಾಜೇಶ್ ಯಲ್ಲಪ್ಪ, ಇದು ನಮಗೆ ಮೊದಲ ಸಭೆ. ಈ ಸಭೆ ನಡೆಯುವ ಬಗ್ಗೆ ಮೊದಲೇ ಮಾಹಿತಿ ಕೊಡಬೇಕಿತ್ತು. ಸಭೆಯ ರೂಪುರೇಷೆ ಬಗ್ಗೆ ಸರಿಯಾದ ಮಾಹಿತಿ ಕೊಡಬೇಕಿತ್ತು. ಈ ಬಗ್ಗೆ ವ್ಯವಸ್ಥೆ ಮಾಡಿದ್ದರೆ ನಾವುಗಳು ಈ ಸಭೆಯಲ್ಲಿ ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಬಹುದಿತ್ತು ಎಂದು ಹೇಳಿದರು. ಸಮಿತಿ ಸದಸ್ಯರೂ ಆದ ಮಡಿಕೇರಿ ನಗರ ಸಭಾ ಸದಸ್ಯ ಮನ್ಸೂರ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಭೆ ನಮ್ಮ ಗಮನಕ್ಕೂ ಬಂದಿಲ್ಲ ಎಂದು ಶಾಸಕ ಡಾ. ಮಂತರ್ ಗೌಡ ಕೂಡ ಈ ಸಂದರ್ಭ ಧ್ವನಿಗೂಡಿಸಿದರು.
ಸಂವಿಧಾನದ 74ನೇ ತಿದ್ದುಪಡಿಯ ಮೂಲಕ ಸಾಂವಿಧಾನಿಕ ಸ್ಥಾನಮಾನ ಪಡೆದುಕೊಂಡಿರುವ ಜಿಲ್ಲಾ ಯೋಜನಾ ಸಮಿತಿ ಪರಿಕಲ್ಪನೆಯನ್ನೇ ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಇನ್ನೂ ಅರ್ಥ ಮಾಡಿಕೊಂಡAತಿಲ್ಲ. ತಮ್ಮ ತಮ್ಮ ಇಲಾಖೆಯ ಭವಿಷ್ಯದ ಯೋಜನೆ ಮತ್ತು ಇದಕ್ಕೇ ಬೇಕಾಗಬಹುದಾದ ಸಂಪನ್ಮೂಲದ ಬಗ್ಗೆ ತಯಾರಿಸಿದ ವರದಿ ಮಂಡಿಸಿಬೇಕಿದ್ದ ಅಧಿಕಾರಿಗಳು ಹಿಂದಿನ ಆರ್ಥಿಕ ವರ್ಷದ ಸಾಧನೆಯ ಲೆಕ್ಕ ಕೊಡಲು ಮುಂದಾಗಿ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಜನಪ್ರತಿನಿಧಿಗಳಿಂದ ಪಾಠ ಹೇಳಿಸಿಕೊಳ್ಳುವಂತಾಯಿತು.
ಪ್ರವಾಸೋದ್ಯಮದ ಮೂಲಕ ಹೆಸರು ಮಾಡಿರುವ ಕೊಡಗಿನಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಆದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆ ಖಾಲಿ ಉಳಿದಿದೆ. ಹಾಗಾಗಿ ಪ್ರವಾಸೋದ್ಯಮ ಸಂಬAಧಿ ಆಗಿರುವ ಕಾರ್ಯಗಳ ಬಗ್ಗೆ ವರದಿ ತಯಾರಿಸಿ ಮಂಡಿಸುವವರು ಯಾರೂ ಇರಲಿಲ್ಲ. ಸದ್ಯಕ್ಕೆ ಇಲಾಖೆ ಜವಾಬ್ದಾರಿ ಉಪವಿಭಾಗಾಧಿಕಾರಿ ಮೇಲಿದ್ದು ಅವರು ಈ ಸಂಬAಧ ಯಾವುದೇ ವಿಷಯ ಪ್ರಸ್ತಾಪ ಮಾಡಲಿಲ್ಲ.
ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸಭೆಗೆ ಹಾಜರಾಗುವಂತೆ ನೊಟೀಸ್ ತಲುಪಿಸಲಾಗಿತ್ತು. ಆದರೆ ಅರಣ್ಯ ಇಲಾಖೆ ಸೇರಿದಂತೆ ಕೆಲವು ಮಹತ್ವದ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಸಿಟ್ಟಾದ ಸಚಿವ ಬೋಸರಾಜು ಸಭೆಗೆ ಗೈರು ಹಾಜರಾದ ಎಲ್ಲಾ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಜಿ.ಪಂ. ಸಿಇಒ ಅವರಿಗೆ ಸೂಚಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥರು ಸಭೆಗೆ ತರಾತುರಿಯಲ್ಲಿ ಆಗಮಿಸಿ ಸೇರಿಕೊಂಡರು. ಇವರಿಗೂ ಉಸ್ತುವಾರಿ ಸಚಿವರು ಮಾತಿನ ಚಾಟಿ ಬೀಸಿದರು.
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ಕ್ರೋಢೀಕರಿಸುವುದು, ಜಿಲ್ಲೆಗೆ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಸಾಮಾನ್ಯ ಆಸಕ್ತಿಗಳಾದ ಭೂ ಯೋಜನೆ, ಪರಿಸರ ಸಂರಕ್ಷಣೆ, ಮೂಲಸೌಕರ್ಯಗಳ ಅಭಿವೃದ್ಧಿ ಇತ್ಯಾದಿಗಳನ್ನು ಪರಿಗಣಿಸುವುದು, ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು, ರಾಜ್ಯ ಮತ್ತು ಜಿಲ್ಲಾ ಯೋಜನೆಗಳ ನಡುವೆ ಸಮನ್ವಯ ಸಾಧಿಸುವ ಕೆಲಸ ಈ ಸಭೆಯಲ್ಲಿ ಆಗಬೇಕಿತ್ತು. ಆದರೆ ಇದು ಯಾವುದೂ ಕೂಡ ನಡೆಯಲಿಲ್ಲ. ಹಾಗಾಗಿ ಮುಂದಿನ ಬಾರಿಯಿಂದ ಮುಂಚಿತವಾಗಿ ಸಭೆಯ ನೊಟೀಸ್ ಕೊಡಬೇಕು. ತಾಲೂಕು ಮಟ್ಟದಲ್ಲೂ ಸಭೆ ನಡೆಸಬೇಕು ಎಂದು ಬೋಸರಾಜು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಭಾಗದ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವುದು, ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು. ಇಲಾಖೆಗಳ ಆದ್ಯತೆ ಗುರುತಿಸಿ ಬಜೆಟ್ ರೂಪಿಸುವ ಮಹತ್ವದ ಉದ್ದೇಶವನ್ನೂ ಹೊಂದಿದೆ. ಸಾರ್ವಜನಿಕವಾಗಿ ಇರುವ ಬೇಡಿಕೆ ಸರ್ಕಾರದ ಗಮನಕ್ಕೆ ಬgಲಿ ಇಂಥ ಸಭೆ ಅನುಕೂಲ ಮಾಡಿಕೊಡುತ್ತದೆ.
ಇದೊಂದು ಮಹತ್ವದ ಸಭೆ. ಮುಂದಿನ ವರ್ಷಕ್ಕೆ ಏನು ಆಗಬೇಕು ಎನ್ನುವ ವರದಿಯನ್ನು ಅಧಿಕಾರಿಗಳು ತಯಾರು ಮಾಡಬೇಕು. ಇದಕ್ಕೂ ಮೊದಲು ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು. ಸಂಬAಧಿಸಿದ ಇಲಾಖೆಗಳಲ್ಲಿ ಇರುವ ಕೊರತೆಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಬೇಕು. ನಂತರ ವರದಿ ಸಲ್ಲಿಸಬೇಕು. ಮುಂದಿನ ಸಭೆಗಳಲ್ಲಿ ಹೀಗೆ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.
ಇದು ಅನುಪಾಲನಾ ವರದಿ ಮಂಡಿಸುವ ಸಭೆ ಅಲ್ಲ. ಇಂಥ ವರದಿಗಳಲ್ಲಿ ಕೆಡಿಪಿ ಸಭೆಗಳಲ್ಲಿ ಇಡಬಹುದು. ಈ ಸಭೆ ಯಾಕೆ ನಡೆಯುತ್ತಿದೆ ಎನ್ನುವುದೇ ಅಧಿಕಾರಿಗಳಿಗೆ ಅರ್ಥ ಆದಂತಿಲ್ಲ. ತಳಮಟ್ಟದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಅಭಿಪ್ರಾಯಗಳು ಸರ್ಕಾರದ ಮಟ್ಟಕ್ಕೆ ತಲುಪಬೇಕು ಎನ್ನುವ ಉದ್ದೇಶಕ್ಕೆ ಈ ರೀತಿಯ ಸಭೆ ನಡೆಸುವ ಅವಕಾಶವನ್ನು ಮುಖ್ಯಮಂತ್ರಿಗಳು ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮೊತ್ತದ ಅನುದಾನ ತರಲು ಇಂಥ ಸಭೆ ಅನಿವಾರ್ಯ. ಈ ಬಗ್ಗೆ ಅಧಿಕಾರಿಗಳು ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಬರಬೇಕು.
ಇಂಥದ್ದೊAದು ಸಭೆ ನಡೆಯುತ್ತದೆ ಎನ್ನವುದರ ಬಗ್ಗೆ ಕನಿಷ್ಠ ವಾರಕ್ಕೆ ಮುಂಚೆಯಾದರೂ ಸಂಬAಧಿಸಿದವರ ಗಮನಕ್ಕೆ ತರಬೇಕು. ನಮ್ಮಂಥ ಹೊಸಬರಿಗೆ ಈ ಸಭೆಯ ರೂಪುರೇಷೆ ಬಗ್ಗೆ ಮಾಹಿತಿ ಕೊಡಬೇಕು. ಬಜೆಟ್‌ಗೆ ಪೂರ್ವಭಾವಿ ಸಭೆ ಎನ್ನುವುದರ ಚಿಕ್ಕ ಮಾಹಿತಿಯೂ ನಮಗೆ ಇರಲಿಲ್ಲ. ಈ ರೀತಿಯ ಸಭೆ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಕೊಟ್ಟರೆ ಪೂರ್ವ ತಯಾರಿ ಜತೆ ಬಂದು ನಮ್ಮ ವಿಷಯಗಳನ್ನು ಮಂಡಿಸಲು ಅನುಕೂಲವಾಗುತ್ತದೆ.