ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಮಾನವ ಸರಪಳಿ ರಚಿಸಿ ಜನಜಾಗೃತಿ ಪ್ರತಿಭಟನೆ ನಡೆಸಿದರು. ಬೋಪಯ್ಯ, ಲೋಕೇಶ್, ರವೀಂದ್ರ ಇತರರು ಇದ್ದರು.
- ಬಿಜೆಪಿಯಿಂದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚನೆ
ಸೋಮವಾರಪೇಟೆ: ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೋಮವಾರ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜನಜಾಗೃತಿ ಪ್ರತಿಭಟನೆ ನಡೆಸಲಾಯಿತು.
ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ದೇಶದ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದು, ಅದರ ನಾಯಕರು ಜನಾದೇಶಕ್ಕೆ ಗೌರವ ನೀಡಬೇಕು. ದೇಶದ ಯುವಜನತೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬೆಂಬಲಿಸುತ್ತಿದ್ದು, ಕೇಂದ್ರ ಸರ್ಕಾರ ಯುವಶಕ್ತಿಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ದುಷ್ಟಶಕ್ತಿಗಳು ಹಾಗೂ ವಿದೇಶಿ ಶಕ್ತಿಗಳ ಹಸ್ತಕ್ಷೇಪದಿಂದ ಶಾಂತಿಯುತ ಚಳವಳಿಯ ಸ್ವರೂಪ ಬದಲಾಗಿದೆ ಎಂದು ಆರೋಪಿಸಿದ ಅವರು, ಪ್ರತಿಭಟನಾಕಾರರಿಗೆ ವಿದೇಶಗಳಿಂದ ವಿವಿಧ ರೀತಿಯ ನೆರವು ದೊರೆತಿರುವುದಾಗಿ ದೂರಿದರು.
ಪ್ರತಿಭಟನೆ ವೇಳೆ ಹಲವಾರು ಪೊಲೀಸರು ಗಾಯಗೊಂಡಿದ್ದು, ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳೇ ಹೊಣೆ ಎಂದು ಹೇಳಿದರು. ಪ್ರಧಾನಮಂತ್ರಿಗಳ ನಿವಾಸದ ಭದ್ರತೆಯ ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಹಲವು ಹಗರಣಗಳು ನಡೆದಿವೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಹಿಂದಿನ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ. ಪ್ರತಿಭಟನೆಗಳ ಸಂದರ್ಭದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪಕ್ಷದ ಮುಖಂಡರಾದ ಹರಪಳ್ಳಿ ರವೀಂದ್ರ, ಅರೆಯೂರು ಜಯಣ್ಣ, ಕವಿತಾ ವಿರೂಪಾಕ್ಷ, ಮಚ್ಚಂಡ ಪ್ರಕಾಶ್, ದರ್ಶನ್ ಜೋಯಪ್ಪ, ಅಜೀಶ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.