ಪಿಯು ಮಂಡಳಿ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು
ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊಡಗು ಈ ಬಾರಿ 3ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ. ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ.92.30ಯಷ್ಟು ಫಲಿತಾಂಶ ಬಂದಿದೆ. ಒಟ್ಟು 13 ಸಂಸ್ಥೆಗಳು ಈ ಬಾರಿ ಶೇ. 100ರ ಫಲಿತಾಂಶ ದಾಖಲಿಸಿವೆ.
ವಿಜ್ಞಾನ ವಿಭಾಗದಲ್ಲಿ ಪೊನ್ನಂಪೇಟೆ ಸಿಐ ಪಿಯು ಕಾಲೇಜಿನ ಭಾಷಿತ ಕೆ.ಡಿ. ಪ್ರಥಮ (594), ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಹರಿಕೃಷ್ಣನ್ ಎಂ. ದ್ವಿತೀಯ (591), ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ವಿಪುಲ್ ಉತ್ತಪ್ಪ (591) ತೃತೀಯ ಸ್ಥಾನ ಹಾಗೂ ಕುಶಾಲನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಗ್ರೀಷ್ಮ ಕೆ.ಎಲ್. (590) ನಾಲ್ಕನೇ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮಡಿಕೇರಿ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಸಿಂಚನ ಪ್ರಸನ್ನ ಪ್ರಥಮ (597), ಕುಶಾಲನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ರೈಲಾ ಸಾರಮ್ಮ ದ್ವಿತೀಯ (590), ಇದೇ ಕಾಲೇಜಿನ ಕೀರ್ತನ ಎ. ತೃತೀಯ (588) ಹಾಗೂ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಫರೀದ ಎಂ.ಎಸ್. (588) ನಾಲ್ಕನೇ ಸ್ಥಾನ ಪಡೆದಿದ್ದಾರೆ
ಕಲಾ ವಿಭಾಗದಲ್ಲಿ ಶನಿವಾರಸಂತೆ ಭಾರತಿ ಪದವಿ ಪೂರ್ವ ಕಾಲೇಜಿನ ಫಾತಿಮಾ ಎಸ್.ಎ. ಪ್ರಥಮ (592), ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂದಿತಾ ದ್ವಿತೀಯ (584) ಹಾಗೂ ಮೂರ್ನಾಡುವಿನ ಮೂರ್ನಾಡು ಪಿಯು ಕಾಲೇಜಿನ ಕೆ.ಎಂ. ಜುಹಾರಾ (570) ತೃತೀಯ ಸ್ಥಾನ ಗಳಿಸಿದ್ದಾರೆ.
ಗೋಣಿಕೊಪ್ಪಲು ಲಯನ್ಸ್ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಕಾವೇರಿ ಪದವಿ ಪೂರ್ವ ಕಾಲೇಜು, ಗರಗಂದೂರು ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಪೊನ್ನಂಪೇಟೆ ಸಂತ ಅಂತೋಣಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಸಂತ ಅನ್ನಮ್ಮ ಪೂರ್ವ ಕಾಲೇಜು, ಗೋಣಿಕೊಪ್ಪಲು ಕೂರ್ಗ್ ಪದವಿ ಪೂರ್ವ ಕಾಲೇಜು, ಮಡಿಕೇರಿ ಸಂತ ಮೈಕಲರ ಪದವಿ ಪೂರ್ವ ಕಾಲೇಜು, ಕೋಟ್ಟಮುಡಿ ಏಕಲವ್ಯ ಪದವಿ ಪೂರ್ವ ಕಾಲೇಜು, ಪೆರಂಬಾಡಿ ಎಸ್ ಇ ಎಸ್ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪಲು ಸರ್ವದೈವತ ಪದವಿ ಪೂರ್ವ ಕಾಲೇಜು, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ಪದವಿ ಪೂರ್ವ ಕಾಲೇಜು ಹಾಗೂ ಕೊಡ್ಲಿಪೇಟೆ ಅಬ್ದುಲ್ ಕಲಾಂ ಪದವಿಪೂರ್ವ ಕಾಲೇಜುಗಳಿಗೆ ಶೇ. 100ರ ಫಲಿತಾಂಶ ಬಂದಿದೆ.
ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ವಿಜ್ಞಾನ ವಿಭಾಗದಲ್ಲಿ 48 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 27 ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕೆ.ಎಸ್. ಭವಾನಿ 600ಕ್ಕೆ579, ಆರ್.ಎಸ್. ಗಗನ್ 600ಕ್ಕೆ577 ಹಾಗೂ ಚಿಂತನ್ ಪಿ. 600ಕ್ಕೆ572 ಅಂಕಗ ಪಡೆದಿದ್ದಾರೆ.
ಕೂಡಿಗೆ ಸರ್ಕಾರಿ ಪಿಯೂ ಕಾಲೇಜು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.100 ಹಾಗೂ ಕಲಾ ವಿಭಾಗದಲ್ಲಿ ಶೇ. 95.25 ಫಲಿತಾಂಶ ಪಡೆದಿದ್ದು, ಶೇ. 99ರಷ್ಟು ಫಲಿತಾಂಶ ದಾಖಲಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಫೆ.28ರಿಂದ ಮಾ. 17ರ ತನಕ ನಡೆದಿತ್ತು. ಕಳೆದ ವರ್ಷ ಶೇ. 83.84 ಫಲಿತಾಂಶದೊAದಿಗೆ ಕೊಡಗು ರಾಜ್ಯದಲ್ಲಿ 4ನೇ ಸ್ಥಾನದಲ್ಲಿ ಇತ್ತು. 2024ರಲ್ಲಿ ಶೇ. 92.13ರಷ್ಟು ಫಲಿತಾಂಶ ದಾಖಲಿಸಿದರೂ 5ನೇ ಸ್ಥಾನದಲ್ಲಿತ್ತು. 2023ರಲ್ಲಿ ಶೇ. 90.55 ಫಲಿತಾಂಶದೊAದಿಗೆ 3ನೇ ಸ್ಥಾನ ಪಡೆದುಕೊಂಡಿತ್ತು. 2022ರಲ್ಲಿ ಶೇ. 73.22 ಫಲಿತಾಂಶ ಪಡೆದುಕೊಂಡು 6ನೇ ಸ್ಥಾನದಲ್ಲಿ ಇತ್ತು.
2025ರ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ. ಜಿಲ್ಲೆಯಲ್ಲಿ 4745 ವಿದ್ಯಾರ್ಥಿಗಳ ಪೈಕಿ 1898 ಗಂಡು ಹಾಗೂ 2847 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, 4380 ಮಂದಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ 1752 ಗಂಡು ಹಾಗೂ 2628 ಹೆಣ್ಣು ಮಕ್ಕಳು ತೇರ್ಗಡೆಯಾಗಿದ್ದಾರೆ.