ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿಯ ಕುಂಬೂರು ಗ್ರಾಮದ ಸ.ನಂ.125/1 ಪೈಸಾರಿ ಜಾಗದಲ್ಲಿ ನಿವೇಶನಕ್ಕಾಗಿ ಧರಣಿ ನಡೆಸುತ್ತಿರುವುದು.
- ಕುಂಬೂರು ಗ್ರಾಮದಲ್ಲಿ ವಸತಿರಹಿತ ಕಾರ್ಮಿಕರಿಂದ ಧರಣಿ
ಸೋಮವಾರಪೇಟೆ: ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರವೂ ನಡೆಯಿತು.
9ನೇ ದಿನವೂ ಯಾವುದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ವಸತಿಹೀನ ಬಡ ಕಾರ್ಮಿಕರ ಸಮಸ್ಯೆಯನ್ನು ಶಾಸಕರು ಕೇಳಬೇಕಿತ್ತು. ದುರದೃಷ್ಟಕರ ಯಾವುದೇ ಜನಪ್ರತಿನಿಧಿ ಇದುವರೆಗೆ ಧರಣಿನಿರತ ಬಡವರ ಗೋಳನ್ನು ಕೇಳಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಕೆ.ಮೊಣ್ಣಪ್ಪ ಅಳಲು ತೋಡಿಕೊಂಡರು.
ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧರಣಿ ನಿರತರ ಬೇಡಿಕೆ ಆಲಿಸುವ ಭರವಸೆ ಸಿಕ್ಕಿದೆ. ಸೂರಿಲ್ಲದ ಬಡವರಿಗೆ ಉಚಿತ ನಿವೇಶನ ನೀಡುವುದಕ್ಕೆ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು. ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಗಳಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಮೊಣ್ಣಪ್ಪ ಎಚ್ಚರಿಸಿದರು. ಕಾನೂನಿನಂತೆ ವಸತಿ ರಹಿತರಿಗೆ ಸರ್ಕಾರಿ ಜಾಗದಲ್ಲಿ ಉಚಿತ ನಿವೇಶನ ನೀಡದಿದ್ದರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.