ವಿರಾಜಪೇಟೆಯಲ್ಲಿ ನಡೆದ ಮಹಾತ್ಮ ಗಾಂಧಿ ನರೇಗಾ ಬಚಾವೋ ಸಂಗ್ರಾಮ ಪಾದಯಾತ್ರೆಯಲ್ಲಿ ಶಾಸಕ ಎ ಎಸ್ ಪೊನ್ನಣ್ಣ, ಲಕ್ಷ್ಮಣ್, ಧರ್ಮಜ ಉತ್ತಪ್ಪ, ರಂಜಿ ಪೂಣಚ್ಚ, ಮಹಮ್ಮದ್ ರಾಫಿ, ದೇಚಮ್ಮ ಕಾಳಪ್ಪ ಇದ್ದರು. 
ಕೊಡಗು

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ

ಲೋಕೇಶ್ ಮನು. ಡಿ
ವಿರಾಜಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಹೆಸರು ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆ ಮರು ಜಾರಿಗೆ ಆಗ್ರಹಿಸಿ ಸೋಮವಾರ ಪಟ್ಟಣದ ಕಾರು ನಿಲ್ದಾಣದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಶಾಸಕ ಎ.ಎಸ್.ಪೊನ್ನಣ್ಣ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ಕಾವೇರಿ ಕಾಲೇಜು ಸಮೀಪದಿಂದ ಮನರೇಗಾ ಬಚಾವ್ ಸಂಗ್ರಾಮದ ಪಾದಯಾತ್ರೆ ಮೂಲಕ ಪಾದಯಾತ್ರೆಯಲ್ಲಿ ಸಾಗಿಬಂದು ಪಟ್ಟಣದ ಕಾರು ನಿಲ್ದಾಣದಲ್ಲಿ ಸಮಾವೇಶಗೊಂಡರು.
ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಬಡವರ ಕಲ್ಯಾಣಕ್ಕಾಗಿ ಮನರೇಗಾ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿತ್ತು. ಈ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಪರೋಕ್ಷವಾಗಿ ರದ್ದುಪಡಿಸಿದೆ. ಕೇಂದ್ರದ ಹೊಸ ಕಾನೂನಿನ ಪ್ರಕಾರ ಮುಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದ ಯಾವುದೇ ಕೂಲಿ, ಕಾಮಗಾರಿ ನಡೆಯುವುದು ಸಾಧ್ಯವಿಲ್ಲ ಎಂದು ದೂರಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಎಚ್ ಮತಿನ್, ಪುರಸಭೆ ಮಾಜಿ ಸದಸ್ಯರಾದ ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಅಲ್ಪಸಂಖ್ಯತರ ಘಟಕದ ಅಧ್ಯಕ್ಷ ಹನೀಫ್, ಕೊಳುಮಂಡ ರಫಿಕ್, ವಕ್ತಾರ ತೆನ್ನಿರ ಮೈನಾ, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಜಗದೀಶ್ ಕಾಣತಂಡ ಇತರರು ಇದ್ದರು.