ಮಾಗಡಿ ಜಾಲ್ಸೂರು ರಾಜ್ಯ ಹೆದ್ದಾರಿ-85ರ ಸೋಮವಾರಪೇಟೆ ತೋಳುರು ಶೆಟ್ಟಳಿ ್ಳಕೂತಿ ಮಾರ್ಗದ ಮುಖ್ಯ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ: ಮಾಗಡಿ ಜಾಲ್ಸೂರು ರಾಜ್ಯ ಹೆದ್ದಾರಿ-85ರ ಸೋಮವಾರಪೇಟೆ ತೋಳುರು ಶೆಟ್ಟಳಿ ್ಳಕೂತಿ ಮಾರ್ಗದ ಮುಖ್ಯ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.
ಅಲೆಕಟ್ಟೆ ಸಮೀಪದ ಸಾಂದೀಪನಿ ಶಾಲೆ ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಪ್ರತಿಭಟನಾಕಾರರು, ರಸ್ತೆ ಅಗೆದು ಹಾಳು ಮಾಡಿದ್ದಾರೆ. ಆದರೆ ಇದುವರೆಗೆ ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ಬಹುತೇಕ ಕಡೆ ರಸ್ತೆ ಕಾಮಗಾರಿ ತೃಪ್ತಿಕರವಾಗಿಲ್ಲ. ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ದೂರಿದರು.
ಅಲೆಕಟ್ಟೆಯಿಂದ ಹರಪಳ್ಳಿವರೆಗೆ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ 8 ಕಿಮೀ ರಾಜ್ಯ ಹೆದ್ದಾರಿ ಡಾಂಬರೀಕರಣ ಹಾಗೂ ಕೆಲ ಕಡೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ರಸ್ತೆಯಲ್ಲಿ ವಾಹನಗಳನ್ನು ಚಾಲಿಸಲು ಹರಸಾಹಸ ಪಡೆಬೇಕಾಗಿದೆ ಎಂದು ದೂರಿದರು.
ಧೂಳಿನಿಂದ ಸಾರ್ವಜನಿಕರು, ರಸ್ತೆ ಅಕ್ಕಪಕ್ಕದ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್ ಕುಮಾರ್ ಅವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಾತನಾಡಿದ ಕುಮಾರ್, ಕೆಲವು ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ಬಾಕಿಯಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ ಅನುಮತಿ ಸಿಗಲಿದ್ದು, ಸುಮಾರು 1.5 ಕಿಮೀ ಬಾಕಿ ಇರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಈ ತಿಂಗಳ 20 ರೊಳಗೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಭರವಸೆಯ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಅಧ್ಯಕ್ಷ ಗೌತಮ್, ವಕ್ತಾರ ಎಂ.ಬಿ.ಅಭಿಮನ್ಯುಕುಮಾರ್, ಜಿಲ್ಲಾ ಉಪಾಧ್ಯಕ್ಷ ಮನುಕುಮಾರ್ ರೈ, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್, ಉಪಾಧ್ಯಕ್ಷೆ ರೇಣುಕಾ ವೆಂಕಟೇಶ್, ಚೌಡ್ಲು ಗ್ರಾಪಂ ಅಧ್ಯಕ್ಷೆ ಗೀತಾ ಪಕ್ಷದ ಪ್ರಮುಖರಾದ ಸಿ.ಪಿ.ಗೋಪಾಲ್ ಇದ್ದರು.