ಕೆಪಿಎಸ್ - ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ ಕೂಡಿಗೆ ಶಾಲೆಗೆ ವಿಲೀನಗೊಳಿಸಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸುಭಾಷ್ ಬೆಟ್ಟದಕೊಪ್ಪ, ಸ್ವಾತಿ, ಪೂರ್ಣಿಮಾ, ಜ್ಯೋತಿ, ನೇತ್ರಾವತಿ, ಕಾವ್ಯ ,ಗೀತಾ, ಶ್ರುತಿ, ಅಂಕಿತ, ಸಂತೋಷ್ ಮತ್ತಿತರರು ಇದ್ದರು, 
ಕೊಡಗು

ಶಾಲೆ ವಿಲೀನ ವಿರುದ್ಧ ಪ್ರತಿಭಟನೆ

ಸುನಿಲ್ ಪೊನ್ನೇಟಿ
ಕುಶಾಲನಗರ:
ಕೆಪಿಎಸ್ - ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೂಡುಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ ಕೂಡಿಗೆ ಶಾಲೆಗೆ ವಿಲೀನಗೊಳಿಸಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸೋಮವಾರ ಕೂಡುಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭ ಮಾತನಾಡಿದ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ 40,000 ಸರ್ಕಾರಿ ಶಾಲೆಗಳನ್ನು ರಾಜ್ಯಾದ್ಯಂತ ಮುಚ್ಚಲಾಗುತ್ತಿದೆ. 2025ರ ಅ.15 ಹಾಗೂ ಡಿ. 30 ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದಾದ್ಯಂತ 5900 ಗ್ರಾಮ ಪಂಚಾಯಿತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿರುವುದು ಅತ್ಯಂತ ಕರಾಳ ವಿಷಯವಾಗಿದೆ. ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗುವ ಮಕ್ಕಳಿಗೆ 6ನೇ ತರಗತಿಯಿಂದಲೇ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಾಗಿಯೇ ಉಳಿಸುವುದು ಸರ್ಕಾರದ ಹುನ್ನಾರವಾಗಿದೆ.
ಎಡಿಬಿ ಬ್ಯಾಂಕಿನಿAದ 2,500 ಕೋಟಿ ರೂ. ಸಾಲ ಪಡೆದು ಕೆಪಿಎಸ್ ಶಾಲೆ ತೆರೆಯಲಾಗುತ್ತಿದೆ. ಈ ಶಾಲೆಗಳನ್ನು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ಕೊಡಲಾಗುತ್ತದೆ. ಪ್ರತಿಶಾಲೆ ಸ್ವಂತ ಮೂಲದಿಂದ ಆದಾಯ ಸಂಗ್ರಹಿಸಬೇಕು ಎಂದು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೇಳುತ್ತದೆ. ಸರ್ಕಾರ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಂಡು ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡುವ ಹುನ್ನಾರ ರಚಿಸಿದೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದೇ ಜನರ ಮುಂದಿನ ಪರಿಹಾರ. ಏನೇ ಬಂದರೂ ಹೋರಾಟದಿಂದ ಹಿಂದೆ ಸರಿಯಬಾರದು ಎಂದರು.
ಗ್ರಾಮದ ಪೋಷಕರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಈ ಯೋಜನೆ ರದ್ದುಗೊಳಿಸುವವರೆಗೂ ಶಾಲೆ ಉಳಿಸಲು ಹೋರಾಡುವ ಸಂಕಲ್ಪ ತೆಗೆದುಕೊಂಡರು. ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಸ್ವಾತಿ, ಪದಾಧಿಕಾರಿಯಾದ ಪೂರ್ಣಿಮಾ, ಪೋಷಕರಾದ ಜ್ಯೋತಿ, ನೇತ್ರಾವತಿ, ಕಾವ್ಯ ,ಗೀತಾ,ಶ್ರುತಿ, ಅಂಕಿತ, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.