ಎಸ್.ಎನ್.ಡಿ.ಪಿ. ವನಿತಾ ಸಮಾವೇಶ ಕಾರ್ಯಕ್ರಮವನ್ನು ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಆರ್. ರಾಜನ್, ಪ್ರೇಮಾನಂದ, ಮೋಹನ್ ದಾಸ್, ಶಂಕರನಾರಾಯಣ ಇದ್ದರು.
- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ
- ಎಸ್.ಎನ್.ಡಿ.ಪಿ. ವನಿತಾ ಸಮಾವೇಶ
ಸಿದ್ದಾಪುರ: ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ವತಿಯಿಂದ ವನಿತಾ ಸಮಾವೇಶವನ್ನು ಬುಧವಾರ ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಪಾರಂಪರಿಕ ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸುವ ಮೂಲ ತತ್ವಗಳನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಇಂತಹ ಸಮಾವೇಶಗಳು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರ ಸಾಧನೆಗಳನ್ನು ಗುರುತಿಸಲು ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಎಸ್.ಎನ್.ಡಿ.ಪಿ. ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ವನಿತಾರನ್ನು ಒಗ್ಗೂಡಿಸಿ ಅವರಿಗೆ ಬಲ ತುಂಬುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಘಟನೆಯಲ್ಲಿ ಒಟ್ಟು 18 ಸಾವಿರ ಸದಸ್ಯರಿದ್ದು, ಅದರಲ್ಲಿ 9 ಸಾವಿರ ಮಹಿಳೆಯರು ಸೇರಿದ್ದಾರೆ. ಸಂಘಟನೆಯು ಪ್ರತಿವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸದಸ್ಯತ್ವ ಪಡೆದ ಕೊಡಗಿನ 48 ಮಾಜಿ ಸೈನಿಕರು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ 108 ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ಹೇಳಿದರು.
ಜತೆಗೆ 50 ವರ್ಷಕ್ಕಿಂತ ಮೇಲ್ಪಟ್ಟ ದಾಂಪತ್ಯ ಜೀವನ ನಡೆಸುತ್ತಿರುವ ದಂಪತಿಗಳನ್ನು ಗೌರವಿಸಲಾಗಿದ್ದು, ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನೂ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಆರ್ ರಾಜನ್, ಕಾರ್ಯದರ್ಶಿ ಪ್ರೇಮಾನಂದ, ನಿರ್ದೇಶಕರಾಗಿ ಮೋಹನ್ ದಾಸ್, ಶಂಕರನಾರಾಯಣ, ಪ್ರಮುಖರಾದ ಸಜೀವ, ರಾಜಶೇಖರ್, ಗಿರೀಶ್, ಮೋಹನ್ ದಾಸ್ ಪಾಪಯ್ಯ, ನಾರಾಯಣ ಇತರರಿದ್ದರು.