ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡಿರುವ ಜಿ.ಎಸ್.ಗುರುಸ್ವಾಮಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಿ.ವಿ.ನಾಗೇಶ್, ಹನುಮಂತರಾಯ, ಶಶಿಧರ, ಇತರರಿದ್ದರು. 
ಕೊಡಗು

ಉಪ ನಿರ್ದೇಶಕರಾಗಿ ಬಡ್ತಿ: ಗುರುಸ್ವಾಮಿಗೆ ಬೀಳ್ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ಉಪ ನಿರ್ದೇಶಕರಾಗಿ ಬಡ್ತಿ: ಗುರುಸ್ವಾಮಿಗೆ ಬೀಳ್ಕೊಡುಗೆ
ಮಡಿಕೇರಿ: ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಎಸ್.ಗುರುಸ್ವಾಮಿ ಅವರು ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ, ವರ್ಗಾವಣೆಗೊಂಡಿರುವ ಹಿನ್ನೆಲೆ ಬುಧವಾರ ಕೈಗಾರಿಕೆ, ಕೈಮಗ್ಗ ಮತ್ತು ಜವಳಿ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಸೇರಿದಂತೆ ವಿವಿಧ ಇಲಾಖೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ನಾಗೇಶ್ ಅವರು, ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕೈಮಗ್ಗ ಮತ್ತು ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ, ಜವಳಿ ಕೈಗಾರಿಕೆಗೆ ಸಹಾಯಧನ ಸೌಲಭ್ಯ, ಸಾಲ ಆಧಾರಿತ ಬಂಡವಾಳ ಸಹಾಯಧನ, ಬಡ್ಡಿ ಸಹಾಯಧನ, ವಿಮಾ ಯೋಜನೆ, ವಿದ್ಯುತ್ ಮಗ್ಗಕ್ಕೆ ಸಹಾಯಧನ ಹೀಗೆ ಹಲವು ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹನುಮಂತರಾಯ ಮಾತನಾಡಿ, ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಸ್ನೇಹಮಯಿಯಾಗಿ ಕೆಲಸ ನಿರ್ವಹಿಸಿ ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ ವರ್ಗಾವಣೆಯಾಗಿರುವುದು ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ಗುರುಸ್ವಾಮಿ ಅವರು, ಕಳೆದ ೧೭ ವರ್ಷಗಳ ಸೇವಾವಧಿಯಲ್ಲಿ ಮೂರುವರೆ ವರ್ಷ ಹೊರತುಪಡಿಸಿ ಹದಿಮೂರುವರೆ ವರ್ಷ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಧರ, ಸಹಾಯಕ ನಿರ್ದೇಶಕರಾದ ಬಿ.ಎಸ್.ಮುತ್ತಪ್ಪ, ವರದರಾಜು, ಜಿ.ಪಂ.ಲೆಕ್ಕ ವಿಭಾಗದ ಬಲರಾಂ, ಕೈಗಾರಿಕೆ ಇಲಾಖೆಯ ಪ್ರಶಾಂತ್, ಮಧು, ಕೈಗಾರಿಕೆ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.