ವಿರಾಜಪೇಟೆಯ ಚಿಕ್ಕಪೇಟೆ ಯಲ್ಲಿನ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದ ಮೇಲ್ಚಾವಣಿ ಹಾನಿಯಾಗಿರುವುದು.
ವಿರಾಜಪೇಟೆ : ಮೂರು ವರ್ಷಗಳ ಹಿಂದೆ ವಿರಾಜಪೇಟೆಯಲ್ಲಿ ಸೇವೆಗೆ ಸಮರ್ಪಣೆಗೊಂಡಿದ್ದ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣ ಈಗ ಸಮಸ್ಯೆಗಳ ಆಗರವಾಗಿದೆ. ಸಮರ್ಪಕ ನಿರ್ವಹಣೆ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಕಿತ್ತು ಹೋದ ಛಾವಣಿ, ಇಬ್ಬನಿ ನೀರಿನಿಂದ ಹಾಳಾಗುತ್ತಿರುವ ಮರದ ನೆಲ ಹಾಸು, ಪಾಚಿಗಟ್ಟುತ್ತಿರುವ ಕ್ರೀಡಾಂಗಣದ ಗೋಡೆಗಳು, ಈಗಲೂ ತಾತ್ಕಾಲಿಕವಾಗಿರುವ ವಿದ್ಯುತ್ ಸಂಪರ್ಕ, ಭರವಸೆಗಷ್ಟೇ ಮೀಸಲಾಗಿರುವ ನೂತನ ಮಲ್ಟಿ ಜಿಮ್ ಹಾಗೂ ಈಜುಕೊಳ ನಿರ್ಮಾಣ ಹೀಗೆ ಸಾಲು ಸಾಲು ಸಮಸ್ಯೆ ಇದೆ. ಇದು ವಿರಾಜಪೇಟೆಯಲ್ಲಿರುವ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ವಹಣೆಯಲ್ಲಿರುವ ತಾಲೂಕು ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದ ಸದ್ಯದ ಪರಿಸ್ಥಿತಿ. ಪಟ್ಟಣದ ಚಿಕ್ಕಪೇಟೆ ಕಿರಿಯ ಕಾಲೇಜಿನ ಸಮೀಪ 2022ರಲ್ಲಿ ಉದ್ಘಾಟನೆಗೊಂಡ ತಾಲೂಕು ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣ ಸಂಪೂರ್ಣ ನಿರ್ಲಕ್ಷೃಕ್ಕೆ ಒಳಗಾಗಿದೆ. ಇದನ್ನು ಸರಿಪಡಿಸುವವರು ಯಾರು ಎಂಬುದು ಕ್ರೀಡಾಪಟುಗಳ ಅಳಲಾಗಿದೆ.
ಕ್ರೀಡಾಂಗಣದ ಒಂದು ಕಡೆ ಸಿಮೆಂಟ್‌ಶೀಟ್ ಚಾವಣಿಯೇ ಕಿತ್ತು ಹೋಗಿದೆ. ಕೆಲವು ಕಡೆ ಶೀಟ್ ತೂತು ಬಿದ್ದಿದ್ದು, ಮಳೆಯ ನೀರು ಕ್ರೀಡಾಂಗಣದ ಒಳಗೆ ಸೋರಿಕೆಯಾಗುತ್ತಿದೆ. ಕೆಲವು ಗೋಡೆಗಳು ಮಳೆ ನೀರಿನ ಸೋರಿಕೆಯಿಂದ ಬಣ್ಣ ಕಳೆದುಕೊಂಡು ಪಾಚಿಕಟ್ಟಲು ಆರಂಭವಾಗಿದೆ.
ಅಲ್ಲಲ್ಲಿ ಒಂದಷ್ಟು ಕಾಮಗಾರಿ ನಡೆಯಬೇಕಿದೆ. ಈ ಕುರಿತು ಕ್ರೀಡಾಂಗಣಕ್ಕೆ ಬರುವ ಕ್ರೀಡಾಪಟುಗಳು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಒಳಾಂಗಣ ಕ್ರೀಡಾಂಗಣದಲ್ಲಿ ಸಮಸ್ಯೆಗಳು ಇರುವ ಕಾರಣ 10 ದಿನ ರಜೆ ಘೋಷಣೆ ಮಾಡಲಾಗಿದೆ. ಕಾಮಗಾರಿ ನಡೆಸಬೇಕಾಗಿರುವ ಕಾರಣ ಯಾರೂ ಆಟವಾಡಲು ಬರಬಾರದು ಕಾಮಗಾರಿ ಪೂರ್ಣಗೊಂಡ ನಂತರ ತಿಳಿಸಲಾಗುವುದು ಎಂದು ಕಳೆದ ನವೆಂಬರ್ ತಿಂಗಳಿನಲ್ಲಿ ಸೂಚನಾ ಫಲಕ ಹಾಕಲಾಗಿತ್ತು. ಆದರೆ 15 ದಿನ ಕಳೆದರೂ ಕ್ರೀಡಾಂಗಣದಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ.
ಕ್ರೀಡಾಪಟುಗಳು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಡಿಕೇರಿಯ ಕ್ರೀಡಾಂಗಣದಲ್ಲಿ ಕಾಮಗಾರಿ ಈಗ ನಡೆಯುತ್ತಿದೆ. ಅದನ್ನು ಮುಗಿಸಿದ ನಂತರ ಇಲ್ಲಿಗೆ ಬರುತ್ತಾರೆ ಎಂಬ ಉತ್ತರ ಬಂದಿತ್ತು. ಈವರೆಗೂ ಯಾವ ಕೆಲಸಗಾರರೂ ಇಲ್ಲಿಗೆ ಬಂದಿಲ್ಲ. ಕಾಮಗಾರಿ ಆರಂಭವಾಗುವವರೆಗೂ ನಾವು ಕ್ರೀಡಾಂಗಣವನ್ನು ಬಳಸಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದ ಕ್ರೀಡಾಪಟುಗಳು ಇಲ್ಲಿ ನಿತ್ಯದ ಅಭ್ಯಾಸ ಆರಂಭಿಸಿದರು. ಸೂಚನಾ ಫಲಕ ಹಾಕಿ 3 ತಿಂಗಳು ಕಳೆಯುತ್ತಾ ಬಂದಿದ್ದರೂ ಈವರೆಗೆ ಯಾವುದೇ ಅಧಿಕಾರಿ, ಕೆಲಸಗಾರರು ಇತ್ತ ಸುಳಿದಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಂಪೂರ್ಣ ಕ್ರೀಡಾಂಗಣವೇ ಹಾಳಾಗಿ ಹೋಗುತ್ತದೆ ಎಂಬುದು ಕ್ರೀಡಾಳುಗಳ ನೋವು.
ಕೆಲವು ಕಡೆ ಆಗಿರುವ ಸಣ್ಣಪುಟ್ಟ ಹಾನಿಗಳನ್ನು ಕ್ರೀಡಾಪಟುಗಳೇ ಸರಿಪಡಿಡಿಕೊಂಡು ನಿತ್ಯದ ಅಭ್ಯಾಸ ಮುಂದುವರಿಸಿದ್ದಾರೆ. ಕ್ರೀಡಾಂಗಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ನೆಲಹಾಸಿಗೆ ಸಿಂಥೆಟಿಕ್ ಮ್ಯಾಟ್‌ಗಳನ್ನಾದರೂ ತುರ್ತಾಗಿ ಅಳವಡಿಸಿಕೊಡಿ ಎನ್ನುವುದು ಕ್ರೀಡಾಪಟುಗಳ ಆಗ್ರಹ. ಆದರೆ ಇದನ್ನು ಕೇಳುವ ಮತ್ತು ಕ್ರಮ ವಹಿಸುವವರು ಯಾರು ಎಂಬ ಪ್ರಶ್ನೆ ಕಾಡಿದೆ.
ಕ್ರೀಡಾಂಗಣದಲ್ಲಿ ಏನೆಲ್ಲ ಸಮಸ್ಯೆಗಳಿವೆ?
ಒಳಾಂಗಣ ಕ್ರೀಡಾಂಗಣದ ಕಟ್ಟಡದ ಹೊರಭಾಗದಲ್ಲಿ ಮಳೆ ನೀರು ಹರಿದು ಹೋಗಲು ಅಳವಡಿಸಿದ ಪೈಪ್ ಒಡೆದು ಹೋಗಿದೆ. ಕ್ರೀಡಾಂಗಣದ ಸುತ್ತ ಕಟ್ಟಡಕ್ಕೆ ತಾಗಿಕೊಂಡಂತೆ ಅಲ್ಲಲ್ಲಿ ಕಾಡು ಗಿಡಗಳು ಬೆಳೆದು ನಿಂತಿವೆ. ಕ್ರೀಡಾಂಗಣ ಆರಂಭವಾಗಿ 3 ವರ್ಷ ಕಳೆದರೂ ಶಾಶ್ವತವಾದ ವಿದ್ಯುತ್ ಸಂಪರ್ಕ ದೊರಕಿಲ್ಲ. ತಾತ್ಕಾಲಿಕವಾಗಿ ಅಳವಡಿಸಿದ ವಿದ್ಯುತ್ ಮೀಟರ್‌ನಿಂದಲೇ ಬೆಳಕಿನ ವ್ಯವಸ್ಥೆ ಆಗುತ್ತಿದೆ. ಇಲ್ಲಿ ಈಜುಕೊಳ ಮತ್ತು ಮಲ್ಟಿಜಿಮ್ ನಿರ್ಮಾಣ ಮಾಡುತ್ತೇವೆ ಎಂಬುದು ಇನ್ನೂ ಭರವಸೆಯಾಗಿಯೇ ಉಳಿದಿದೆ.
ಕ್ರೀಡಾಂಗಣ ನಿರ್ಮಾಣ ಸಂದರ್ಭದಲ್ಲೇ ಅಧಿಕಾರಿಗಳು ಈಜುಕೊಳ ಹಾಗೂ ಜಿಮ್ ನಿರ್ಮಾಣದ ನೀಲಿನಕ್ಷೆ ಸಿದ್ಧಪಡಿಸಿದ್ದಾಗಿ ಹೇಳಿದ್ದರು. ಕ್ರೀಡಾಂಗಣ ಉದ್ಘಾಟನೆ ಸಂದರ್ಭ ಮಾಡಲು ಆಗಿರಲಿಲ್ಲ. ನಂತರವಾದರೂ ಕಾಮಗಾರಿ ನಡೆಸಬೇಕಿತ್ತು. ಆದರೆ 3 ಮೂರು ವರ್ಷಗಳು ಕಳೆದರೂ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಈಜು ಕಲಿಯಬೇಕು, ಈಜು ತರಬೇತಿಯನ್ನು ಪಡೆಯಬೇಕೆಂದರೆ ಆಸಕ್ತರು ಅನಿವಾರ್ಯವಾಗಿ ಗೋಣಿಕೊಪ್ಪಲು ಅಥವಾ ಮಡಿಕೇರಿಯಲ್ಲಿರುವ ಈಜುಕೊಳದ ಕಡೆ ಮುಖ ಮಾಡಬೇಕಿದೆ. ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ವಿರಾಜಪೇಟೆ ತಾಲೂಕಿನಲ್ಲಿ ಆದಷ್ಟು ಶೀಘ್ರವಾಗಿ ಇರುವ ಜಾಗದಲ್ಲೇ ಸುಸಜ್ಜಿತವಾದ ಈಜುಕೊಳವನ್ನು ನಿರ್ಮಿಸಬೇಕು ಎಂಬುದು ಕ್ರೀಡಾಪಟುಗಳ ಆಗ್ರಹವಾಗಿದೆ.
ಕಳೆದ 3 ವರ್ಷಗಳ ಹಿಂದೆ ಉದ್ಘಾಟನೆಗೊಂಡ ಒಳಾಂಗಣ ಕ್ರೀಡಾಂಗಣವು ಸಣ್ಣಪುಟ್ಟ ಕುಂದುಕೊರತೆಗಳಿಂದ ಕೂಡಿದೆ. ಅದನ್ನು ಇಂದಿನವರೆಗೂ ಸರಿಪಡಿಸಲಾಗಿಲ್ಲ. ನವೆಂಬರ್‌ನಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ರಜೆ ಘೋಷಣೆ ಮಾಡಿದ್ದರು. ಆ ಸಂದರ್ಭದಲ್ಲಿ ಯಾವುದೇ ಕಾಮಗಾರಿ ನಡೆಯಲಿಲ್ಲ. ಅದು ಹಾಗಿರಲಿ, ಮಲ್ಟಿಜಿಮ್ ಹಾಗೂ ಈಜುಕೊಳ ಆರಂಭದ ಮಾಡುವ ಕುರಿತು ಉದ್ಘಾಟನೆ ಸಂದರ್ಭ ನೀಡಿದ್ದ ಭರವಸೆ 3 ವರ್ಷವಾದರೂ ಈಡೇರಿಲ್ಲ. ಅಧಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಳ್ಳದಿದ್ದರೆ ಕ್ರೀಡಾ ಪ್ರೇಮಿಗಳು ಪ್ರತಿಭಟನೆ ನಡೆಸಬೇಕಾಗುತ್ತದೆ.
ಅಧ್ಯಕ್ಷ, ವಿರಾಜಪೇಟೆ ಬ್ಯಾಡ್ಮಿಂಟನ್ ಅಸೋಸಿಯೇಷನ್
ಕ್ರೀಡಾಂಗಣದ ಕೆಲವು ಕಡೆಗಳಲ್ಲಿ ರಿಪೇರಿ ಕಾರ್ಯಗಳು ನಡೆಯಬೇಕಿದೆ. ಗುತ್ತಿಗೆದಾರರು ರಿಪೇರಿ ಕೆಲಸಕ್ಕೆ ಬೇಕಾದ ಸಲಕರಣೆಗಳ ಅಳತೆಯನ್ನು ತೆಗೆದುಕೊಂಡಿದ್ದಾರೆ. ಸಲಕರಣೆಗಳು ಬೆಂಗಳೂರಿನಿಂದ ಬರಬೇಕಾಗಿದೆ. ಹಾಗಾಗಿ ಕಾಮಗಾರಿ ಆರಂಭಗೊಂಡಿಲ್ಲ. ಸಲಕರಣೆಗಳು ಬಂದ ತಕ್ಷಣ ಶೀಘ್ರ ಆರಂಭಗೊಳಿಸಲಾಗುವುದು. ಹಾನಿಗೊಳಗಾದ ಚಾವಣಿ ಶೀಟ್‌ಗಳನ್ನು ಬದಲಾಯಿಸಲಾಗುತ್ತದೆ. ಮಳೆ ನೀರಿನ ಸೋರಿಕೆಯಿಂದ ಹಾನಿಗೊಳಗಾದ ಗೋಡೆಗೆ ಬಣ್ಣ ಬಳಿಯಲಾಗುತ್ತದೆ. ಈ ಎಲ್ಲ ಕಾಮಗಾರಿಗಳೂ ಇಲಾಖೆ ಗಮನದಲ್ಲಿದೆ. ವ್ಯವಸ್ಥೆ ಆಗುವ ತನಕ ಕ್ರೀಡಾಪಟುಗಳು ಸಹಕಾರ ನೀಡಬೇಕಿದೆ.
ಉಪ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು