ಮಾಲಂಬಿ ವ್ಯಾಪ್ತಿಯಲ್ಲಿ ಅಕಾಲಿಕವಾಗಿ ಕಾಫಿ ಹಣ್ಣಾಗಿರುವುದು.
ಇದು ಕಾಫಿ ಕಾಯಿಗಟ್ಟುವ ಸಮಯ. ಆದರೆ, ಸೋಮವಾರಪೇಟೆ ತಾಲೂಕು ಶನಿವಾರಸಂತೆ ವ್ಯಾಪ್ತಿಯ ಮಾಲಂಬಿ, ಮುಳ್ಳೂರು, ನಿಡ್ತ ಭಾಗದ ಹಲವೆಡೆ ತೋಟಗಳಲ್ಲಿ ಅಕಾಲಿಕವಾಗಿ ಕಾಫಿ ಹಣ್ಣಾಗುತ್ತಿದ್ದು, ಬೆಳೆಗಾರರು ಹಣ್ಣು ಕೊಯ್ಲು ಮಾಡುವ ಜತೆಗೆ ಪಲ್ಪರ್ ಮಾಡಿದ ಕಾಫಿ ಬೀಜ ಒಣಗಿಸಲು ಹರಸಾಹಸ ಪಡುವಂತಾಗಿದೆ.
ಸಾಮಾನ್ಯವಾಗಿ ಕಾಫಿಗೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮುಂಗಾರು ಮಳೆ ಅವಶ್ಯ. ಈ ಸಮಯದಲ್ಲಿ ಬರುವ ಮಳೆಗೆ ಕಾಫಿ ಗಿಡದಲ್ಲಿ ಹೂವು ಅರಳಿ ಮಿಡಿಗಟ್ಟಿ ಕಾಯಿಗಟ್ಟುತ್ತದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಫಿ ಹಣ್ಣಾಗಿ ಕೊಯ್ಲಿಗೆ ಬರುವುದು ಸಹಜ ಪ್ರಕ್ರಿಯೆ. ಆದರೆ ಹವಾಮಾನ ಏರುಪೇರಿನಿಂದಾಗಿ ಈ ಭಾಗದ ಕೆಲವು ತೋಟದಲ್ಲಿ ಅರೆಬಿಕಾ ಕಾಫಿ ಹಣ್ಣಾಗಿದೆ. ಒಂದಡೆ ಅಲ್ಪಸ್ವಲ್ಪ ಮಳೆ ಬರುತ್ತಿದ್ದು, ಈ ಆತಂಕದ ನಡುವೆಯೇ ಬೆಳೆಗಾರರು ಹಣ್ಣು ಕೊಯ್ದು, ಪಲ್ಪರ್ ಮಾಡಿದಬೀಜವನ್ನು ಒಣಗಿಸಲು ಪರದಾಡುಂತಾಗಿದೆ. ಇದರೊಂದಿಗೆ ವಾಡಿಕೆಯಂತೆ ಈ ಅವಧಿಯಲ್ಲಿ ಕಾಯಿ ಕಚ್ಚುತ್ತಿರುವ ಕಾಫಿಯನ್ನೂ ನಿರ್ವಹಣೆ ಮಾಡಬೇಕಾದ ಸವಾಲು ಬೆಳೆಗಾರರದ್ದಾಗಿದೆ.
ಈ ಭಾಗದಲ್ಲಿ ಕಾಫಿ ಬೆಳೆಗರಾರು ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಈ ಬಾರಿ ಕಾಫಿ ಹೂವು ಕಟ್ಟುವ ಸಮಯದಲ್ಲಿ ಸರಿಯಾಗಿ ಮಳೆ ಬಾರದೆ ತೊಂದರೆ ಅನುಭವಿಸಿದ್ದರು. ಈಗ ಇರುವ ಅಲ್ಪ ಸ್ವಲ್ಪ ಕಾಫಿ ಅವಧಿಗೂ ಮುನ್ನ ಕಾಫಿ ಹಣ್ಣಾಗುತ್ತಿರುವದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗ ತೋಟದಲ್ಲಿ ಕಾಫಿಯನ್ನು ನಿರ್ವಹಣೆ ಮಾಡುವ ಸಮಯ. ಆದರೆ, ಅವಧಿಗೂ ಮುನ್ನವೇ ಕಾಫಿ ಹಣ್ಣಾಗುತ್ತಿರುವುದು ತಲೆನೋವಾಗಿದೆ. ಇದಕ್ಕೆ ಹವಾಮಾನ ವ್ಯತ್ಯಾಸ ಕಾರಣ ಎನ್ನಲಾಗುತ್ತಿದೆ. ನಮ್ಮ ವ್ಯಾಪ್ತಿಯ ಬಹಳಷ್ಟು ತೋಟದಲ್ಲಿ ಕಾಫಿ ಹಣ್ಣಾಗುತ್ತಿದ್ದು, ಪಲ್ಪರ್ ಮಾಡಿದ ಕಾಫಿ ಬೀಜವನ್ನು ಡ್ರೈಯರ್ ಮೂಲಕ ಒಣಗಿಸುತ್ತಿದ್ದೇವೆ.
ಎಸ್.ಜೆ.ಪ್ರಸನ್ನ ಕುಮಾರ್, ಕಾಫಿ ಬೆಳೆಗಾರ, ಮಾಲಂಬಿ.
ನಮ್ಮ ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಅಕಾಲಿಕ ಮಳೆಯಾಗಿತ್ತು. ಈ ಕಾರಣದಿಂದ ನಮ್ಮ ತೋಟದಲ್ಲಿ ಕೆಲವು ಗಿಡದಲ್ಲಿ ಕಾಫಿ ಹಣ್ಣಾಗಿದೆ. ಆದರೆ ಈಗ ಪಲ್ಪರ್ ಮಾಡಿದ ಕಾಫಿ ಬೀಜವನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ.
ಸಿ.ಕೆ.ಗಣೇಶ್, ನಿವೃತ್ತ ಸೈನಿಕ ಮತ್ತು ಬೆಳೆಗಾರ, ಮಾಲಂಬಿ.
ಮಳೆಗಾಲದಲ್ಲಿ ಕಪ್ಪು ಕೊಳೆ ರೋಗ ಹಾಗೂ ಕಾಯಿ ತೊಟ್ಟು ಕೊಳೆ ರೋಗ ಸಾಮಾನ್ಯವಾಗಿರುತ್ತದೆ. ರೋಗ ಕಂಡು ಬಂದರೆ, ರೋಗ ಪೀಡಿತ ಎಲೆಗಳು ಹಾಗೂ ಹಣ್ಣುಗಳನ್ನು ಸಂಗ್ರಹಿಸಿ ನಾಶ ಮಾಡುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ರೋಗಗಳ ಬೆಳವಣಿಗೆ ಕಡಿಮೆ ಮಾಡಲು ಶಿಲೀಂಧ್ರನಾಶಕ ಸಿಂಪಡಿಸಬೇಕು. ಕಾಫಿ ಬೋರ್ಡ್ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಅವರ ಸೂಚನೆಯಂತೆ ಕಾಫಿ ತೋಟ ನಿರ್ವಹಿಸಬೇಕು. ಈಗ ಗಿಡಗಳಲ್ಲಿ ಹಣ್ಣಾಗಿದ್ದರೆ ಅದನ್ನು ಕೂಯ್ಯಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಸಿಲು ಆರಂಭಗೊಂಡ ತಕ್ಷಣ ಬೆರ‌್ರಿ ಬೋರರ್ ರೋಗ ಹೆಚ್ಚಾಗಲಿದೆ. ಯಾವ ಗಿಡದಲ್ಲೂ ಹಣ್ಣನ್ನು ಬಿಡಬಾರದು.
ಡಾ.ವಿ.ಚಂದ್ರಶೇಖರ್,ಉಪನಿದೇಶಕ, ಕಾಫಿ ಮಂಡಳಿ, ಕೊಡಗು.