ಅಪರಾಧಿ ಪತಿಗೆ ಕಾರಾಗೃಹ ಶಿಕ್ಷೆ ಮತ್ತು ದಂಢ ವಿಧಿಸಿ ತೀರ್ಪು
ವಿರಾಜಪೇಟೆ: ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತು ಜೆಎಂಎಫ್‌ಸಿ ನ್ಯಾಯಾಲಯವು ಇತ್ತೀಚೆಗೆ ಅಪರಾಧಿ ಪತಿಗೆ ಕಾರಾಗೃಹ ಶಿಕ್ಷೆ ಮತ್ತು ದಂಢ ವಿಧಿಸಿ ತೀರ್ಪು ನೀಡಿದೆ.
ವಿರಾಜಪೇಟೆಯ ವಿದ್ಯಾನಗರದ ನಿವಾಸಿ ಎಂ.ಎ ಮುನೀರ್(42) ಶಿಕ್ಷೆಗೆ ಗುರಿಯಾದವರು. ಈತ ಜಾಕೀರಾ ಎಂಬ ಮಹಿಳೆಯನ್ನು ವಿವಾಹವಾಗಿ ಒಬ್ಬ ಮಗನಿದ್ದಾನೆ. 2020ರ ಡಿ.20ರಂದು ಬೆಳಗ್ಗೆ ಉಪಹಾರ ಮಾಡುತ್ತಿದ್ದ ವೇಳೆ ಮುನೀರ್ ಪತ್ನಿ ಜಾಕೀರಾಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಅಲ್ಲದೆ ಪತ್ನಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಜಾಕೀರಳು ತನ್ನ ಬಳಿಯಿದ್ದ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತಿದ್ದಳು. ಸೆರೆ ಹಿಡಿದ ಮೊಬೈಲ್ ಕಿತ್ತು ಎಸೆದು, ಕೊಲೆ ಮಾಡಲು ಮುಂದಾಗಿದ್ದ. ಮನೆಯ ಕೋಣೆಯಲ್ಲಿದ್ದ ಕತ್ತಿಯಿಂದ ಪತ್ನಿಯ ಮೇಲೆ ಪ್ರಹಾರ ಮಾಡಲು ಯತ್ನಿಸಿದ್ದನು. ತಡೆಯಲು ಯತ್ನಿಸಿದ ಜಾಕೀರಳ ಕೈಬೆರಳು ತುಂಡಾಗಿತ್ತು. ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಗೆ 6 ತಿಂಗಳು ಸೆರೆ ವಾಸ, 10 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದ್ದರೆ 2 ತಿಂಗಳ ಸೆರೆಮನೆ ವಾಸ ಶಿಕ್ಷೆ ವಿಧಿಸಿದೆ. ದಂಡದ ಮೊತ್ತ 15 ಸಾವಿರ ರೂ.ಗಳನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ವಿರಾಜಪೇಟೆ ಸರ್ಕಾರಿ ವಕೀಲೆ ಚೈತ್ರಾ ವಾದ ಮಂಡಿಸಿದರು.