ಆಂಧ್ರಪ್ರದೇಶದ ಕಡಪ ಜಿಲ್ಲೆ ಲಿಂಗಾಲA ಮಂಡಲA ವೇಲಿಡಾಲ ಗ್ರಾಮದ ವರದರಾಜ್ ಬೆಳೆದಿರುವ ಕೊಡಗಿನಲ್ಲಿ ಅಭಿವೃದ್ಧಿಪಡಿಸಿದ ಅವಾಕಡೋ
ಭಾನುವಾರ (ಆ.30) ಪ್ರಸಾರವಾದ ಮನ್ ಕಿ ಬಾತ್ 137ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವಾಕಡೋ (ಬೆಣ್ಣೆ ಹಣ್ಣು) ಕೃಷಿ ಮತ್ತು ಅದರ ಹೆಚ್ಚುತ್ತಿರುವ ಬೇಡಿಕೆಯ ಕುರಿತು ಪ್ರಸ್ತಾಪ ಮಾಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆ ಲಿಂಗಾಲA ಮಂಡಲA, ವೇಲಿಡಾಲ ಗ್ರಾಮದ ವರದರಾಜ್ ಎಂಬ ರೈತನ ಯಶೋಗಾಥೆಯನ್ನು ಅವರು ಹೊಗಳಿದ್ದಾರೆ. ವಿಶೇಷ ಎಂದರೆ ವರದರಾಜ್ ಕೊಡಗಿನಲ್ಲಿ ಅಭಿವೃದ್ಧಿಪಡಿಸಿರುವ ತಳಿ ಬೆಳೆಯುತ್ತಿದ್ದು, ಇವರಿಗೆ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರ ಅಗತ್ಯ ತಾಂತ್ರಿಕ ಮಾರ್ಗದರ್ಶನ ನೀಡುತ್ತಿದೆ.
ಗ್ರಾಮೀಣ ಭಾರತ ಇನ್ನು ಮುಂದೆ ಕೇವಲ ಕಚ್ಛಾ ವಸ್ತುಗಳನ್ನು ಉತ್ಪಾದಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಜೀವನಶೈಲಿಯ ಉತ್ಪನ್ನಗಳು, ಆರೋಗ್ಯ-ವೃದ್ಧಿಯ ಕೊಡುಗೆಗಳು, ಪರಿಸರ ಸೇವೆಗಳು ಮತ್ತು ಉತ್ತಮ ಗುಣಮಟ್ಟದ ಕೃಷಿ ರಫ್ತು ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ ಎಂದು ಮನ್ ಕಿ ಬಾತ್ 137ನೇ ಸಂಚಿಕೆಯಲ್ಲಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವೇಸಾಲು ಪುರೋ ಎಂಬವರ ಹವ್ಯಾಸದಿಂದ ಉದ್ಯಮದತ್ತ ಸಾಗಿದ ಹೂವಿನ ಕೃಷಿ, ಮೈಥಿಲಿ ಭುಯೆ ಎಂಬವರ ಅರಣ್ಯ ಸಂರಕ್ಷಣೆಯು ಜೀವನೋಪಾಯವನ್ನು ಪರಿಸರ ರಕ್ಷಣೆಯೊಂದಿಗೆ ಜೋಡಿಸುವುದರ ಶಕ್ತಿ ಹಾಗೂ ಆವಕಾಡೊ ಕೃಷಿ ಭಾರತೀಯ ರೈತರು ಪ್ರೀಮಿಯಂ ಮತ್ತು ಆರೋಗ್ಯ ಜಾಗೃತಿಯ ಮಾರುಕಟ್ಟೆಗಳಲ್ಲಿ ಉಂಟುಮಾಡುತ್ತಿರುವ ಪ್ರಭಾವಗಳ ಬಗ್ಗೆ ಸವಿಸ್ತಾರವಾಗಿ ಹೇಳಿಕೊಂಡಿದ್ದರು.
ಅವಾಕಡೋ ಕೃಷಿಯ ಬಗ್ಗೆ ಹೇಳುವಾಗ ಆಂಧ್ರಪ್ರದೇಶದಗ ಕಡಪದ ವರದರಾಜ್, ತಮಿಳುನಾಡಿನ ಕೊಡೈಕನಾಲ್‌ನ ಚಂದ್ರಶೇಖರನ್ ಹಾಗೂ ಚಿಕ್ಕಮಗಳೂರಿನ ರೈತರು ಕಾಫಿ ಮತ್ತು ಕಾಳುಮೆಣಸು ತೋಟಗಳ ನಡುವೆ ಉಪಬೆಳೆಯಾಗಿ ಬೆಳೆದು ಹೆಚ್ಚುವರಿ ಆದಾಯ ಗಳಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದರು. ಈ ಪೈಕಿ ಕಡಪದ ರೈತ ವರದರಾಜ್ ಸುಮಾರು 4 ಟನ್‌ಗಳಷ್ಟು ಅವಾಕಡೋ ಇಳುವರಿ ಪಡೆದು ನೇರವಾಗಿ ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಾ ಉತ್ತಮ ಲಾಭಗಳಿಸಿ ಮಾದರಿ ಕೃಷಿ ಮಾಡುತ್ತಿರುವುದನ್ನು ಶ್ಲಾಘಿಸಿದ್ದರು.
ವರದರಾಜ್ ಮೂಲತಃ ತಮ್ಮ ಜಮೀನಿನಲ್ಲಿ ರಾಗಿ, ಟೊಮೆಟೊ ಹಾಗೂ ಬಾಳೆಹಣ್ಣು ಬೆಳೆಯುತ್ತಿದ್ದವರು. ಸ್ನೇಹಿತರೊಬ್ಬರ ಜಮೀನಿನಲ್ಲಿ ಅವಕಾಡೊ ಕೃಷಿಯನ್ನು ಕಂಡು ಇವರ ಜಮೀನಿನಲ್ಲೂ ಬೆಣ್ಣೆಹಣ್ಣು ಬೆಳೆಯಲಾರಂಭಿಸಿದರು. ಹೊಸ ಬೆಳೆ, ವೈಜ್ಞಾನಿಕ ಸಲಹೆ ಹಾಗೂ ನೇರ ಮಾರುಕಟ್ಟೆ ವರದರಾಜ್ ಅವರ ಸಣ್ಣ ಜಮೀನಿನ ಆದಾಯವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕಥೆ ಆಧುನಿಕ ಭಾರತೀಯ ಕೃಷಿಯ ಅತ್ಯಂತ ಶಕ್ತಿಯುತ ಪ್ರವೃತ್ತಿಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಸರಿಯಾದ ತರಬೇತಿ ಮತ್ತು ನೇರ ಮಾರುಕಟ್ಟೆ ಸಂಪರ್ಕಗಳ ಬೆಂಬಲ ಸಿಕ್ಕಾಗ, ಸಣ್ಣ ರೈತರು ಹೆಚ್ಚು ಮೌಲ್ಯಯುತ ಬೆಳೆಗಳತ್ತ ಸಾಗುವ ಸಾಮರ್ಥ್ಯ ಹೊಂದುತ್ತಾರೆ ಎಂದಿದ್ದರು.
ಕಡಪದ ರೈತ ವರದರಾಜ್ ಯಶೋಗಾಥೆ ಹಿಂದೆ ಕೊಡಗಿನ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರದ ತಜ್ಞರ ವೈಜ್ಞಾನಿಕ ಮಾರ್ಗದರ್ಶನ ಸಾಕಷ್ಟು ಕೆಲಸ ಮಾಡಿದೆ. ಹಣ್ಣು ವಿಜ್ಞಾನಿಯೂ ಆಗಿರುವ ಕೇಂದ್ರ ನಿರ್ದೇಶಕ ಡಾ. ಬಿ.ಎಂ. ಮುರಳೀಧರ್ ಪ್ರತೀ ಹಂತದಲ್ಲೂ ವರದರಾಜ್ ಅವರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಾ ಬಂದಿರುವುದರ ಫಲವಾಗಿ ಕೊಡಗಿನಲ್ಲಿ ಬೆಳೆಯುವಂತೆ ಸಮೃದ್ಧವಾಗಿ ಕಡಪದಲ್ಲೂ ಅವಾಕಡೋ ಬೆಳೆದು ಈಗ ಪ್ರಧಾನಿ ಅವರಿಂದಲೂ ಗುರುತಿಸಿಕೊಳ್ಳುವಂತಾಗಿದೆ.
ಕೊಡಗಿನ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಅರ್ಕಾ ಸುಪ್ರೀಂ ತಳಿಯ ಗಿಡಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ವರದರಾಜು ಬೆಳೆಯುತ್ತಿದ್ದಾರೆ. ವಿಶೇಷವಾಗಿ ಮಲೆನಾಡು, ಕೊಡಗು ಮತ್ತು ಕರಾವಳಿ ಭಾಗಗಳ ಉತ್ತಮ ನೀರು ಹರಿಯುವ ಮಣ್ಣು ಹೊಂದಿರುವ ಉಷ್ಣವಲಯ ಹಾಗೂ ಉಪ-ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಅರ್ಕಾ ಸುಪ್ರೀಂ ಅವಾಕಡೋ ತಳಿಯನ್ನು ವರದರಾಜು ಯಶಸ್ವಿಯಾಗಿ ಬೆಳೆದು ಸಾಧನೆ ಮಾಡಿದ್ದಾರೆ.
ಅರ್ಕಾ ಸುಪ್ರೀಂ ತಳಿಯು ಉತ್ತಮ ಹಾಗೂ ನಿರಂತರ ಮತ್ತು ಹೆಚ್ಚು ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ನೆಟ್ಟ 8 ವರ್ಷಗಳ ನಂತರ ಪ್ರತಿ ಗಿಡದಿಂದ 80-100 ಕೆಜಿ ಇಳುವರಿ ಬರುತ್ತದೆ. ಹಣ್ಣುಗಳು ಮಧ್ಯಮದಿಂದ ದೊಡ್ಡ ಗಾತ್ರದಲ್ಲಿದ್ದು, ಸಾಮಾನ್ಯವಾಗಿ ಪ್ರತಿ ಹಣ್ಣು 400 - 450 ಗ್ರಾಂ. ವರೆಗೆ ತೂಗುತ್ತದೆ. ಹಣ್ಣಿನ ತಿರುಳು ದಪ್ಪವಾಗಿದ್ದು, ಉತ್ತಮ ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬು ಮತ್ತು ಹೆಚ್ಚಿನ ತೈಲದ ಅಂಶವಿದ್ದು, ಉತ್ತಮ ರುಚಿ ಮತ್ತು ಬೆಣ್ಣೆಯಂತಹ ಅನುಭವ ನೀಡುತ್ತದೆ. ಹಣ್ಣಿನ ಗಾತ್ರಕ್ಕೆ ಹೋಲಿಸಿದರೆ ಒಳಗಿರುವ ಬೀಜ ಚಿಕ್ಕದಾಗಿದ್ದು, ಹೆಚ್ಚಿನ ಪ್ರಮಾಣದ ತಿರುಳು ಸಿಗುತ್ತದೆ. ಹಣ್ಣಿನ ಸಿಪ್ಪೆ ಗಟ್ಟಿಯಾಗಿದ್ದು, ಹಣ್ಣಾಗುವಾಗ ನೇರಳೆ ಬಣ್ಣಕ್ಕೆ ತಿರುಗುತ್ತವೆ. ದೂರದ ಮಾರುಕಟ್ಟೆಗಳಿಗೆ ಹಾನಿಯಾಗದಂತೆ ಸಾಗಿಸಲು ಅನುಕೂಲಕರವಾಗಿದೆ.
ಕೊಡಗಿನಲ್ಲಿ ಅಭಿವೃದ್ಧಿಪಡಿಸಲಾದ ಅರ್ಕಾ ಸುಪ್ರೀಂ ತಳಿಯ ಅವಾಕಡೋವನ್ನು ದೇಶದ ಬೇರೆ ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ಕಡಪದ ರೈತ ವರದರಾಜ್ ಕೂಡ ನಮ್ಮ ಕೇಂದ್ರದಿAದಲೇ ಗಿಡಗಳನ್ನು ತೆಗೆದುಕೊಂಡು ಹೋಗಿದ್ದರು. ಅವಾಕಡೋ ಬೆಳೆಯುವ ಬಗ್ಗೆ ನಮ್ಮ ಕಡೆಯಿಂದಲೇ ಅವರಿಗೆ ಎಲ್ಲಾ ರೀತಿಯ ತಾಂತ್ರಿಕ ಮಾರ್ಗದರ್ಶನ ನೀಡಲಾಗಿದೆ. ಈ ಮೂಲಕ ಅವರು ಉತ್ತಮವಾಗಿ ಅವಾಕಡೋ ಬೆಳೆದು ಒಳ್ಳೆಯ ಸಾಧನೆ ಮಾಡಿದ್ದಾರೆ. ಪ್ರಧಾನಿಯವರೂ ಈ ಸಾಧನೆ ಗುರುತಿಸುವಂತಾಗಿದೆ.
ಅವಕಡೋ ಸ್ಟೋರಿಗೆ ಕೃಷಿಕರ ಅಭಿಪ್ರಾಯ: ಅಚಾಕಡೋಕ್ಕಾಗಿ ಬೆಂಗಳೂರು ಐಐಎಚ್‌ಆರ್ ಸಂಪರ್ಕಿಸಿದಾಗ ಅವರು ಚೆಟ್ಟಳ್ಳಿಗೆ ಕಳಿಸಿದರು. 2022ಕ್ಕೆ ಇಲ್ಲಿಂದ 300 ಗಿಡಗಳನ್ನು ತೆಗೆದುಕೊಂಡು ಹೋಗಿ ನಾಟಿ ಮಾಡಿದೆವು. ಈಗ 250 ಗಿಡಗಳು ಉಳಿದಿವೆ. ನಾಟಿ ಮಾಡಿದ ಮೂರನೇ ವರ್ಷಕ್ಕೆ 9 ಲಕ್ಷ ರೂ. ಆದಾಯ ಬಂದಿದೆ. ಟೊಮೆಟೋ, ಬಾಳೆಗಿಂತ ಹೆಚ್ಚಿನ ಲಾಭ ಬಂದಿದೆ. ನಮ್ಮನ್ನು ಪ್ರಧಾನಿ ಮೋದಿ ಗುರುತಿಸಿರುವುದು ಖುಷಿಯಾಗಿದೆ. ಹೊಸದಾಗಿ ಮತ್ತೆ ಏನಾದರೂ ಮಾಡಲು ಪ್ರೇರಣೆ ಸಿಕ್ಕಿದೆ