ಮೈಸೂರಿನ ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ನಡೆದ ಸಾಂಪ್ರದಾಯಿಕ ಕೈಮುಹೂರ್ತ ಸಮಾರಂಭವನ್ನು ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿದರು. ಕೊಂಬಾರನ ಬಸಪ್ಪ, ಕೆ.ವಿ.ಶ್ರೀಧರ್, ಪೊನ್ನೆಟಿ ನಂದಾ, ಚಂಡೀರ ಬಸಪ್ಪ, ಶಂಕರನ ಶ್ಯಾಮಲಾ ಇತರರಿದ್ದರು. 
ಕೊಡಗು

ಹಿರಿಯರ ಮಾರ್ಗದರ್ಶನದೊಂದಿಗೆ ಸಂಸ್ಕೃತಿ ಉಳಿಸಿ ಬೆಳೆಸಿ

ನಾಪೋಕ್ಲು: ಯುವ ಪೀಳಿಗೆ ಹಿರಿಯರನ್ನು ಗೌರವಿಸುವ ಮೂಲಕ, ಅವರಿಂದ ಮಾರ್ಗದರ್ಶನವನ್ನು ಪಡೆದು ಸಂಸ್ಕೃತಿ ಸಂಪ್ರದಾಯಗಳನ್ನು ಕಲಿತು ಮುಂದಿನ ಪೀಳಿಗೆಗೆ ಪಸರಿಸಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಮೈಸೂರಿನ ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಪ್ರದಾಯಿಕ ಕೈಲ್ ಮುಹೂರ್ತ ಹಬ್ಬದ ಸಮಾರಂಭದಲ್ಲಿ ಮಾತನಾಡಿ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಅತ್ಯಂತ ಮೌಲ್ಯಯುತವಾಗಿದ್ದು ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ.ಶ್ರೀಧರ್ ಮಾತನಾಡಿ, ಪ್ರತಿಯೊಬ್ಬರೂ ರೈತರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಹಿಳಾ ಸಂಘಟನೆಗಳನ್ನು ಪ್ರೋತ್ಸಾಹಿಸುವ ಮೂಲಕ ಸಮುದಾಯದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು. ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಪ್ರೋತ್ಸಾಹಿಸಿ ಸಮಾಜ ಮತ್ತು ದೇಶ ಸೇವೆಗೆ ಸಜ್ಜುಗೊಳಿಸಬೇಕು ಎಂದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪೊನ್ನೆಟಿ ನಂದಾ ಸ್ವಾಗತಿಸಿದರೆ, ಚಂಡೀರ ಬಸಪ್ಪ ಹಾಗೂ ಶಂಕರನ ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು. ಚಪ್ಪೇರ ಯಮುನಾ ವಂದಿಸಿದರು.
ಇದಕ್ಕೂ ಮೊದಲು ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಸಮುದಾಯದ ಬಂಧುಗಳಿಗೆ ಕ್ರೀಡಾಕೂಟವನ್ನು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.