ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಗಾರದಕ್ಕೆ ಅಶೋಕ ಸಂಗಪ್ಪ ಅವರು ಚಾಲನೆ ನೀಡಿದರು. ಸದಾನಂದ ಮಾವಜಿ, ಪ್ರೊ.ಮೆರಾಘವ.ಬಿ ಇತರರು ಇದ್ದರು.
- ಸಣ್ಣ ಸಣ್ಣ ಭಾಷೆ ಉಳಿಸಿ, ಬೆಳೆಸಿ
- ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರದಲ್ಲಿ ಅಶೋಕ ಸಂಗಪ್ಪ
ಮಡಿಕೇರಿ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗವು ಬಹುಭಾಷೆ ಮತ್ತು ಬಹುಸಂಸ್ಕೃತಿ ಒಳಗೊಂಡಿರುವ ಪ್ರದೇಶವಾಗಿದೆ. ಆ ಹಿನ್ನೆಲೆಯಲ್ಲಿ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ತಿಳಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಬಹುಭಾಷೆ ಮತ್ತು ಬಹುಸಂಸ್ಕೃತಿ ಇರುವುದನ್ನು ಕಾಣಬಹುದಾಗಿದೆ. ನಾಡಿನ ಭಾಷೆಯ ಜೊತೆಗೆ ಹಲವು ಸ್ಥಳೀಯ ಭಾಷೆ ಕಾಣಬಹುದಾಗಿದೆ. ಬಹುದೊಡ್ಡ ಭಾಷೆಯಾದ ಕನ್ನಡ ಭಾಷೆಯ ಜೊತೆಗೆ ಸಣ್ಣ ಸಣ್ಣ ಸ್ಥಳೀಯ ಭಾಷೆಗಳನ್ನು ಸಹ ಉಳಿಸಬೇಕು. ಆ ನಿಟ್ಟಿನಲ್ಲಿ ಅರೆಭಾಷೆಗೆ ತನ್ನದೇ ಆದ ವೈವಿದ್ಯಮಯ ಭಾಷಾ ಶ್ರೀಮಂತಿಕೆ ಇದ್ದು, ಅದನ್ನು ಉಳಿಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಕರೆ ನೀಡಿದರು.
ಅರೆಭಾಷೆಯನ್ನು ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಮಾತನಾಡುವ ಪ್ರದೇಶವಾಗಿದೆ. ಸಂವಿಧಾನದ ೮ನೇ ಪರಿಚ್ಛೇದದಲ್ಲಿ ೨೨ ಭಾಷೆಗಳು ಇದ್ದು, ಇವುಗಳಲ್ಲಿ ಉತ್ತರ ಭಾರತದ ೧೮ ಭಾಷೆಗಳು ಹಾಗೂ ದಕ್ಷಿಣದ ನಾಲ್ಕು ಭಾಷೆಗಳು ಸಂವಿಧಾನ ೮ ನೇ ಪರಿಚ್ಚೇದದಲ್ಲಿ ಸೇರಿವೆ.ಅರೆಭಾಷೆ ಬಗ್ಗೆ ಅಭಿಮಾನ ಇರಬೇಕು. ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಜಾನಪದ ಇವುಗಳ ಅಧ್ಯಯನ, ಸಂಶೋಧನೆ ಇನ್ನಷ್ಟು ಹೆಚ್ಚು ಕೈಗೊಂಡು ಅರೆಭಾಷೆಯನ್ನು ಮತ್ತಷ್ಟು ಮುಂಚೂಣಿಗೆ ತರುವಂತಾಗಬೇಕು ಎಂದು ಸಲಹೆ ಮಾಡಿದರು.
ಮಾತೃ ಭಾಷೆ ಜೊತೆಗೆ ಸಂಘಟಿತ ಉಪ ಭಾಷೆಯನ್ನು ಬೆಳೆಸಬೇಕು. ನಾಡಿನ ಭಾಷೆ ಜೊತೆಗೆ ಇತರೆ ಭಾಷೆಯನ್ನು ಕಲಿಸಬೇಕು. ಅರೆಭಾಷೆಯನ್ನು ಶ್ರೀಮಂತಗೊಳಿಸಬೇಕು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಶಾಲಾ-ಕಾಲೇಜುಗಳಲ್ಲಿ ಅರೆಭಾಷೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಂಬಂಧ ಅರೆಭಾಷೆ ಸಂಘಗಳನ್ನು ರಚಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಹ ಕಾಲೇಜುಗಳಲ್ಲಿ ಅರೆಭಾಷೆ ಸಂಘಗಳ ರಚನೆಗೆ ಸಹಕರಿಸುವಂತೆ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಅವರಲ್ಲಿ ಮನವಿ ಮಾಡಿದರು.
ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಸಮಾಜ ಸೇವಕ ಚಂಡೀರ ಕೆ.ಬಸಪ್ಪ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಜಾನಪದ ಕಲೆಗಳನ್ನು ಉಳಿಸಬೇಕು. ಅರೆಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಪ್ರಯತ್ನಿಸಬೇಕು ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೆರಾಘವ.ಬಿ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರಗಳು ಉಳಿಯಬೇಕು. ಅರೆಭಾಷೆಯ ಉತ್ತಮ ಪುಸ್ತಕಗಳು ಇತರ ಭಾಷೆಗಳಿಗೆ ಅನುವಾದ ಆಗಬೇಕು. ಇದರಿಂದ ಭಾಷಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಸಲಹೆ ಮಾಡಿದರು.
ಬರಹಗಾರರಾದ ಸುಶೀಲಾ ಕುಶಾಲಪ್ಪ ಅಂಬೆಕಲ್ಲು ಮಾತನಾಡಿ, ಅರೆಭಾಷೆ ಮಾತನಾಡುವ ನೆಲ, ಸಂಸ್ಕೃತಿ ಮತ್ತು ಗುರುತನ್ನು ಕಾಪಾಡಿಕೊಂಡು ಹೋಗಬೇಕು. ಭಾಷೆಯು ಕೇವಲ ಮಾತನಾಡಲು ಇರುವ ಒಂದು ಸಾಧನ ಮಾತ್ರವಲ್ಲ, ಇದು ಒಂದು ರೀತಿ ಜೀವನ ಪರಂಪರಾ ಶೈಲಿ ಇದ್ದಂತೆ ಎಂದು ಅವರು ಪ್ರತಿಪಾದಿಸಿದರು.
ಅರೆಭಾಷೆ ಪಾರಂಪರಿಕ ಜ್ಞಾನದ ಜಾನಪದ ಕಲೆ ಹಾಡುಗಳನ್ನು ಸಂರಕ್ಷಿಸಬೇಕಿದೆ. ಹಬ್ಬ ಹರಿದಿನಗಳು, ಮದುವೆಗಳಲ್ಲಿ ಹೇಳುವ ಜಾನಪದ ಪದಗಳು, ಸೋಬಾನೆ ಪದಗಳು, ಅರೆಭಾಷೆ ಸಂಸ್ಕೃತಿ ಔನತ್ಯಕ್ಕೆ ಕೊಂಡ್ಯೊಯುತ್ತವೆ ಎಂದು ವಿವರಿಸಿದರು.
ಮೈಸೂರು ಯುವರಾಜ ಕಾಲೇಜು ಮತ್ತು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಚೆರಿಯಮನೆ ಬೆಳ್ಯಪ್ಪ ಡಾ.ರಾಮಚಂದ್ರ ಅವರು ಅರೆಭಾಸಿಕರ ಹಬ್ಬ ಮತ್ತು ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿ, ಅರೆಭಾಷಿಕರಲ್ಲಿ ಹರಿಸೇವೆಯು ಮೂಲ ಸಂಸ್ಕೃತಿಯ ಹಬ್ಬವಾಗಿದೆ. ಗೌಡ ಸಂಸ್ಕೃತಿಯ ಪ್ರಾಚೀನತೆ, ಪ್ರಕೃತಿಯ ಆರಾಧಕರಾಗಿದ್ದಾರೆ, ಉಳಿದಂತೆ ಎಲ್ಲಾ ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುತ್ತಾರೆ ಎಂದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಪಿ.ಲಾವಣ್ಯ ಅವರು ಅರೆಭಾಸೆ ನೆಲೆ ಮತ್ತು ಅದರ ಬೆಳವಣಿಗೆ ಸಾಧ್ಯತೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಸದಸ್ಯ ಸಂಚಾಲಕ ಗೋಪಾಲ್ ಪೇರಾಜೆ ಮಾತನಾಡಿ, ಅರೆಭಾಷೆಯ ಐತಿಹಾಸಿಕ ಹಿನ್ನೆಲೆ, ಭಾಷೆ ಉಳಿಸಿ ಬೆಳೆಸುವಲ್ಲಿ ಪದಗಳ ರಚನೆ, ಸಂರಕ್ಷಣೆ, ಜತೆಗೆ ಅರೆಭಾಷೆ ಮಾತನಾಡುವ ಎಲ್ಲಾ ಜನರನ್ನು ಒಟ್ಟುಗೂಡಿಸಿ, ಭಾಷೆ ಅಭಿವೃದ್ಧಿಗೆ ಅಕಾಡೆಮಿ ಶ್ರಮಿಸುತ್ತಿದೆ ಎಂದರು.
ಪದಕಟ್ಟು ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಸಂಜೀವ ಕುದ್ಪಾಜೆ, ಸಾಹಿತಿ ಹಾಗೂ ಕವಯತ್ರಿ ಲೀಲಾವತಿ ದಾಮೋದರ ಕುಂದಲ್ಪಾಡಿ ಅವರು ಪಾಲ್ಗೊಂಡಿದ್ದರು. ಅಕಾಡೆಮಿ ಸದಸ್ಯರಾದ ಸೂದನ ಎಸ್.ಈರಪ್ಪ, ಲತಾ ಪ್ರಸಾದ್ ಕುದ್ಪಾಜೆ, ಕುದ್ಪಾಜೆ ಕೆ.ಪ್ರಕಾಶ್, ವಿನೋದ್ ಮೂಡಗದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.