ಮಳೆಯ ಸಂದರ್ಭ ನದಿ ತುಂಬಿ ರಸ್ತೆ ಮೇಲೆ ಹರಿಯುವ ನೀರು
ಬೇಸಿಗೆಯ ಉರಿಬಿಸಿಲಿನಿಂದ ತತ್ತರಿಸಿರುವ ಜನತೆಗೆ ಹವಾಮಾನಾ ಇಲಾಖೆ ಖುಷಿಯ ಸುದ್ದಿ ನೀಡಿದ್ದು, ಮುಂಗಾರು ಆರಂಭಕ್ಕೆ ದಿನಗಣನೆ ಶುರುವಾಗಿರುವ ಬಗ್ಗೆ ಮುನ್ಸೂಚನೆ ಕೊಡಲಾಗಿದೆ. ಈ ಬೆನ್ನಲ್ಲೇ ಮಳೆಗಾಲ ಎದುರಿಸಲು ಕೊಡಗಿನಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಮಂಗಳವಾರ (ಮೇ 5) ನಡೆದ ಕೆಡಿಪಿ ಸಭೆಯಲ್ಲೂ ಈ ವಿಷಯ ಪ್ರಮುಖವಾಗಿ ಚರ್ಚೆಯಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊಡಗಿನಲ್ಲಿ ಮತ್ತೊಂದು ಮಳೆಗಾಲ ಆರಂಭದ ಸೂಚನೆಗಳು ಕಂಡುಬರುತ್ತಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ತಿಂಗಳ ಮಧ್ಯಭಾಗದಲ್ಲಿ ಮುಂಗಾರು ಮಾರುತ ಅಂಡೋಮಾನ್-ನಿಕೋಬಾರ್ ಪ್ರವೇಶ ಮಾಡಲಿದ್ದು, ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಕೊಡಗು ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಿಸುವ ಸಾಧ್ಯತೆ ಇದೆ. ಹಾಗಾಗಿ ಮಳೆಗಾಲ ಎದುರಿಸಲು ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಕೊಡಗಿನಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮಳೆಗಾಲ ಶುರುವಾದರೆ ಜುಲೈ, ಆಗಸ್ಟ್ ತಿಂಗಳಿನಲ್ಲಿ ವರುಣನ ಅಬ್ಬರ ಮತ್ತಷ್ಟು ಬಿರುಸು ಪಡೆದುಕೊಳ್ಳುತ್ತದೆ. 2018, 2019 ಹಾಗೂ 2020ರಲ್ಲಿ ಆಗಸ್ಟ್ ತಿಂಗಳಿನಲ್ಲೇ ಕೊಡಗಿನಲ್ಲಿ ಪ್ರಾಕÊತಿಕ ವಿಕೋಪ ಸಂಭವಿಸಿತ್ತು. 2018ರಲ್ಲಿ ಹಿಂದೆAದೂ ನೋಡಿರದಂತಹ ರೀತಿಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಬೆಟ್ಟ ಕುಸಿದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. 2019ರಲ್ಲಿ ಮೇಘಸ್ಫೋಟದ ರೀತಿಯಲ್ಲಿ ಮಳೆ ಸುರಿದು ನದಿಗಳಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಮಂದಿ ಬೀದಿಗೆ ಬಿದ್ದಿದ್ದರು. 2020ರಲ್ಲೂ ಬಹುತೇಕ ಇದೇ ಪರಿಸ್ಥಿತಿ ಪುನರಾವರ್ತನೆ ಆಗಿತ್ತು. ಈ ಮೂರು ವರ್ಷಗಳಲ್ಲಿ ಭಾರೀ ಹಾನಿ ಆಗಿದ್ದ ಹಿನ್ನೆಲೆಯಲ್ಲಿ ಮಳೆಗಾಲವನ್ನು ಆತಂಕದಿAದಲೇ ಎದುರು ನೋಡುವ ಪರಿಸ್ಥಿತಿ ಕೊಡಗಿನಲ್ಲಿ ಇದೆ.
2018ರ ಕುಂಭದ್ರೋಣ ಮಳೆ ಮತ್ತು ಪ್ರಾಕೃತಿಕ ವಿಕೋಪದಿಂದ ಉಂಟಾದ ಭಾರಿ ನಷ್ಟದಿಂದಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ನಂತರದ ವರ್ಷಗಳಲ್ಲಿ ಮಳೆಗಾಲ ಆರಂಭಕ್ಕೂ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದು, ಹಾನಿಯ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಆ ಸಂದರ್ಭದಲ್ಲಿ ಕಲಿತ ಪಾಠಗಳು ಅಪಾಯ ತಡೆಗಟ್ಟಲು ಈಗ ಮಾರ್ಗದರ್ಶನ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದು ರೂಢಿಗೆ ಬಂದಿದೆ.
ಕಳೆದ ವರ್ಷದ ಮಳೆಗಾಲದಲ್ಲಿ ಹಾಳಾದ ಬಹುತೇಕ ರಸ್ತೆಗಳ ದುರಸ್ತಿ ಕಾರ್ಯ ಇನ್ನು ಕೂಡ ನಡೆದಿಲ್ಲ. ಹಾಗಾಗಿ ಮಳೆಗಾಲ ಶುರುವಾಗುವುದರೊಳಗೆ ರಸ್ತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಳೆ ನಿಂತ ಕೂಡಲೇ ಕಾಮಗಾರಿ ಶುರುಮಾಡಲಾಗುವದು ಎಂದು ಕಳೆದ ಬಾರಿ ಡಿಸೆಂಬರ್ ತನಕವೂ ಮುಂದೂಡಿಕೊAಡೇ ಬಂದಿದ್ದ ಅಧಿಕಾರಿಗಳು ಇಲ್ಲಿಯ ತನಕ ಕೆಲಸದಲ್ಲಿ ಹೆಚ್ಚಿನ ಪ್ರಗತಿಯನ್ನೇ ಸಾಧಿಸಿಲ್ಲ. ಇನ್ನು 20 ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ಕೆಲಸಗಳು ಆಗುತ್ತವೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಮಳೆಗಾಲದಲ್ಲಿ ಗಾಳಿ, ಮಳೆಗೆ ಮರ ಬಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಆಗಾಗ್ಗೆ ವಿದ್ಯುತ್ ಕಡಿತ ಆಗುವುದು ಕೊಡಗಿನಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ ಆಗಿದೆ. ಅದರಲ್ಲೂ ಕುಗ್ರಾಮಗಳಲ್ಲಿ ವಾರಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತ ಆಗಿಬಿಟ್ಟಿರುತ್ತದೆ. ಆದರೆ ಕಳೆದ 2 ವರ್ಷಗಳಿಂಧ ಸೆಸ್ಕ್ ಸೇವೆಯಲ್ಲಿ ಸ್ವಲ್ಪ ಸುಧಾರಣೆ ಕಂಡುಬAದಿದ್ದು, ಮಳೆಗಾಲಕ್ಕೆ ಬೇಕಾದ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಸಮಸ್ಯೆ ಕಂಡುಬರುತ್ತಿಲ್ಲ. ಮಳೆಗಾಲದ ಸಂದರ್ಭದಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ಕೂಡ ಕರೆಯಿಸಿಕೊಳ್ಳಲಾಗುತ್ತದೆ.
ಕೃಷಿ ಇಲಾಖೆಯೂ ಮಳೆಗಾಲಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿ ಆಗುವುದರಿಂದ ಈಗಾಗಲೇ ರಸಗೊಬ್ಬರದ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,453 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಇದುವರೆಗೆ 40,971 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಇದರಲ್ಲಿ 2,189 ರಸಗೊಬ್ಬರ ವಿತರಿಸಲಾಗಿದೆ. ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜವನ್ನೂ ತರಿಸಿಕೊಳ್ಳಲಾಗುತ್ತಿದೆ. ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ.
ನದಿ ಬದಿಯ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದು ಮಳೆಗಾಲದ ಸಾಮಾನ್ಯ ವಿದ್ಯಮಾನವಾಗಿದ್ದು, ಅಂಥ ಪ್ರದೇಶದಲ್ಲಿ ವಾಸ ವಿರುವವರಿಗೂ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
"
ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜಿಲ್ಲೆಯಾದ್ಯಂತ ಲೋಕೋಪಯೋಗಿ, ಪಂಚಾಯತ್ ರಾಜ್ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವುದು ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕು. ರಸ್ತೆ ನಿರ್ವಹಣೆಗಾಗಿ ಸರ್ಕಾರ ನೂರಾರು ಕೋಟಿ ರೂ. ನೀಡಿದೆ. ಆದರೆ ಎಂಜಿನಿಯರ್‌ಗಳು ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವುದು ಸರಿಯಲ್ಲ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದAತೆ ಗಮನಹರಿಸಬೇಕು. ಈ ಸಂಬAಧ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
— ಎನ್.ಎಸ್. ಬೋಸರಾಜು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ
"
ಮಳೆಗಾಲ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಐಗೂರು ಸೇತುವೆ ಶೀಘ್ರ ನಿರ್ಮಾಣ ಮಾಡಬೇಕು. ಗಾಳಿಬೀಡು ರಸ್ತೆ ಸರಿಪಡಿಸಬೇಕು. ಮುಟ್ಲು, ಹಮ್ಮಿಯಾಲ, ದೇವಸ್ತೂರು, ಹಂಚಿನಾಡು ಮತ್ತಿತರ ರಸ್ತೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
"
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಮೇ 13ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ತುಂತುರುವಿನಿAದ ಸಾಧಾರಣ ಮಳೆ ಬರುವ ನಿರೀಕ್ಷೆ ಇದೆ. 35-36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 21-22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬರುವ ಸಾಧ್ಯತೆ ಇದೆ. ಮಳೆಯಾಗುವ ಸಾಧ್ಯತೆ ಇರುವುದರಿಂದ ಮಳೆಗೂ ಮೊದಲು ನೀರಾವರಿ ಮತ್ತು ರಸಗೊಬ್ಬರ ಹಾಕುವುದನ್ನು ನಿಲ್ಲಿಸಬೇಕು. ಮಳೆಯ ನಂತರವೇ ರಸಗೊಬ್ಬರ ಹಾಕಬೇಕು.
— ಡಾ. ಜಿ.ವಿ. ಸುಮಂತ್‌ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು
"
======= ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಇದ್ದು, ಬೇಡಿಕೆಯಂತೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಯೂರಿಯಾ, ಡಿಐಪಿ, ಎಂಒಪಿ, ಕಾಂಪ್ಲೆಕ್ಸ್ ಸೇರಿದಂತೆ ಎಲ್ಲಾ ರೀತಿಯ ರಸಗೊಬ್ಬರವನ್ನು ತರಿಸಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,453 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಇದುವರೆಗೆ 40,971 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಇದರಲ್ಲಿ 2,189 ರಸಗೊಬ್ಬರ ವಿತರಿಸಲಾಗಿದೆ.
— ಚಂದ್ರಶೇಖರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಕೊಡಗು