ಕರ್ನಾಟಕ ಬ್ಯಾರಿ ಅಕಾಡೆಮಿ ಮತ್ತು ಕೊಡಗು ವೆಲ್ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಮಾತನಾಡಿದರು. ಬಿ.ಎ ಶಂಷುದ್ದೀನ್, ಎಂ.ಬಿ. ನಾಸಿರ್ ಅಹಮದ್, ಬಶೀರ್ ಅಹಮದ್, ಮನ್ಸೂರ್ ಅಹಮದ್ ಮತ್ತಿತರರು ಇದ್ದರು. 
ಕೊಡಗು

ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಮಡಿಕೇರಿ:
 ಬ್ಯಾರಿ ಅಕಾಡೆಮಿ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಒಂದು ಸಂಸ್ಥೆಗೆ ಸೀಮಿತ ಅಲ್ಲ ಬದಲಾಗಿ ಬ್ಯಾರಿ ಬಾಷೆ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆಯಾಗಿದೆ ಎಂದು ಹಿರಿಯ ಸಾಹಿತಿ ಬಿ.ಎ ಶಂಷುದ್ದೀನ್ ಹೇಳಿದರು. ಮಡಿಕೇರಿಯಲ್ಲಿ ಏ.28ಕ್ಕೆ ಕರ್ನಾಟಕ ಬ್ಯಾರಿ ಅಕಾಡೆಮಿ ಮತ್ತು ಕೊಡಗು ವೆಲ್ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು.
 ಸಮ್ಮೇಳನ ಹಿನ್ನೆಲೆಯಲ್ಲಿ ಸಾಹಿತ್ಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಸಮ್ಮೇಳನದ ಭಾಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಮಹಿಳೆಯರು, ಮಕ್ಕಳು, ಹಾಗೂ ಯುವಕರಿಗೆ ವಿವಿಧ ಸ್ಪರ್ಧೆಗಳು, ಸಮ್ಮೇಳನದಂದು ಕವಿಗೋಷ್ಠಿ, ವಿಚಾರ ಸಂಕಿರಣ, ವಿಚಾರ ಗೋಷ್ಠಿ ಕಾರ್ಯಕ್ರಮಗಳು ನಡೆಯಲಿದೆ ಎಂದರು. 
 ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಮಾತಾನಾಡಿ ಬ್ಯಾರಿ ಸಮುದಾಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಸಮುದಾಯದಲ್ಲಿ ಪ್ರತಿಭಾವಂತ ನಾಯಕರುಗಳಿದ್ದರೂ ಸರ್ಕಾರದ ನಿಗಮ ಮಂಡಲಿಗಳಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿರುವುದು ಬಹು ದೊಡ್ಡ ದುರಂತ. ಆದ್ದರಿಂದ ಬ್ಯಾರಿ ಸಮುದಾಯ ಒಗ್ಗಟ್ಟನ್ನು ಪ್ರದರ್ಶಿಸುವುದರೊಂದಿಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ನಡೆಯಲಿರುವ ಬ್ಯಾರಿ ಸಮ್ಮೇಳನ ಇದಕ್ಕೆ ಪೂರಕವಾಗಿರಲಿ ಎಂದು ಹೇಳಿದರು. 
 ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಬ್ಯಾರೀಸ್ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ನಾಸಿರ್ ಅಹಮದ್ ಮಾತನಾಡಿ ಬ್ಯಾರಿ ಸಮುದಾಯ ಮಂಗಳೂರು, ಚಿಕ್ಜಮಗಳೂರು, ಬೆಂಗಳೂರು ಸೇರಿದಂತೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಕೊಡಗಿನ ಮೂಲೆ ಮೂಲೆಗಳಲ್ಲಿ ಬ್ಯಾರಿ ಸಮುದಾಯ ಜೀವನ ಸಾಗಿಸುತ್ತಿದೆ. ಕೂಲಿ ಕಾರ್ಮಿಕರಿಂದ ಹಿಡಿದು ಉನ್ನತ ಅಧಿಕಾರಿಗಳಾಗಿ ಕೆಲಸ ಮಾಡುವವರು ಇದ್ದಾರೆ. ಆದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದೆ ಇರುವ ಬ್ಯಾರಿ ಸಮುದಾಯವನ್ನು ಮುನ್ನಲೆಗೆ ತರುವ ಕಾರ್ಯ ಆಗಬೇಕಿದೆ. ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಭವನಕ್ಕಾಗಿ ಸರ್ಕಾರದ ಗಮನ ಸೆಳೆಯಬೇಕಾಗಿದೆ. ಇದಕ್ಕಾಗಿ ಮಡಿಕೇರಿಯಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ನೇಳನಕ್ಕೆ ಸರ್ವರೂ ಸಹಕರಿಸಬೇಕು ಎಂದರು. 
 ನಗರಸಭಾ ಸದಸ್ಯರಾದ ಬಶೀರ್ ಅಹಮದ್, ಮನ್ಸೂರ್ ಅಹಮದ್ ಮಾತನಾಡಿದರು.
ಅಕಾಡೆಮಿ ಮಾಜಿ ಸದಸ್ಯ ಎಸ್.ಐ. ಮುನೀರ್ ಅಹ್ಮದ್. ಎಂ.ಎ. ನಾಸಿರ್, ನಗರಸಭಾ ಸದಸ್ಯ ಎಂ.ಎ. ಮುಸ್ತ್ತಾಫ, ನಾಮ ನಿರ್ದೇಶಿತ ನಗರ ಸಭಾ ಸದಸ್ಯ ಯಾಕೂಬ್, ಬ್ಯಾರಿ ಅಕಾಡಮಿ ಮಾಜಿ ಸದಸ್ಯ ಅಬ್ದುಲ್ಲಾ ಶರೀಫ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
 ಇದೇ ವೇಳೆ ಸ್ವಾಗತ ಸಮಿತಿ, ಪ್ರಚಾರ ಸಮಿತಿ, ಕ್ರೀಡಾ ಸಮಿತಿ, ಹಣಕಾಸು ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ ಹಾಗೂ ಸ್ವಯಂ ಸೇವಾ ಸಮಿತಿಗಳನ್ನು ರಚಿಸಲಾಯಿತು.