ಸೋಮವಾರಪೇಟೆ ತಾಲೂಕಿನ ಬಿಟಿಸಿಜಿ ಕಾಲೇಜಿನಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ ಅಗ್ನಿ ಅವಗಡ ಜಾಗೃತಿ ಬಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾಧಿಕಾರಿ ಎಚ್.ಎನ್.ಲಕ್ಷ್ಮೀಕುಮಾರ್ ಮಾತನಾಡಿದರು. ಹರ್ಷ, ಶಿವಮೂರ್ತಿ, ಹುಚ್ಚೇಗೌಡ, ನಾಗೇಶ್ ಇದ್ದರು. 
ಕೊಡಗು

ಅಗ್ನಿ ಅವಘಡ ಭಯಕ್ಕಿಂತ ಮುನ್ನೆಚ್ಚರಿಕೆ ಅವಶ್ಯ

ಸೋಮವಾರಪೇಟೆ: ಅಗ್ನಿ ಅವಘಡಗಳ ಬಗ್ಗೆ ಅನವಶ್ಯಕ ಭಯಕ್ಕಿಂತ ಮುನ್ನೆಚ್ಚರಿಕೆ ಮತ್ತು ಸರಿಯಾದ ಜ್ಞಾನವೇ ಜೀವ ರಕ್ಷಣೆಗಾಗಿ ಅತ್ಯಂತ ಮುಖ್ಯವೆಂದು ಸೋಮವಾರಪೇಟೆಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾಧಿಕಾರಿ ಎಚ್.ಎನ್.ಲಕ್ಷ್ಮೀಕುಮಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲೂಕಿನ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಅಗ್ನಿ ಅವಘಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಗ್ನಿ ಅವಘಡಗಳು ಯಾವಾಗ? ಎಲ್ಲಿ? ಸಂಭವಿಸಬಹುದು ಎಂಬುದು ನಿರ್ದಿಷ್ಟವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮೂಲ ಸುರಕ್ಷತಾ ಕ್ರಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಅಗ್ನಿ ಅವಘಡಗಳ ವಿವಿಧ ಪ್ರಕಾರಗಳನ್ನು ವಿವರಿಸಿದ ಲಕ್ಷ್ಮೀಕುಮಾರ್ ಅವರು, ಅನಿಲ ವಸ್ತುಗಳಿಗೆ ತಗುಲುವ ಬೆಂಕಿ, ದ್ರವ ಪದಾರ್ಥಗಳಿಗೆ ತಗುಲುವ ಬೆಂಕಿ ಹಾಗೂ ಘನ ವಸ್ತುಗಳಿಗೆ ತಗುಲುವ ಬೆಂಕಿ ಎಂಬಂತೆ ಅವುಗಳ ಸ್ವಭಾವವನ್ನು ತಿಳಿದುಕೊಳ್ಳಬೇಕು. ಪ್ರತಿಯೊಂದು ಬೆಂಕಿಯೂ ಒಂದೇ ರೀತಿಯಲ್ಲಿ ನಂದಿಸಲಾಗುವುದಿಲ್ಲ. ಉದಾಹರಣೆಗೆ, ಎಣ್ಣೆ ಅಥವಾ ಪೆಟ್ರೋಲ್‌ನಂತಹ ದ್ರವ ವಸ್ತುಗಳಿಗೆ ತಗುಲುವ ಬೆಂಕಿಗೆ ನೀರು ಸುರಿಸುವುದು ಅಪಾಯಕಾರಿಯಾಗಿದೆ. ಇದರಿಂದ ಬೆಂಕಿ ಇನ್ನಷ್ಟು ವ್ಯಾಪಿಸಬಹುದು ಎಂದು ಎಚ್ಚರಿಸಿದರು.
ಗ್ಯಾಸ್ ಸಿಲಿಂಡರ್ ಸೋರಿಕೆ ಅಥವಾ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ ಅವರು, ತಕ್ಷಣವೇ ಗ್ಯಾಸ್ ವಾಲ್ವ್‌ಅನ್ನು ಮುಚ್ಚುವುದು, ವಿದ್ಯುತ್ ಸ್ವಿಚ್‌ಗಳನ್ನು ಆನ್ ಅಥವಾ ಆಫ್ ಮಾಡದೇ ಇರಬೇಕು ಹಾಗೂ ಸುತ್ತಮುತ್ತಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವಿಶೇಷ ಅಂಶವಾಗಿ ಅಗ್ನಿಶಾಮಕ ಸಿಬ್ಬಂದಿಗಳು ಪ್ರಾತ್ಯಕ್ಷಿಕೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ನೇರವಾಗಿ ತರಬೇತಿ ನೀಡಿದರು. ಬೆಂಕಿ ನಂದಿಸುವ ಸಾಧನಗಳಾದ ಮರಳು ಹಾಗೂ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತೋರಿಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಡಿ.ಹರ್ಷ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜೀವ ರಕ್ಷಣೆ ಕುರಿತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾತ್ರವಲ್ಲದೆ, ಸಮಾಜದಲ್ಲಿಯೂ ಈ ಜ್ಞಾನವನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಎಂ.ಎಸ್.ಶಿವಮೂರ್ತಿ, ಕನ್ನಡ ಪ್ರಾಧ್ಯಾಪಕ ಹುಚ್ಚೇಗೌಡ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಅಧಿಕಾರಿ ನಾಗೇಶ್, ಸಿಬ್ಬಂದಿ ಎಚ್.ಜೆ. ಜವರಪ್ಪ, ಸಂಧ್ಯಾ ಮತ್ತಿತರರು ಇದ್ದರು.