ಕುಶಾಲನಗರ ತಾಲೂಕು ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಕೆ.ಭೋಗಪ್ಪ ಉದ್ಘಾಟಿಸಿದರು. ಸಂತೋಷ್, ಸುಜಾತ, ಟಿ.ಜಿ.ಪ್ರೇಮಕುಮಾರ್, ಪವಿತ್ರ, ಕಲಾವತಿ ಇತರರು ಇದ್ದರು. 
ಕೊಡಗು

ಕೂಡುಮಂಗಳೂರಿನಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭ

ಎ. ಆರ್. ರಘುರಾಮ
ಕುಶಾಲನಗರ : ಕುಶಾಲನಗರ ತಾಲೂಕು ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ ಮತ್ತು ಯುಕೆಜಿ)ಗಳನ್ನು ಕೂಡುಮಂಗಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಕೆ. ಭೋಗಪ್ಪ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರು ತಮ್ಮ ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಕೊಡಿಸುವುದು ಗಗನ ಕುಸುಮವಾಗಿತ್ತು. ಈಗ ಹಳ್ಳಿಯ ಈ ಶಾಲೆಯಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಉತ್ತಮವಾಗಿ ದೊರಕುವಂತಾಗಿದೆ. ಪಾಲಕರು ಸರ್ಕಾರಿ ಶಾಲೆಯಲ್ಲಿನ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು. ಸದ್ಯ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತ್ರವೇ ಮಕ್ಕಳಿಗೆ ಕಲಿಕೆಗೆ ಆರಂಭವಾಗುತ್ತಿತ್ತು. ಹೀಗಾಗಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗಾಗಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಶುರುವಾಗಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೇ ದಾಖಲಿಸಬೇಕು ಎಂದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ. ತರಗತಿಗಳನ್ನು ಆರಂಭಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ಕೂಡ್ಲೂರು ಶಾಲೆಯಲ್ಲೂ ಈ ತರಗತಿಗಳು ಆರಂಭವಾಗುತ್ತಿರುವುದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರೇಮಕುಮಾರ್ ಮಾತಾನಾಡಿ, ಹಳ್ಳಿ ಮಕ್ಕಳಿಗೆ ಉತ್ತಮ ಕಲಿಕೆಗೆ ಸರ್ಕಾರಿ ಶಾಲೆಗಳೇ ಸೂಕ್ತವಾಗಿದೆ. ಎಲ್‌ಕೆಜಿ ಆರಂಭದಿಂದ ದಾಖಲಾತಿ ಹೆಚ್ಚಳ ಆಗಲಿದೆ. ಹಿಂದುಳಿದ ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಣವೇ ಅಸವಾಗಿದೆ ಎಂದರು. ಗ್ರಾಮಾಂತರ ಸರ್ಕಾರಿ ಶಾಲೆಗಳ ಮಕ್ಕಳ ಆರಂಭಿಕ ಶಿಕ್ಷಣ ಇನ್ನು ಮುಂದೆ ಮತ್ತಷ್ಟು ಸುಲಭ, ಸುರಕ್ಷಿತ ಮತ್ತು ಉನ್ನತ ಗುಣಮಟ್ಟದ್ದಾಗಲಿದೆ. ಇದಕ್ಕೆ ಪಾಲಕರು ಹೆಚ್ಚಿನ ಸಹಕಾರ ನೀಡಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್. ಸುಜಾತಾ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಪೂರ್ವ ಪ್ರಾಥಮಿಕವನ್ನು ತರಗತಿವಾರು ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮದಲ್ಲಿ ನಡೆಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಎಂ.ಸಂತೋಷ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ನಿರ್ಧಾರ ಸಂತೋಷ ತಂದಿದೆ. ಇದರಿಂದ ಹಳ್ಳಿ ಮಕ್ಕಳು ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಯಲು ಸಹಕಾರಿಯಾಗಿದೆ ಎಂದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಕೆ.ಆರ್. ಪವಿತ್ರಾ, ಶಿಕ್ಷಕಿಯರಾದ ಕೆ.ಬಿ. ಗೀತಾರಾಣಿ, ಮೇರಿ ಮಾರ್ಗರೇಟ್, ಜಿ. ನಳಿನಿ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕಿ ಪಿ.ಆರ್. ಶ್ಯಾಮಲಾ, ಅಂಗನವಾಡಿ ಕಾರ್ಯಕರ್ತೆ ಕಲಾವತಿ, ಸಹಾಯಕಿ ಎನ್.ಪಿ. ತ್ರಿಪುರಾ ಇದ್ದರು.