ಆಕ್ಸ್ ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಕ್ಕಬೆ ಕ್ಲಸ್ಟರ್‌ನ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಹಿದ್ ಅಲಿ, ಶರ್ಮಿಳಾ ಎಸ್, ಮಂಜುಳಾ ಚಿತ್ತಾಪುರ ಇತರರು ಇದ್ದರು.
- ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆ ವ್ಯವಸ್ಥಾಪಕ ಶಾಹಿದ್ ಅಲಿ ಹೇಳಿಕೆ
ನಾಪೋಕ್ಲು: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಕ್ಕಬೆ ಕ್ಲಸ್ಟರ್ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ವ್ಯವಸ್ಥಾಪಕ ಶಾಹಿದ್ ಅಲಿ ಮಾತನಾಡಿ, ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಯಲ್ಲ, ಅದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತರುವ, ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಮಹಾಯಜ್ಞ ಎಂದರು.
ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸೌಮ್ಯಾ ಪೊನ್ನಪ್ಪ ಮಾತನಾಡಿ, ಮಕ್ಕಳಿಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ತಿಳಿಸಿ, ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಶುಭ ಹಾರೈಸಿದರು.
ವಿಷಯ ಪರಿವೀಕ್ಷಕರು ಬಿಂದು ಮಾತನಾಡಿ, ಎಲ್ಲರೂ ವೇದಿಕೆಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಧೈರ್ಯವೇ ದೊಡ್ಡ ಗೆಲುವು ಎಂಬುದನ್ನು ಅರಿಯಬೇಕು. ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಉಳಿದ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಕವಾಗಿದೆ ಎಂದರು.
ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು ವಿಶಿಷ್ಟ ಶೈಲಿಯಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಹೊರಹಾಕಿದರು. ಕಾರ್ಯಕ್ರಮದಲ್ಲಿ ಸಹ ಸಂಯೋಜಕಿ ಶರ್ಮಿಳಾ ಎಸ್, ಬಿ.ಆರ್.ಪಿ ಮಂಜುಳಾ ಚಿತ್ತಾಪುರ, ಕಕ್ಕಬೆ ಕಸ್ಟರ್ ಮಟ್ಟದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕಲ್ಪನಾ, ಶಾಲೆಯ ಮುಖ್ಯಶಿಕ್ಷಕ ಶಬ್ರೀನ್ ಫಾತಿಮಾ, ಗಗನ್ ಶಹೀರ್ ಇತರರು ಇದ್ದರು.