ಹುದಿಕೇರಿ ಲಿಟಲ್ ಫ್ಲವರ್ಸ್ ಶಾಲೆಯಲ್ಲಿ ನಡೆದ ಕೈಬುಲಿರ ಬೋಪಯ್ಯ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನೀಡ್ತಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ.ಎಸ್. ಪೂರ್ವಿಕಳನ್ನು ಸನ್ಮಾನಿಸಲಾಯಿತು. ಕೋಳೆರ ದಯಾ ಚಂಗಪ್ಪ, ಕುಲ್ಲಚಂಡ ಪ್ರಮೋದ್ ಗಣಪತಿ, ಉಳುವಂಗಡ ಕಾವೇರಿ ಉದಯ್, ಕೆ.ಎಲ್. ರಶ್ಮಿ ಆಶಾ ಜ್ಯೋತಿ ಸತೀಶ್ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಹೊರತು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು ಎಂದು ಜಿಲ್ಲೆಯ ಹಿರಿಯ ದಾನಿ ಕೈಬುಲಿರ ಪಾರ್ವತಿ ಬೋಪಯ್ಯ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಲಿಟಲ್ ಫ್ಲವರ್ಸ್ ಶಾಲೆ ಹುದಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕೈಬುಲಿರ ಬೋಪಯ್ಯ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಪಾಲಿಗೆ ಅಧ್ಯಾಪಕರು ಶಿಲ್ಪಿಗಳಂತೆ. ಪೋಷಕರು ಒಂದು ಕಲ್ಲಿನ ರೀತಿಯಲ್ಲಿರುವ ವಿದ್ಯಾರ್ಥಿಯನ್ನು ಶಾಲೆಗೆ ಒಪ್ಪಿಸಿದ ಸಂದರ್ಭದಲ್ಲಿ ಅಧ್ಯಾಪಕರು ಅವರನ್ನು ತಿದ್ದಿ ತೀಡಿ ಉತ್ತಮವಾದ ಶಿಲ್ಪವನ್ನಾಗಿ ಮಾಡುತ್ತಾರೆ. ಅಧ್ಯಾಪಕರ ಈ ಸೇವೆ ವಿದ್ಯಾರ್ಥಿಗಳು ಮರೆಯಕೂಡದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಿದ್ಯೆಯೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಕೂಡ ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ಪಡಬೇಕು. ನಮ್ಮಲ್ಲಿರುವ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ ದೊರೆತರೆ ನಾಳೆ ಹಳ್ಳಿಗಾಡಿನಿಂದ ಬಂದAತಹ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಿದೆ ಎಂದು ಹೇಳಿದರು.
ದತ್ತಿ ಆಶಯದಂತೆ ಶಿಕ್ಷಣದ ಅವಶ್ಯಕತೆಯ ಕುರಿತು ಮಾತನಾಡಿದ ಪೊನ್ನಂಪೇಟೆ ಕೆ.ಪಿ.ಎಸ್ ಪ್ರೌಢಶಾಲೆಯ ಅಧ್ಯಾಪಕಿ ನಳಿನಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾಭ್ಯಾಸದ ಅವಶ್ಯಕತೆ ತುಂಬಾ ಇದೆ, ಕಲಿತಷ್ಟು ಸಾಲುವುದಿಲ್ಲ. ವಿದ್ಯಾರ್ಥಿಗಳು ಪಠ್ಯೇತರ ವಿಚಾರಗಳನ್ನು ಕೂಡ ಅಭ್ಯಾಸ ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾನಂಗಡ ಅರುಣ್ ಮಾತನಾಡಿ ಹಳ್ಳಿಯ ಶಾಲೆಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಅನುವು ಮಾಡಿಕೊಟ್ಟಿದೆ ಇದರಿಂದ ಹಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಅನುಭವ ಮತ್ತು ಶೈಕ್ಷಣಿಕ ಪ್ರಗತಿ ಆಗುತ್ತಿದೆ ಎಂದು ಹೇಳಿದರು.
ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಪ್ರಮುಖರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಉಳುವಂಗಡ ಕಾವೇರಿ ಉದಯ್, ಶಾಲೆಯ ಮುಖ್ಯೋಪಾಧ್ಯಾಯನಿ ಕೆ.ಎಲ್. ರಶ್ಮಿ ಮಾತನಾಡಿದರು. ಆರಂಭದಲ್ಲಿ ಲಿಟಲ್ ಫ್ಲವರ್ಸ್ ಶಾಲೆಯ ಕಾರ್ಯದರ್ಶಿ ಆಶಾ ಜ್ಯೋತಿ ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಮುಖರಾದ ಶೀಲಾ ಬೋಪಣ್ಣ, ಟಿ.ಆರ್. ವಿನೋದ್, ಉಳುವಂಗಡ ಉದಯ್, ಅಜಯ್, ಪವಿತ್ರ, ನವ್ಯ, ಪಾರ್ವತಿ ಮತ್ತಿತರರು ಇದ್ದರು.
2024-25 ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನೀಡ್ತಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ.ಎಸ್. ಪೂರ್ವಿಕ, ಸರ್ವೇ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾನಂಗಡ ಅರುಣ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.