ಪೊನ್ನಂಪೇಟೆ ಸಮೀಪದ ಬಾಳೆಲೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿರುವುದು.
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಬಾಳೆಲೆ ಪಟ್ಟಣದ ಶ್ರೀರಾಮ ವೃತ್ತದಿಂದ ಮುಂದೆ ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ನಿಯಮ ಜಾರಿಯಲ್ಲಿದ್ದು ತಿಂಗಳ ಹದಿನೈದು ದಿವಸ ಮುಖ್ಯರಸ್ತೆಯ ಒಂದು ಬದಿ, ಉಳಿದ ಹದಿನೈದು ದಿವಸ ರಸ್ತೆಯ ಮತ್ತೊಂದು ಬದಿ ನಿಲುಗಡೆ ಮಾಡಬೇಕೆಂಬ ನಿಯಮವನ್ನು ಗ್ರಾಮ ಪಂಚಾಯಿತಿ ಜಾರಿ ಮಾಡಿದೆ.
ಆದರೂ ಕಳೆದೆರಡು ತಿಂಗಳಿಂದ ರಸ್ತೆಯ ಎರಡು ಕಡೆ ಕೆಲವರು ವಾಹನ ಪಾರ್ಕಿಂಗ್ ಮಾಡುತ್ತಿರುವುದರೊಂದಿಗೆ ಖಾಸಗಿ ಬಸ್‌ಗಳು ಇಲ್ಲಿನ ಕೆನರಾ ಬ್ಯಾಂಕ್ ಮುಂಭಾಗ ನಿಲ್ಲಿಸುವ ಬದಲಾಗಿ ಶ್ರೀರಾಮ ವೃತ್ತದ ಸನಿಹವೇ ನಿಲ್ಲುತ್ತಿವೆ. ಕೆಲವು ಗೂಡ್ಸ್ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸಿ ಲೋಡಿಂಗ್ ಅನ್ ಲೋಡಿಂಗ್ ಮಾಡುವುದರಿಂದ ಶ್ರೀರಾಮ ವೃತ್ತದ ಮುಂದಿರುವ ಮುಖ್ಯರಸ್ತೆಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿದ್ದು ಪಾದಚಾರಿಗಳಿಗೆ, ವಿದ್ಯಾರ್ಥಿಗಳಿಗೆ, ಬ್ಯಾಂಕ್‌ಗಳು ಅಂಗಡಿಗಳಿಗೆ ಹೋಗಿ ಬರುವವರಿಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.