ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಎಸ್.ತಿಮ್ಮಯ್ಯ ಅವರಿಗೆ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ವಿತರಿಸಿದರು. ಬಿಂದುಮಣಿ, ಕೆ.ಬಿ.ಅಚ್ಚಮ್ಮ ಇದ್ದರು. 
ಕೊಡಗು

ಪೊಲೀಸರಿಗೂ ಆರೋಗ್ಯದ ಕಾಳಜಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಪೊಲೀಸರಿಗೂ ಆರೋಗ್ಯದ ಕಾಳಜಿ ಅಗತ್ಯ
  • ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಪೊಲೀಸ್ ಉಪ ನಿರೀಕ್ಷಕರಾದ ಕೆ.ಬಿ.ಅಚ್ಚಮ್ಮ
ಮಡಿಕೇರಿ: ಪ್ರತೀ ನಿತ್ಯ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸದಾ ಶ್ರಮಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆರೋಗ್ಯದ ಕಡೆಯೂ ಸಹ ಗಮನಹರಿಸಬೇಕು ಎಂದು ನಿವೃತ್ತ ಪೊಲೀಸ್ ಉಪ ನಿರೀಕ್ಷಕರಾದ ಕೆ.ಬಿ.ಅಚ್ಚಮ್ಮ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕ ವತಿಯಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಕೊಡಗು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಲವು ಬಾರಿ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದು ಸ್ಮರಣೀಯವಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಪೊಲೀಸ್ ಧ್ವಜ ದಿನಾಚರಣೆಗೆ ಆಹ್ವಾನಿಸಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ಇದೊಂದು ಸ್ಮರಣೀಯಗಳಿಗೆ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತೀ ನಿತ್ಯ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸದಾ ಶ್ರಮಿಸುತ್ತಾರೆ. ಆದ್ದರಿಂದ ಆರೋಗ್ಯದ ಕಡೆಯೂ ಸಹ ಗಮನಹರಿಸಬೇಕು. ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಕಾರ್ಯ ಶ್ಲಾಘನೀಯವಾಗಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಮತ್ತು ಸಮಯ ಪ್ರಜ್ಞೆಯಿಂದ ಸಮಾಜದಲ್ಲಿ ಉತ್ತಮ ವಾತಾವರಣ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಮಾತನಾಡಿ, ಪೊಲೀಸರು ಸಮಾಜದಲ್ಲಿ ಸಮಗ್ರತೆ, ಸಾಮರಸ್ಯ, ಭ್ರಾತೃತ್ವದಿಂದ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದ ಅವರು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ನೆಮ್ಮದಿ ಬದುಕಿಗೆ ಪೊಲೀಸರ ಕರ್ತವ್ಯ ಪ್ರಜ್ಞೆ ಅಪಾರವಾಗಿದೆ. ಪೊಲೀಸರ ಕರ್ತವ್ಯದಲ್ಲಿ ಶಿಸ್ತು, ನಿಷ್ಠೆ ಮತ್ತು ಪ್ರಾಮಾಣಿಕತೆ ಅತೀ ಮುಖ್ಯವಾಗಿದೆ. ಜೊತೆಗೆ ಕಾರ್ಯದಕ್ಷತೆ ಪ್ರತಿಯೊಬ್ಬ ಪೊಲೀಸರಲ್ಲಿಯೂ ಇರಬೇಕು. ಹಾಗಾದಾಗ ಮಾತ್ರ ಸಮಾಜದಲ್ಲಿ ನೆಮ್ಮದಿಯ ಬದುಕು ಸಾಧ್ಯ ಎಂದರು.
ಕೊಡಗು ಜಿಲ್ಲೆಯ ಎಲ್ಲಾ ಹಂತದ ಪೊಲೀಸರು ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುವಂತದದ್ದು. ಪೊಲೀಸರು ಪ್ರತೀ ನಿತ್ಯ ಒಂದಲ್ಲ ಒಂದು ರೀತಿ ಸವಾಲು ಮತ್ತು ಕಠಿಣ ಪರಿಸ್ಥಿತಿಯಲ್ಲಿಯೂ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸುವಂತೆ ಮಾಡುತ್ತಾರೆ. ಇದು ಶ್ಲಾಘನೀಯ ಕಾರ್ಯ ಎಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರ ಬೆಂಬಲ ಮತ್ತು ಸಹಕಾರ ಅತ್ಯಗತ್ಯ. ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯ ಇನ್ನಷ್ಟು ಬಲಯುತವಾಗಬೇಕು ಎಂದು ಕೋರಿದರು.
ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆಯ ಬದುಕು ಅತ್ಯಗತ್ಯ. ಆ ನಿಟ್ಟಿನಲ್ಲಿ ಶಾಂತಿ, ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮುಖ್ಯ ಅತಿಥಿಗಳಿಗೆ ಗೌರವ ವಂದನೆಯನ್ನು ಜಿಲ್ಲಾ ಪೊಲೀಸ್ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ(ಆರ್‌ಪಿಐ ಡಿಆರ್) ಗಣೇಶ್ ಅವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪಿಎಸ್‌ಐ ಅಚ್ಚಮ್ಮ ಅವರು ಪಥಸಂಚಲನ ತಂಡಗಳ ಪರಿವೀಕ್ಷಣೆ ಮಾಡಿದರು. ಬಳಿಕ ಪೊಲೀಸ್ ೮ ತಂಡಗಳಿಂದ ಪಥಸಂಚಲನ ನಡೆಯಿತು. ಪೊಲೀಸ್ ವಾದ್ಯಗೋಷ್ಠಿ ತಂಡದವರು ರಾಷ್ಟ್ರಗೀತೆ ನುಡಿಸಿದರು. ಬಳಿಕ ಪೊಲೀಸ್ ಧ್ವಜ ವಿತರಿಸಲಾಯಿತು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಡಿವೈಎಸ್‌ಪಿಗಳಾದ ಪಿ.ಎ.ಸೂರಜ್(ಮಡಿಕೇರಿ), ಮಹೇಶ್ ಕುಮಾರ್(ವಿರಾಜಪೇಟೆ), ಚಂದ್ರಶೇಖರ (ಸೋಮವಾರಪೇಟೆ), ಸೈಬರ್ ಅಪರಾಧ ವಿಭಾಗದ ಡಿವೈಎಸ್‌ಪಿ ಲಕ್ಷ್ಮಿಕಾಂತ ತಳವಾರ, ಹಿರಿಯ ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.
ತಿಮ್ಮಯ್ಯ ಅವರಿಗೆ ಕಾರ್ಯಪ್ಪ ಟ್ರೋಫಿ
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಎಸ್.ತಿಮ್ಮಯ್ಯ ಅವರಿಗೆ ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ವಿತರಿಸಿದರು.
ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ವಿಭಾಗದಲ್ಲಿ ಎಎಚ್‌ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎಸ್.ಸುಧೀರ್ ಅವರಿಗೆ ಪೊಲೀಸ್ ವಿಶೇಷ ಘಟಕಗಳ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿರುವುದಕ್ಕೆ ಪೊಲೀಸ್ ಟ್ರೋಫಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ನೀಡಿದರು.