ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪವಿರುವ ಕಾವೇರಿ ನದಿ ತಟದಲ್ಲಿ ಪಿತೃ ಪಿಂಡ ತರ್ಪಣ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಭೀಮನ ಅಮಾವಾಸ್ಯೆ(ಕರ್ಕಿಡಕ ವಾವ್ ಬಲಿ) ಶುಭ ದಿನದಂದು ಪಿತೃಗಳನ್ನು ಸ್ಮರಿಸಿ ಅವರಿಗೆ ತರ್ಪಣ ಅರ್ಪಿಸುವುದು ಸನಾತನ ಪರಂಪರೆಯ ವಾಡಿಕೆ. ಅದರಂತೆ ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪ ಇರುವ ಕಾವೇರಿ ನದಿ ತಟದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಟ್ರಸ್ಟ್, ಎಸ್‌ಎನ್‌ಡಿಪಿ ಕುಶಾಲನಗರ ಶಾಖೆ ಹಾಗೂ ಕೇರಳ ಸಮಾಜದ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ಪಿತೃಪಿಂಡ ತರ್ಪಣ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಬುಧವಾರ ನೆರವೇರಿತು.
ಬೆಳಗ್ಗೆ 6 ಗಂಟೆಯಿಂದಲೇ ನದಿಯ ತಟದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಅರ್ಚಕ ರಾಮಣ್ಣ ಪೌರೋಹಿತ್ಯದಲ್ಲಿ ಶಾಂತಿ ಪಿತೃಪಿಂಡ ತರ್ಪಣ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಡಲಾಯಿತು.
ಈ ಪುಣ್ಯ ಕಾರ್ಯದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ಜನರು ಪಾಲ್ಗೊಂಡು ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ಮಾಡಿದರು.
ಶ್ರೀ ಮುತ್ತಪ್ಪ ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ವರದ, ಎಸ್‌ಎನ್‌ಡಿಪಿ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಟಿ.ಗಣೇಶ್, ಉಪಾಧ್ಯಕ್ಷ ಕರಣ್, ಕಾರ್ಯದರ್ಶಿ ಅನೀಶ್ ಕುಮಾರ್, ಖಜಾಂಚಿ ಟಿ.ಎಸ್.ಉದಯ್, ಸದಸ್ಯರಾದ ಎಂ.ಆರ್.ಚಂದ್ರನ್, ಗೋಪಿ ಕೃಷ್ಣ, ಎನ್.ಸಿ.ಡಾಲು, ಟಿ.ಕೆ.ಬಾಲಕೃಷ್ಣ ಇತರರು ಇದ್ದರು.
ಧಾರ್ಮಿಕ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ, ಸಂಘಟಕರು ಹಾಗೂ ಸ್ವಯಂಸೇವಕರು ಕಾವೇರಿ ನದಿ ತೀರದ ಸೋಪಾನಕಟ್ಟೆ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವ ಮೂಲಕ ಪರಿಸರ ಜಾಗೃತಿಯನ್ನೂ ಮೆರೆದರು.