ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನಿರ್ಮಿಸಲಾದ ಸಂಘದ ಕಚೇರಿ, ಸಭಾಂಗಣ ಹೊಂದಿರುವ ಫಾರ್ಮಾ ಭವನವನ್ನು ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್. ರಘುನಾಥ ರೆಡ್ಡಿ ಉದ್ಘಾಟಿಸಿದರು. ಅಜಯ್ ರಾಜ್ ಷಾ, ಕೆ. ಹರೀಶ್, ಅಂಬೇಕಲ್ ಜೀವನ್ ಕುಶಾಲಪ್ಪ, ಬಿ. ಉಮೇಶ್ ಮತ್ತಿತರರು ಇದ್ದರು. 
ಕೊಡಗು

ಮಡಿಕೇರಿಯಲ್ಲಿ ಫಾರ್ಮಾ ಭವನ ಉದ್ಘಾಟನೆ

ಮಡಿಕೇರಿ:
ಆನ್‌ಲೈನ್‌ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮಾದಕ ದ್ರವ್ಯಗಳಿಗೆ ಸಂಪೂರ್ಣ ತಡೆ ಸಾಧ್ಯವಾಗದು ಎಂದು ಕರ್ನಾಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್. ರಘುನಾಥ ರೆಡ್ಡಿ ಹೇಳಿದ್ದಾರೆ. ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನಿರ್ಮಿಸಲಾದ ಸಂಘದ ಕಚೇರಿ, ಸಭಾಂಗಣ ಹೊಂದಿರುವ ಫಾರ್ಮಾ ಭವನ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಆನ್‌ಲೈನ ಮೂಲಕ ಮಾದಕ ದ್ರವ್ಯ ಸಾಗಾಣಿಕೆ ಊಹೆಗೂ ಮೀರಿ ಬೆಳೆಯುವ ಅಪಾಯವಿದೆ. ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆ ದೇಶವ್ಯಾಪಿ ವಿಸ್ತಾರಗೊಳ್ಳುತ್ತಿದೆ. ಆನ್‌ಲೈನ್‌ನಲ್ಲಿ ಔಷಧಿ ವಹಿವಾಟು ನೆಪದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯೂ ಹೆಚ್ಚಾಗುತ್ತಿದೆ. ಇಂಥ ಸಂದರ್ಭ ಅನಗತ್ಯವಾಗಿ ಔಷಧಿ ವ್ಯಾಪಾರಿಗಳನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುತ್ತಿವೆ. ಆನ್‌ಲೈನ್ ಮೂಲಕ ಮಾದಕ ವಸ್ತುಗಳನ್ನು ಸಲೀಸಾಗಿ ಸಾಗಾಣಿಕೆ ಮಾಡುವ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್‌ಲೈನ್ ಔಷಧಿ ವಹಿವಾಟಿಗೇ ತಡೆಯೊಡ್ಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಸಂಘದ ಅಧೀನದಲ್ಲಿರುವ ಔಷಧ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಮಾದಕ ಪದಾರ್ಥಗಳು, ಮಾದಕ ದ್ರವ್ಯಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಈಗಾಗಲೇ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಪ್ರಸ್ತುತ 26 ಸಾವಿರ ಔಷಧ ಅಂಗಡಿಗಳಿದ್ದು, 45 ಸಾವಿರದಷ್ಟು ಔಷಧ ವ್ಯಾಪಾರಿಗಳಿದ್ದಾರೆ. ಔಷಧ ವ್ಯಾಪಾರಿಗಳು ಸಮಾಜಮುಖಿಯಾಗಿ ನಿಯಮಪಾಲಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಹೀಗಿದ್ದರೂ ಸರ್ಕಾರಗಳು ಒಂದಿಲ್ಲೊAದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳಿಗೆ ಸಮಸ್ಯೆಯುಂಟು ಮಾಡುತ್ತಿದೆ. ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿAದ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಆರ್ಥಿಕತೆಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್ ಪ್ರಾರಂಭಿಸುವAತಾಗಲಿ ಎಂದರು.
ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಅಜಯ್ ರಾಜ್ ಷಾ ಮಾತನಾಡಿ, ಭೂಮಿಯಲ್ಲಿ ಜನಿಸಿದವರೆಲ್ಲರೂ ಪ್ರವಾಸಿಗರಂತೆ ಆಗಿದ್ದೇವೆ. ಆ ದೇವನು ಪ್ರವಾಸಿ ಮಾರ್ಗದರ್ಶಕನಂತೆ ನಮಗೆ ದಾರಿದೀಪವಾಗಿದ್ದಾನೆ. ಹೀಗಿರುವಾಗ ಜೀವಿಸುವ ಅಲ್ಪಾವಧಿಯಲ್ಲಿ ಸ್ವಾರ್ಥಿಗಳಾಗದೇ ಪರರ ಹಿತಚಿಂತನೆಯನ್ನೂ ಮಾಡಬೇಕು ಎಂದು ಹೇಳಿದರು.
ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ. ಹರೀಶ್ ಮಾತನಾಡಿ, ಸರ್ಕಾರಗಳು ಸದಾ ಒಂದೊAದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳ ನೆಮ್ಮದಿ ಕಸಿಯುತ್ತಿವೆ. ಅವೈಜ್ಞಾನಿಕವಾದ ಕಾನೂನುಗಳು ವ್ಯಾಪಾರಸ್ಥರನ್ನು ಅತಂತ್ರಗೊಳಿಸುತ್ತಿವೆ. ಹೀಗಿದ್ದರೂ, ಇಂಥ ಕಾನೂನುಗಳ ವಿರುದ್ದ ರಾಜ್ಯ ಸಂಘ ನಿರಂತರ ಹೋರಾಟ ಮಾಡುತ್ತಾ ಔಷಧ ವ್ಯಾಪಾರಿಗಳ ಹಿತಚಿಂತನೆ ಕಾಯಲು ಬದ್ಧವಾಗಿದೆ ಎಂದರು.
ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೇಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಔಷಧ ವ್ಯಾಪಾರಿಗಳು ಸಮಾಜದ ಆರೋಗ್ಯ ರಕ್ಷಕರಂತೆ ಇದ್ದಾರೆ. ವೈದ್ಯರು ಸೂಚಿಸುವ ಔಷಧವನ್ನು ರೋಗಿಗೆ ಸುರಕ್ಷಿತವಾಗಿ ತಲುಪಿಸುವ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ. ಔಷಧಿ ವ್ಯಾಪಾರಸ್ಥರದ್ದು ಖಂಡಿತಾ ಕೇವಲ ವಹಿವಾಟಲ್ಲ. ನಿಜಾರ್ಥದಲ್ಲಿ ಅವರದ್ದು ಮಹೋನ್ನತ ಸೇವೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಔಷದ ವ್ಯಾಪಾರಿಗಳ ಸಂಘದ ಖಜಾಂಜಿ ಬಿ. ಉಮೇಶ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಡಿ.ಐ. ಪುರುಷೋತ್ತಮ್, ಉಪಾಧ್ಯಕ್ಷರುಗಳಾದ ಅಂಬೆಕಲ್ ವಿನೋದ್, ಮೇರ್ವಿನ್ ಫರ್ನಾಂಡೀಸ್, ಜಂಟಿ ಕಾರ್ಯದರ್ಶಿ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ಜಗನ್ನಾಥ್, ಡಾ. ಸುಧಾಕರ್ ಶೆಟ್ಟಿ, ಶ್ರದ್ಧಾ ಶಾಸ್ತ್ರಿ, ಡಿ.ಐ. ಪುರುಷೋತ್ತಮ್, ವಿನಯ್ ಕುಮಾರ್ ಮತ್ತಿತರರು ಇದ್ದರು.
ಇದೇ ಕಾರ್ಯಕ್ರಮದಲ್ಲಿ ಹಿರಿಯ ಔಷಧ ವ್ಯಾಪಾರಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು. ವೀರಾಜಪೇಟೆಯ ಸುದರ್ಶನ್ ರೈ, ಕುಶಾಲನಗರದ ಎಸ್.ಎಲ್. ಶ್ರೀಪತಿ, ಸುಂಟಿಕೊಪ್ಪದ ಕೆ. ಗೋಪಾಲ ಭಟ್, ನಾಪೋಕ್ಲುವಿನ ಎಂ.ಎA. ನರೇಂದ್ರ, ಸೋಮವಾರಪೇಟೆಯ ಮೇರ್ವಿನ್ ಫೆರ್ನಾಂಡೀಸ್, ಮಡಿಕೇರಿಯ ಅಂಬೆಕಲ್ ಕುಶಾಲಪ್ಪ, ಶನಿವಾರಸಂತೆಯ ಹೆಚ್.ಎಸ್. ಸುರೇಶ್, ಕೊಡ್ಲಿಪೇಟೆಯ ಎಸ್.ಎಸ್. ಶ್ರೀನಿವಾಸ್, ಗೋಣಿಕೊಪ್ಪಲುವಿನ ಎನ್.ಯು. ಭೀಮಯ್ಯ, ಜಿ.ಎಸ್. ಬಸವರಾಜ್ ಸನ್ಮಾನದ ಗೌರವಕ್ಕೆ ಪಾತ್ರರಾದರು. ಫಾರ್ಮಾ ಭವನದ ಗುತ್ತಿಗೆದಾರ ಮನೋಜ್ಞ ಮತ್ತು ಎಂಜಿನಿಯರ್ ಪ್ರಮೋದ್ ಕುಮಾರ್ ರೈ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ. ಜೀವನ್, ಸುಮಾ ಜೀವನ್ ಅವರನ್ನೂ ಇದೇ ಸಂದರ್ಭ ಸನ್ಮಾನಿಸಲಾಯಿತು.