ಅರೆಭಾಷೆ ಕೂಡ್‌ಕಟ್ಟ್ ಕಾರ್ಯಕ್ರಮವನ್ನು ನಾಗೇಶ್ ಕುಂದಲ್ಪಾಡಿ ಉದ್ಘಾಟಿಸಿದರು. ಸದಾನಂದ ಮಾವಜಿ, ಭವಾನಿಶಂಕರ ಹೊದ್ದೆಟ್ಟಿ, ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ಇತರರಿದ್ದರು. 
ಕೊಡಗು

ಪೆರಾಜೆ ಊರು ಆರೆಭಾಷೆಯ ತವರೂರು: ಸದಾನಂದ ಮಾವಜಿ

ಪ್ರಮುಖ ಮುಖ್ಯಾಂಶಗಳು

  • ಪೆರಾಜೆ ಊರು ಆರೆಭಾಷೆಯ ತವರೂರು: ಸದಾನಂದ ಮಾವಜಿ
ಮಡಿಕೇರಿ: ಪೆರಾಜೆ ಊರು ಆರೆಭಾಷೆಯ ತವರೂರು. ಅರೆಭಾಷೆ ಇಲ್ಲಿ ಸಮೃದ್ಧವಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ನುಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪೆರಾಜೆ, ಪೆರಾಜೆ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟ ಮತ್ತೆ ಗ್ರಾಮ ಗೌಡ ಸಮಿತಿ ಪೆರಾಜೆ ಇವುಗಳ ಸಹಯೋಗದಲ್ಲಿ ಪೆರಾಜೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಅರೆಭಾಷೆ ಕೂಡ್‌ಕಟ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರೆಭಾಷೆಯನ್ನು ಕೊಡಗು, ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಮಾತನಾಡುತ್ತಾರೆ. ಆದರೆ, ಪೆರಾಜೆ ಊರು ಆರೆಭಾಷೆಯ ತವರೂರಾಗಿದ್ದು, ಅರೆಭಾಷೆ ಇಲ್ಲಿ ಸಮೃದ್ಧವಾಗಿದೆ ಎಂದರು.
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಷೆ ಅವನತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರದ್ದಾಗಿದೆ. ಆ ದಿಸೆಯಲ್ಲಿ ಸ್ಪಷ್ಟವಾದ ಗುರಿ ಮತ್ತು ದೃಷ್ಟಿ ಇದ್ದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ. ಪೆರಾಜೆ ಗ್ರಾಮದಿಂದ ಹಲವರು ಅರೆಭಾಷೆಗೆ ಒಳ್ಳೊಳ್ಳೆಯ ಕೊಡಗುಗೆ ನೀಡಿದ್ದಾರೆ ಎಂದು ಹೇಳಿದರು.
ಅರೆಭಾಷೆಯ ಆದಿಕವಿ ಎಂದೇ ಗುರುತಿಸಿಕೊಂಡಿರುವ ಭವಾನಿಶಂಕರ ಹೊದ್ದೆಟ್ಟಿ ಮಾತನಾಡಿ, ಅರೆಭಾಷೆ ಸಾಹಿತ್ಯ ನಡೆದು ಬಂದ ದಾರಿ ವಿವರಿಸಿದರು. ಅರೆಭಾಷೆಯಲ್ಲಿ ಬರೆಯುವ ಅಭ್ಯಾಸವನ್ನೂ ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರ ಮೇಲಿದೆ ಎಂದು ನುಡಿದರು.
ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಪೆರಾಜೆ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭವಾನಿ ಕೊಳಂಗಾಯ, ಪೆರಾಜೆ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಕೆ.ಕೆ.ಪದ್ಮಯ್ಯ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮನು ಪೆರುಮುಂಡ ಇದ್ದರು.
ಅರೆಭಾಷೆ ಕೂಡ್‌ಕಟ್ಟ್ ೨೦೨೫ ಕಾರ್ಯಕ್ರಮದ ಪ್ರಯುಕ್ತ ನಡೆದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲಕರಾಗಿ ಭಾಗವಹಿಸಿದ ಲೋಕೇಶ್ ಕುಂಚಡ್ಕ ಅವರು ಅರೆಭಾಷೆ ಇಂದು ಮತ್ತು ನಾಳೆ ಎಂಬ ವಿಷಯದ ಬಗ್ಗೆ ಹಾಗೂ ಸಂಜೀವ ಕುದ್ಪಾಜೆ ಇವರು ಅರೆಭಾಷೆರಲ್ಲಿ ಬದಲಾದ ಮದುವೆ ಕ್ರಮಗಳ ವಿಷಯಗಳ ಕುರಿತು ಮಾತನಾಡಿದರು.
ಸೋಬಾನೆ, ಜೋಗುಳ ಪದ, ಅಜ್ಜಿಕತೆ, ಅರೆಭಾಷೆ ಕವನ ರಚನೆ ಕುರಿತ ಸ್ಫರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಭಾಗವಹಿಸಿದ ಶ್ರೀಶಾಸ್ತಾವು ದೇವಸ್ಥಾನ ಪೆರಾಜೆಯ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಸಂಪಾಜೆ ಹೋಬಳಿಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಚಿದಾನಂದ ಪೀಚೆಮನೆ, ಅಕಾಡೆಮಿ ಮಾಜಿ ಸದಸ್ಯ ಸಂಗೀತಾ ರವಿರಾಜ್, ಪೆರಾಜೆಯ ಚಿಗುರು ಯುವಕ ಮಂಡಲದ ಅಧ್ಯಕ್ಷ ರಮೇಶ್ ಮಜಿಕೋಡಿ ಉಪಸ್ಥಿತರಿದ್ದರು.