ಕುಶಾಲನಗರ ತಾಲೂಕು ಕಚೇರಿ 
ಕೊಡಗು

ತಹಸೀಲ್ದಾರ್ ಇಲ್ಲದೆ ಜನರ ಕೆಲಸಗಳಿಗೆ ತೊಡಕು

ನಾಗೇಶ ಎಸ್
ಸುಂಟಿಕೊಪ್ಪ: ಕುಶಾಲನಗರ ತಾಲೂಕು ಕಚೇರಿಯಲ್ಲಿ ಒಂದೂವವರೆ ತಿಂಗಳಿನಿಂದ ತಹಸೀಲ್ದಾರ್ ಇಲ್ಲದೆ ತಾಲೂಕಿನ ಜನತೆ ಪರದಾಡುವಂತಾಗಿದೆ.
ಕುಶಾಲನಗರ ತಾಲೂಕಿನ ತಹಸೀಲ್ದಾರ್ ಆಗಿದ್ದ ಕಿರಣ್ ಗೌರಯ್ಯ ಒಂದೂವರೆ ತಿಂಗಳ ಹಿಂದೆ ನಿವೃತ್ತಿಯಾಗಿದ್ದು, ಅವರ ಸ್ಥಾನಕ್ಕೆ ನೂತನ ತಹಸೀಲ್ದಾರ್ ನೇಮಕಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಅನಾಹುತ ಸಂಭವಿಸಿದ್ದಲ್ಲಿ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಕರ್ತವ್ಯವೂ ಇವರದಾಗಿದೆ. ಆದರೆ, ತಹಸೀಲ್ದಾರ್ ನೇಮಕವಾಗದೆ ದಾಖಲಾತಿಗಳನ್ನು ನಿಗದಿತ ಸಮಯದಲ್ಲಿ ನೀಡಲು ವಿಳಂಬಗೊಳ್ಳುತ್ತಿದೆ. ಸಾರ್ವಜನಿಕರಿಗೆ ತಾಲೂಕು ದಂಡಾಧಿಕಾರಿ ಲಭ್ಯವಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ವಾಪಸ್ ಆಗುತ್ತಿರುವ ಬಗ್ಗೆ ಸಾರ್ವಜನಿಕರು ದೂರುವಂತಾಗಿದೆ.
ಕೂಡಲೇ ಸಂಬಂಧಿಸಿದ ಶಾಸಕರು, ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ ನೂತನ ತಹಸೀಲ್ದಾರ್ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಆಗ್ರಹ ಸಾರ್ವಜನಕರಿಂದ ಕೇಳಿ ಬರುತ್ತಿದೆ.