ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಿಸಲಾದ ಸಂಜೀವಿನಿ ಕಟ್ಟಡವನ್ನು ಶಾಸಕ ಮಂತರ್‌ಗೌಡ ಉದ್ಘಾಟಿಸಿದರು. ಪಾವನಾ, ಹನೀಫ್, ಮೋಕ್ಷಿತ್‌ರಾಜ್, ಪರಮೇಶ್‌ಕುಮಾರ್ ಇದ್ದರು.
- ಶಾಸಕ ಡಾ.ಮಂತರ್‌ಗೌಡ
- ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಆವರಣ
ಶನಿವಾರಸಂತೆ: ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಂಘಗಳಿಗೆ ಬಲ ಬರುತ್ತದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ 42 ನೋಂದಾಯಿತ ಮಹಿಳಾ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಒಂದೇ ಪಂಚಾಯಿತಿಯಲ್ಲಿ 425 ಸದಸ್ಯರಿರುವ ಸಂಘಗಳು ಇರುವುದು ಹೆಮ್ಮೆಯ ವಿಷಯ. ಅಲ್ಲದೆ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸ್ವಸಹಾಯ ಸಂಘಕ್ಕೆ ಸಂಜೀವಿನಿ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯ. ಇದರಿಂದ ಸಂಘದ ಸದಸ್ಯರು ಸಭೆ ನಡೆಸಬಹುದು ಎಂದರು.
ಪಂಚಾಯಿತಿಗಳು ಸ್ವಚ್ಛತೆ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಜನರು ಕಸ ವಿಂಗಡಿಸಿ ಹಾಕುವ ಮೂಲಕ ಪಂಚಾಯಿತಿಗೆ ಸಹಕರಿಸಬೇಕು. ರಸ್ತೆ ಬದಿಯಲ್ಲಿ ಸಾರ್ವಜನಿಕವಾಗಿ ಕಸ ಹಾಕಬಾರದು. ಸಂಜೀವಿನಿ ಒಕ್ಕೂಟದ ಸದಸ್ಯರ ಬೇಡಿಕೆ ಮೇರೆಗೆ ಕುರ್ಚಿ ಮತ್ತು ಟೇಬಲ್ ವ್ಯವಸ್ಥೆಯನ್ನು ವೈಯಕ್ತಿಕವಾಗಿ ಮಾಡಲಾಗುವುದು. ಅಲ್ಲದೆ ಪಂಚಾಯಿತಿ ಕಚೇರಿಯ ಆಧುನೀಕರಣ ಕಾಮಾಗಾರಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಇಒ ಪರಮೇಶ್‌ಕುಮಾರ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 17 ಲಕ್ಷ ರೂ. ಅನುದಾನದಲ್ಲಿ ಸಂಜೀವಿನಿ ಸಭಾಂಗಣ ನಿರ್ಮಾಣವಾಗಿದ್ದು, ಸಭೆಗಳನ್ನು ನಡೆಸಲು ಸ್ಥಳಾವಕಾಶ ಒದಗಿಸಿದಂತೆ ಆಗಿದೆ. ಪಂಚಾಯಿತಿಯ ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ಅಧ್ಯಕ್ಷೆ ಪಾವನಾ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯರಾದ ದಿನೇಶ್‌ಕುಮಾರ್, ಮೋಕ್ಷಿತ್‌ರಾಜ್, ಕೆಡಿಪಿ ಸದಸ್ಯ ಡಿ.ಆರ್.ವೇದಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ಇಂಜಿನಿಯರ್ ರಂಜಿತ್, ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯರಾದ ಬಿ.ಬಿ.ಸತೀಶ್, ಜೆ.ಎಲ್.ಜನಾರ್ದನ್, ಕೆಡಿಪಿ ಸದಸ್ಯರಾದ ಶರತ್‌ಶೇಖರ್, ಕೊಡ್ಲಿಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕ ಡಾ.ಉದಯ್ ಕುಮಾರ್, ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್, ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ಲೀನಾ, ರೇಣುಕಾ, ವಿನೋದಾ, ದೊಡ್ಡಯ್ಯ, ಪಿಡಿಒ ಹರೀಶ್, ಸಂಜಿವಿನಿ ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ ಇತರರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಆಯೋಜಿಸಿದ್ದ ಸಂತೆ ಮೇಳಕ್ಕೆ ಶಾಸಕರು ಭೇಟಿ ನೀಡಿ ತಿಂಡಿ ತಿನಿಸನ್ನು ಖರೀದಿಸಿದರು.