ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶನಿವಾರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹಲವರು ಪಿತೃ ತರ್ಪಣ ಮತ್ತು ಪಿಂಡ ಪ್ರದಾನ ನೆರವೇರಿಸಿದರು.   ಭಾಗಮಂಡಲದಲ್ಲಿ ಪಿತೃಪಕ್ಷ
ಕೊಡಗು

ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ

ಮಹಾಲಯ ಅಮಾವಾಸ್ಯೆ

ನಾಪೋಕ್ಲು: ಮಹಾಲಯ ಅಮಾವಾಸ್ಯೆ ನಿಮಿತ್ತ ಕಾವೇರಿ, ಕನ್ನಿಕೆ ಹಾಗೂ ಗುಪ್ತಗಾಮಿನಿ ಸುಜ್ಯೋತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪಿತೃ ತರ್ಪಣ ಮತ್ತು ಪಿಂಡ ಪ್ರದಾನ ನೆರವೇರಿಸಲು ಶನಿವಾರ ಸಾವಿರಾರು ಭಕ್ತರು ನೆರೆದಿದ್ದರು. ಹಾಗಾಗಿ ಕ್ಷೇತ್ರದಲ್ಲಿ ಕಿಕ್ಕಿರಿದ ಜನಸಂದಣಿ ಗಮನ ಸೆಳೆಯಿತು. ಅಗಲಿದ ಹಿರಿಯರು, ಕುಟುಂಬದಲ್ಲಿ ಮೃತರಾದವರಆತ್ಮಗಳಿಗೆ ಶಾಂತಿ ಸಿಗಲಿ, ಸದ್ಗತಿ ದೊರೆತು ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಕೇಶ ಮುಂಡನ ಮಾಡಿಸಿಕೊಂಡು, ಪವಿತ್ರ ತೀರ್ಥ ಸ್ನಾನ ಮಾಡಿ, ಮಡಿಯುಟ್ಟು, ಶ್ರದ್ಧಾ ಭಕ್ತಿಯಿಂದ ಪಿತೃ ತರ್ಪಣ ನೀಡಿದರು.

ಕೊಡಗು ಜಿಲ್ಲೆಯ ವಿವಿಧ ಭಾಗ, ಹೊರ ಜಿಲ್ಲೆ ಹಾಗೂ ನೆರೆ ರಾಜ್ಯದಿಂದಲೂ ಆಗಮಿಸಿದ ಭಕ್ತರು ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರು. ಪಿತೃ ತರ್ಪಣ ಕಾರ್ಯಕ್ರಮಗಳ ನಂತರ ಭಾಗಮಂಡಲದ ಶ್ರೀ ಭಗಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹಾಗೂ ತಲಕಾವೇರಿ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ದೇವಾಲಯ ಸಮಿತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿತ್ತು.