ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ
ಗೋಣಿಕೊಪ್ಪ: ಭಾರತ ಕಮ್ಯುನಿಸ್ಟ್ ಪಕ್ಷದ ಸಹಯೋಗದಲ್ಲಿ ಆಲ್ ಇಂಡಿಯಾ ದಲಿತ್ ರೈಟ್ಸ್ ಮೂವ್‌ಮೆಂಟ್ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ರಾಜಕೀಯ ಅಭಿಯಾನದ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಯಿತು.
ಪಾದಯಾತ್ರೆಯ ಮುಂದಾಳತ್ವ ವಹಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಕೊಡಗು ಉಸ್ತುವಾರಿ ಹಾಗೂ ರಾಜ್ಯ ಸಹ ಕಾರ್ಯದರ್ಶಿಯಾದ ಕಾಮ್ರೇಡ್ ಸಂತೋಷ್ ಮಾತನಾಡಿ, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪ ದೋಷಗಳಿದ್ದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಮತ್ತು ಶಿಕ್ಷಣದ ಉಳಿವಿಗಾಗಿ ನಾವೆಲ್ಲರೂ ಮುಂದಾಗಬೇಕು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗ ನಿರುದ್ಯೋಗಿ ಯುವಕರಿಗೆ ಎರಡು ಕೋಟಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿತ್ತು ಅದು ಇಂದು ಹುಸಿಯಾಗಿದೆ. ನಿರುದ್ಯೋಗಿ ಯುವಕರ ಭ್ಷ್ಯಕ್ಕಾಗಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ದೇಶದಾದ್ಯಂತ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ. ಸ್ವಾಮಿನಾಥನ್ ಆಯೋಗ ರಚನೆ ಮಾಡಿದರೂ ಕೂಡ ಅದನ್ನು ಜಾರಿಗೊಳಿಸಲು ಸರ್ಕಾರ ನಿರ್ಲಕ್ಷ ಧೋರಣೆ ತೋರುತ್ತಿರುವುದನ್ನು ಖಂಡಿಸುತ್ತೇವೆ. ರೈತರ ಆತ್ಮಹತ್ಯೆ ಕೇವಲ ಆತ್ಮಹತ್ಯೆ ಅಲ್ಲ ಅದು ಸರ್ಕಾರ ಪ್ರಚೋದಿತ ಹತ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದುವರಿದು ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವ ವ್ಯವಸ್ಥೆಯನ್ನು ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯಾದ್ಯಂತ ನಿವೇಶನ ಮತ್ತು ವಸತಿರಹಿತ ಕುಟುಂಬಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ವಿವಿಧ ವಸತಿ ಯೋಜನೆ ಸೌಲಭ್ಯಗಳ ಮುಖಾಂತರ ವಸತಿ ಕಲ್ಪಿಸಬೇಕು ಮತ್ತು ಜಿಲ್ಲೆಯಾದ್ಯಂತ ಮಾನವ ಮತ್ತು ವನ್ಯಜೀವಿ ಸಂಘರ್ಷ ನಡೆಯುತ್ತಿದ್ದು ಅಮಾಯಕರ ಬಲಿದಾನವನ್ನು ತಡೆಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ರಫೀಕ್ ಮಾತನಾಡಿ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಸಲುವಾಗಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೇಶದಾದ್ಯಂತ ಈಗಾಗಲೇ ಪಾದಯಾತ್ರೆ ನಡೆಸಲಾಗುತ್ತಿದ್ದು ಸೆ.೧ ರಂದು ಎಲ್ಲಾ ರಾಜ್ಯಗಳಿಂದ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಆಲ್ ಇಂಡಿಯಾ ರೈಸ್ ಮೂಮೆಂಟ್ ಸದಸ್ಯರು ದೆಹಲಿ ಚಲೋ ಆಂದೋಲನ ಹಮ್ಮಿಕೊಂಡಿರುತ್ತೇವೆ. ಇದಕ್ಕೆ ಸರಕಾರ ಸೂಕ್ತವಾಗಿ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೇಳಿದರು.
ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಸಂಜನಾ.ಸಿ.ಎಸ್ ಅವರ ಅನುಪಸ್ಥಿತಿಯಲ್ಲಿ ಗ್ರಾಮ ಸಹಾಯಕ ಲಕ್ಷ್ಮಣ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ರಫೀಕ್, ರಾಜ್ಯ ಸಹ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಾಮ್ರೇಡ್ ಸಂತೋಷ್, ಆಲ್ ಇಂಡಿಯಾ ದಲಿತ್ ರೈಟ್ಸ್ ಮೂವ್ಮೆಂಟ್ ಅಧ್ಯಕ್ಷ ಕಾಮ್ರೇಡ್ ರಮೇಶ್ ಮಾಯಮುಡಿ, ಕಾಮ್ರೇಡ್ ಸುನಿಲ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕಾಮ್ರೇಡ್ ಸುನಿಲ್, ಕಾಮ್ರೇಡ್ ಶಾಂತಿ ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ಕಾಮ್ರೇಡ್ ಶಾಂತಿ, ಕಾಮ್ರೇಡ್ ಸೀತಾರಾಮ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕಾಮ್ರೇಡ್ ಸೀತಾರಾಮ್, ಕಾಮ್ರೇಡ್ ಸುರೇಶ್ ಜಿಲ್ಲಾ ಸಹ ಕಾರ್ಯದರ್ಶಿ ಕಾಮ್ರೇಡ್ ಸುರೇಶ್, ಕಾಮ್ರೇಡ್ ಅಶೋಕ್, ತಿಮ್ಮ, ರಮೇಶ್ ಮಾಯಮುಡಿ ಹಾಗೂ ಸದಸ್ಯರು ಹಾಜರಿದ್ದರು.