ಮಡಿಕೇರಿ ರಾಜಾಸೀಟ್ ರಸ್ತೆಯಲ್ಲಿನ ಬೃಹತ್ ಹೊಂಡ 
ಕೊಡಗು

ಹದಗೆಟ್ಟ ರಸ್ತೆ ಜಾಲತಾಣಗಳಲ್ಲಿ ಆಕ್ರೋಶ

ಮಡಿಕೇರಿ:
ಕೊಡಗಿನಲ್ಲಿ ಹದಗೆಟ್ಟಿರುವ ರಸ್ತೆ ಪರಿಸ್ಥಿತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ವಸ್ತುವಾಗಿ ಪರಿವರ್ತನೆ ಆಗಿದೆ. ಮನವಿ, ಟೀಕೆ, ಒತ್ತಾಯಗಳಿಗೂ ಮಣಿಯದೇ ಜಡತ್ವ ಮುಂದುವರಿಸಿರುವ ಆಡಳಿತಕ್ಕೆ ವ್ಯಂಗ್ಯದ ಮೂಲಕ ಬಿಸಿಮುಟ್ಟಿಸುವ ಕೆಲಸ ನಡೆಯುತ್ತಿದೆ. ಒಂದಕ್ಕಿAದ ಒಂದು ವಿಭಿನ್ನವಾಗಿ ತಯಾರಾಗಿರುವ ಮೀಮ್‌ಗಳನ್ನು ನೋಡುತ್ತಿದ್ದಂತೆಯೇ ನಗೆ ಉಕ್ಕಿ ಬರುವುದರ ಜತೆಗೆ ವ್ಯವಸ್ಥೆಯ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ.
ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಭಾರತದ ಸ್ಕಾಟ್‌ಲ್ಯಾಂಡ್ ಎಂದೇ ಕರೆಯಲ್ಪಡುವ ಕೊಡಗಿನಲ್ಲಿ ಮಳೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಜಿಲ್ಲೆಯ ಬಹುತೇಕ ರಸ್ತೆಗಳು ಅದರಲ್ಲೂ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಗುಂಡಿ ಬಿದ್ದ ರಸ್ತೆಗಳಿಂದ ಬೇಸತ್ತಿರುವ ಸ್ಥಳೀಯರು ವ್ಯವಸ್ಥೆಯ ಗಮನ ಸೆಳೆಯಲು ಇಲ್ಲಿಯ ತನಕ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರೂ ಯಾವುದೇ ಪ್ರಯೋಜನ ಆಗದ ಕಾರಣ ಈಗ ಸಾಂಪ್ರದಾಯಿಕ ಪ್ರತಿಭಟನೆಗಳ ಹಾದಿ ಬಿಟ್ಟು ವಿಭಿನ್ನ ಮಾರ್ಗವನ್ನು ಆಯ್ದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಭರಿತ ಮತ್ತು ತೀಕ್ಷ್ಣವಾದ ಮೀಮ್ಸ್ ಹಾಗೂ ರೀಲ್ಸ್ಗಳನ್ನು ಹಂಚಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಗೆ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ.
ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಪ್ರಮುಖ ಸಂಪರ್ಕ ರಸ್ತೆಗಳು ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ವಾಹನ ಸವಾರರು ಹಿಡಿ ಶಾಪ ಹಾಕಿಕೊಂಡೇ ತಿರುಗಾಡುವ ರೀತಿಯಲ್ಲಿ ರಸ್ತೆಗಳು ಮಾರ್ಪಟ್ಟಿವೆ. ಮಳೆ ಬಂದಾಗಲAತೂ ಈ ಗುಂಡಿಗಳಲ್ಲಿ ನೀರು ತುಂಬಿ, ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಬೆನ್ನುನೋವು, ವಾಹನಗಳ ದುರಸ್ತಿ ವೆಚ್ಚ ಹೆಚ್ಚಳದಿಂದಾಗಿ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದಾರೆ. ಪ್ರತಿ ವರ್ಷ ರಸ್ತೆ ದುರಸ್ತಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ, ಕಾಮಗಾರಿಯ ಗುಣಮಟ್ಟ ಮಾತ್ರ ಅತ್ಯಂತ ಕಳಪೆಯಾಗಿದೆ ಎಂಬುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಮನವಿ, ಒತ್ತಾಯ, ಟೀಕೆಯ ಮೂಲಕ ಗಮನ ಸೆಳೆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊಡಗಿನ ಯುವಜನತೆ ಮತ್ತು ನಾಗರಿಕರು, ಈಗ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಹಾಗೂ ಎಕ್ಸ್ (ಟ್ವಿಟರ್) ವೇದಿಕೆಗಳನ್ನು ತಮ್ಮ ಪ್ರತಿಭಟನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
'ಮಡಿಕೇರಿ ರಸ್ತೆಯಲ್ಲಿ ಮೀನು ಸಾಕಾಣಿಗೆ ರಸ್ತೆಯಲ್ಲಿ ಗುಂಡಿಗಳು ಲಭ್ಯವಿದೆ. ಮಧ್ಯವರ್ತಿಗಳಿಗೆ ಅವಕಾಶ ಇಲ್ಲ.', 'ನಮ್ಮೂರಿಗೆ ಹಾರುವ ಕಾರಿನ ವ್ಯವಸ್ಥೆ ಮಾಡಿ', 'ಕಪ್ಪೆಯಂತೆ ರಸ್ತೆಯಲ್ಲಿ ಗುಂಡಿಯಿAದ ಗುಂಡಿಗೆ ಹಾರುವ ಚಾಲೆಂಜ್', 'ತೀವ್ರ ಮಳೆ ಕೊರತೆ, ರಸ್ತೆಯಲ್ಲಿ ಬತ್ತಿ ಹೋದ ಕೃಷಿ ಹೊಂಡಗಳು', 'ಹಾರುವ ಕಾರಿನ ವ್ಯಾಪಾರಕ್ಕೆ ಭರ್ಜರಿ ಬೇಡಿಕೆ', 'ರಸ್ತೆ ಗುಂಡಿಯಲ್ಲಿ ಅರಳಿದ ಭಾರತ ಮ್ಯಾಪ್', 'ರಸ್ತೆಯ ಮೇಲೊಂದು ಸುಸಜ್ಜಿತ ಈಜುಕೊಳ', ಹೀಗೆ ವಿವಿಧ ರೀತಿಯ ಅಡಿಬರಹಗಳ ಜತೆ ಹಾಳಾದ ರಸ್ತೆಗಳ ಚಿತ್ರಗಳು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಜನಪ್ರಿಯ ಕಾರ್ಟೂನ್ ಪಾತ್ರಧಾರಿಗಳಾದ ಮೋಟು-ಪಟ್ಲು ಬಳಸಿಕೊಂಡು ಕೂಡ ಮೀಮ್‌ಗಳನ್ನು ಹಾಸ್ಯಮಯವಾಗಿ ರಚಿಸಲಾಗುತ್ತಿದ್ದು ಪ್ರತಿದಿನವೂ ಆಡಳಿತ ವ್ಯವಸ್ಥೆಯ ವಿರುದ್ಧ ವ್ಯಂಗ್ಯದ ಬಾಣಗಳನ್ನು ಬಿಡಲಾಗುತ್ತಿದೆ.
ಕೊಡಗಿನ ರಸ್ತೆಗಳ ಚಿತ್ರಗಳನ್ನು ಇಸ್ರೋದ ಚಂದ್ರಯಾನದ ಚಿತ್ರಗಳೊಂದಿಗೆ ಹೋಲಿಸಿ, ನಾವು ಚಂದ್ರನ ಮೇಲೆ ಹೋಗಬೇಕಾಗಿಲ್ಲ, ಕೊಡಗಿನ ರಸ್ತೆಗಳಲ್ಲೇ ಚಂದ್ರನ ಗುಂಡಿಗಳನ್ನು ನೋಡಬಹುದು ಎಂದು ವ್ಯಂಗ್ಯವಾಡಲಾಗುತ್ತಿದೆ. ಜನಪ್ರಿಯ ಕನ್ನಡ ಸಿನಿಮಾಗಳ ಹಾಸ್ಯ ದೃಶ್ಯಗಳು ಹಾಗೂ ಖ್ಯಾತ ನಟರ ಮುಖಭಾವಗಳನ್ನು ಬಳಸಿ ರಸ್ತೆಗಳ ದುಸ್ಥಿತಿಯನ್ನು ಬಿಂಬಿಸುವ ಮೀಮ್‌ಗಳು ವೈರಲ್ ಆಗುತ್ತಿವೆ. ಕೊಡಗಿನ ರಸ್ತೆಯಲ್ಲಿ ಒಂದು ಕಿಲೋಮೀಟರ್ ಬೆನ್ನುನೋವು ಇಲ್ಲದೆ ಸಾಗಿದರೆ ಸಿಗುವ ಬಹುಮಾನ ಎನ್ನುವ ರೀತಿಯಲ್ಲಿ ಟ್ರೋಲ್‌ಗಳು ಸದ್ದು ಮಾಡುತ್ತಿವೆ.
ಈ ಮೀಮ್‌ಗಳು ಮತ್ತು ವೀಡಿಯೊಗಳು ಕೇವಲ ಕೊಡಗಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದ್ದರೂ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತಕೊಳ್ಳದಿರುವುದು ಸಾರ್ವಜನಿಕರುಗೆ ಆಶ್ವರ್ಯ ಮೂಡಿಸಿದೆ. ಸಾಂಪ್ರದಾಯಿಕ ಪ್ರತಿಭಟನೆಗಳನ್ನು ಕಡೆಗಣಿಸುವ ಅಧಿಕಾರಿಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ವೀಕ್ಷಿಸುವ ಈ ಮೀಮ್‌ಗಳ ಬಗ್ಗೆಯೂ ತಲೆಕೆಡಿಸಿಕೊಂಡAತಿಲ್ಲ. ಇದು ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿರುವುದರಿಂದ, ಡಿಜಿಟಲ್ ಪ್ರತಿಭಟನೆಗಳು ಸದ್ದು ಮಾಡುತ್ತಿವೆ.
ಕೊಡಗು ದೇಶಕ್ಕೆ ಅತಿ ಹೆಚ್ಚು ಸೇನಾ ಯೋಧರನ್ನು, ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ನೀಡಿದ ಹೆಮ್ಮೆಯ ನಾಡು. ಅಲ್ಲದೆ ಕಾವೇರಿ ನದಿಯ ಉಗಮ ಸ್ಥಾನವಾಗಿದ್ದು, ಇಡೀ ರಾಜ್ಯಕ್ಕೆ ನೀರು ಕೊಡುವ ಜಿಲ್ಲೆಯಾಗಿದೆ. ಜತೆಗೆ ಪ್ರವಾಸೋದ್ಯಮ ಮತ್ತು ಕಾಫಿ ಬೆಳೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಹರಿದು ಹೋಗುತ್ತದೆ. ಹೀಗಿದ್ದರೂ, ಜಿಲ್ಲೆಯ ಮೂಲಸೌಕರ್ಯಗಳ ಬಗ್ಗೆ ಸರ್ಕಾರ ತೋರುತ್ತಿರುವ ಧೋರಣೆ ಹಾಗೂ ನಿರ್ಲಕ್ಷ್ಯವೇ ಸಾರ್ವಜನಿಕರ ಈ ಡಿಜಿಟಲ್ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ನಾಗರಿಕರು ತಮಗಾಗುತ್ತಿರುವ ತೊಂದರೆಗಳನ್ನು ವ್ಯಕ್ತಪಡಿಸಲು ಕಂಡುಕೊAಡಿರುವ ಈ ಮೀಮ್ಸ್ ಸಂಸ್ಕೃತಿ ಕೇವಲ ಮನರಂಜನೆ ಮಾತ್ರವಲ್ಲ. ಬದಲಿಗೆ ಇದೊಂದು ಪ್ರಭಾವಶಾಲಿ ಅಹಿಂಸಾತ್ಮಕ ಪ್ರತಿಭಟನೆಯಾಗಿದೆ. ಕಣ್ಣು ಮುಚ್ಚಿ ಕುಳಿತಿರುವ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಲು ಸಾರ್ವಜನಿಕರು ಈ ಹಾದಿ ಹಿಡಿದಿದ್ದಾರೆ. ಇನ್ನಾದರೂ ಸಂಬAಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಕೊಡಗಿನ ರಸ್ತೆಗಳನ್ನು ಶಾಶ್ವತವಾಗಿ ಮತ್ತು ಗುಣಮಟ್ಟದಿಂದ ದುರಸ್ತಿಗೊಳಿಸಬೇಕಿದೆ. ಇಲ್ಲದಿದ್ದರೆ ಜಾಲತಾಣಗಳಲ್ಲಿ ಆಡಳಿತ ವ್ಯವಸ್ಥೆಯ ಮೇಲಿನ ಈ ಟ್ರೋಲ್ ಸಮರ ಹೀಗೆಯೇ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
"

ಕೊಡಗಿನಲ್ಲಿ ರಸ್ತೆಗಳು ಹಿಂದೆAದಿಗಿAತಲೂ ಹೆಚ್ಚು ಹದಗೆಟ್ಟುಹೋಗಿವೆ. ಮಡಿಕೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಗಳಿಗೆ ಎಲ್ಲಾ ರೀತಿಯಿಂದಲೂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕೊನೆಗೆ ಈಗ ಸಾಮಾಜಿಕ ಜಾಲತಾಣಗಳ ಮೊರೆ ಹೋಗಲಾಗಿದೆ. ರಸ್ತೆಗಳ ದುಸ್ಥಿತಿಯನ್ನೇ ಒಂದಿಷ್ಟು ಹಾಸ್ಯಮಯವಾಗಿ ಚಿತ್ರಿಸಿ ಟ್ರೋಲ್ ಮಾಡಲಾಗುತ್ತಿದೆ. ಈ ವ್ಯಂಗ್ಯ ಬಾಣಗಳಿಗಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕು.

— ಅಜಿತ್ ಕೊಟ್ಟಕೇರಿಯನ, ಸಾಮಾಜಿಕ ಹೋರಾಟಗಾರ
"

ಕೊಡಗಿನಲ್ಲಿ ಕಳೆದ ಬಾರಿಗಿಂತಲೂ ಈ ಸಾರಿ ಮತ್ತಷ್ಟು ಹದಗೆಟ್ಟ ರಸ್ತೆಗಳು ಮತ್ತು ಅದಕ್ಕೆ ಕಳಶವಿಟ್ಟಂತೆ ಗುಂಡಿಗಳು ಜಿಲ್ಲೆಯ ಜನತೆಗೆ ಜೀವಂತ ನರಕವನ್ನು ದಯಪಾಲಿಸುತ್ತಿವೆ. ಅಧಿಕಾರಿಶಾಹಿ ಆಡಳಿತ ವರ್ಗದ ನಿರ್ಲಕ್ಷ್ಯ ಮತ್ತು ಕಾಮಗಾರಿಗಳಲ್ಲಿ ಸರಿಯಾದ ಯೋಜನೆ ಹಾಗೂ ಯೋಚನೆಗಳಿಲ್ಲದ ಕಾರಣ ನಡೆಸಿದ ಶೇ.90ರಷ್ಟು ರಸ್ತೆಗಳ ತೇಪೆ, ಗುಂಡಿ ಮುಚ್ಚುವ ಕಾರ್ಯಗಳು ಸಂಪೂರ್ಣ ಕಳಪೆಯಾಗಿದ್ದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿವೆ. ಆಡಳಿತ ವ್ಯವಸ್ಥೆ ಮೀಮ್‌ಗಳನ್ನು ಗಮನಿಸಿ, ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಮಳೆಗಾಲ ಮುಗಿದ ಕೂಡಲೇ ಪೂರ್ಣ ಪ್ರಮಾಣದ ಡಾಂಬರೀಕರಣ ಮಾಡಿಸಲೇಬೇಕು.

— ಜೀವ್ ಮಞಂಡ್ರ, ನಾಲ್ಕುನಾಡು ನಿವಾಸಿ