ಆಲೂರು ತಾಲೂಕಿನ ಕುಂದೂರು ಹೋಬಳಿ ವಳಗರಹಳ್ಳಿ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮನೆ ಬಾಗಿಲಿಗೆ ಜಪ್ತಿ ನೋಟಿಸ್ ಅಂಟಿಸಿ ಜಪ್ತಿ ಮಾಡಿರುವುದನ್ನು ವಿರೋಧಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಬೀಗ ಒಡೆದು ಆಕ್ರೋಶ ವ್ಯಕ್ತಪಡಿಸಿದರು.
- ಬೀಗ ಒಡೆದು ಕುಟುಂಬ ಸದಸ್ಯರನ್ನು ಒಳಗೆ ಕಳುಹಿಸಿದ ರೈತ ಸಂಘ
ಆಲೂರು: ತಾಲೂಕಿನ ಕುಂದೂರು ಹೋಬಳಿ ವಳಗರಹಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಜಪ್ತಿ ನೋಟಿಸ್ ಅಂಟಿಸಿದ ಖಾಸಗಿ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿ ಜಪ್ತಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಗ್ರಾಮದ ಪುಟ್ಟಚಾರ್ ಮಗ ಪ್ರಸನ್ನ ಉಮಾವತಿ ದಂಪತಿ 2019ರ ಸಾಲಿನಲ್ಲಿ ಖಾಸಗಿ ಫೈನಾನ್ಸ್ ಬ್ಯಾಂಕ್‌ನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ತೀರಿಸಿದರೂ ಹೆಚ್ಚುವರಿ ಹಣವನ್ನು ಕಟ್ಟುವಂತೆ ಒತ್ತಾಯಿಸಿ ಸಿಬ್ಬಂದಿ ಮನೆ ಬಾಗಿಲಿಗೆ ಜಪ್ತಿ ನೋಟಿಸ್ ಅಂಟಿಸುವ ಮೂಲಕ ಮನೆಗೆ ಬೀಗ ಹಾಕಿದ್ದರು. ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಬೀಗ ಒಡೆದು ಕುಟುಂಬ ಸದಸ್ಯರನ್ನು ಒಳಗೆ ಕಳುಹಿಸಲಾಯಿತು.
ಮನೆ ಮಾಲೀಕರಾದ ಉಮಾವತಿ ಮಾತನಾಡಿ, 2019ರಲ್ಲಿ ಖಾಸಗಿ ಫೈನಾನ್ಸ್ ಬ್ಯಾಂಕ್‌ನಲ್ಲಿ ಮನೆಯನ್ನು ಆಧಾರ ಮಾಡಿ 2 ಲಕ್ಷ ರೂ.ಸಾಲ ಪಡೆದಿದ್ದೆವು. ಅದರಲ್ಲಿ ಫೈನಾನ್ಸ್‌ನವರು ನಮಗೆ 1.80 ಲಕ್ಷ ರೂ. ನೀಡಿದ್ದರು. ಈ ಹಣವನ್ನು ಕಷ್ಟಪಟ್ಟು ಕಟ್ಟಿದ್ದೇವೆ. ಆದರೂ ಬ್ಯಾಂಕ್ ಸಿಬ್ಬಂದಿ ಮತ್ತೆ ಪುನಃ 3.30 ಲಕ್ಷ ರೂ.ಹಣವನ್ನು ಕಟ್ಟುವಂತೆ ಹಿಂಸೆ ಕೊಡುತ್ತಿದ್ದು, ನಾವು ಅಷ್ಟೊಂದು ಹಣವನ್ನು ಕಟ್ಟಲು ಆಗುವುದಿಲ್ಲವೆಂದಾಗ ನಾವು ಇಲ್ಲದ ಸಮಯದಲ್ಲಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಪತಿಗೆ ಅನಾರೋಗ್ಯ ಕಾರಣದಿಂದ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದು ನಾವು ಅದನ್ನು ನೋಡಿಲ್ಲ. ಆಸ್ಪತ್ರೆಯಿಂದ ಬರುವಷ್ಟರಲ್ಲಿ ನಮ್ಮ ಮಗಳು ಒಬ್ಬಳೇ ಇದ್ದಾಗ ಅವಳನ್ನು ಮನೆಯಿಂದ ಹೊರಗೆ ತಳ್ಳಿ ಬೀಗ ಹಾಕಿಕೊಂಡು ಹೋಗಿದ್ದಾರೆ ನಾವು ಹಣವನ್ನು ನಿಗದಿಪಡಿಸಿದ ದಿನಕ್ಕೆ ಸರಿಯಾಗಿ ಪಾವತಿ ಮಾಡಿದ್ದರೂ ಬ್ಯಾಂಕ್ ಸಿಬ್ಬಂದಿ ಹಣವನ್ನು ಕಟ್ಟದೇ ನಮ್ಮ ಮೇಲೆ ಆರೋಪ ಹೊರೆಸುತ್ತಿದ್ದಾರೆ. ಇನ್ನೂ ಹೆಚ್ಚು ಹಣ ಕಟ್ಟುವಂತೆ ಹಿಂಸೆ ಕೂಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ಮಂಡಳಿ ಅಧ್ಯಕ್ಷ ಅಧ್ಯಕ್ಷ ಕಣಗಾಲ್ ಮೂರ್ತಿ ಮಾತನಾಡಿ, ಮನೆ ಅಡಮಾನ ಮಾಡಿ 2 ಲಕ್ಷ ರೂ.ಸಾಲ ಮಾಡಿದ ಕಾರಣ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡಿದ್ದು ಮನೆ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸಾಮಾನ್ಯ ಬಡ ಕುಟುಂಬದ ಮೇಲೆ ಖಾಸಗಿ ಬ್ಯಾಂಕ್ ಸಿಬ್ಬಂದಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇತ್ತೀಚೆಗೆ ಖಾಸಗಿ ಬ್ಯಾಂಕ್ ಸಿಬ್ಬಂದಿಯಿಂದ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು ಕೊಡಲೇ ಜಿಲ್ಲಾಧಿಕಾರಿ ಗಮನಹರಿಸಿ ಆ ಕುಟುಂಬಸ್ಥರಿಗೆ ನ್ಯಾಯ ಕೊಡಿಡಬೇಕು. ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ರಾತ್ರಿವೇಳೆ ಈ ಬಡಕುಟುಂಬ ಹೇಗೆ ಮಲಗಬೇಕು? ಆ ಕುಟುಂಬದ ಹೆಣ್ಣು ಮಗುವಿಗೆ ಸೂಕ್ತ ರಕ್ಷಣೆ ಏನು ಎಂದು ಪ್ರಶ್ನಿಸಿದ ಅವರು, ಅವರಿಗೆ ನ್ಯಾಯ ಸಿಗುವವರೆಗೂ ಜತೆಯಲ್ಲೇ ನಿಲ್ಲುತ್ತೇವೆ. ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ. ಆದ್ದರಿಂದ ಮನೆ ಬೀಗ ಒಡೆದು ಕುಟುಂಬಸ್ಥರಿಗೆ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಸಂಬಂಧ ಅಧಿಕಾರಿಗಳು ಕೂಡಲೇ ಖಾಸಗಿ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದಾರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಆಲೂರು ತಾಲೂಕು ರೈತ ಸಂಘದ ಅಧ್ಯಕ್ಷ ಕಿರಗಡಲು ಮನು, ರೈತ ಸಂಘದ ಮುಖಂಡರಾದ ಮರ್ಕುಲಿ, ಪ್ರಕಾಶ್, ವೆಂಕಟರಾಮು, ಯತೀಶ, ಶೋಭಾ ಇತರರು ಇದ್ದರು.