ರಣ್ಯದಂಚಿನ ಪ್ರದೇಶದಲ್ಲಿ ಆನೆ ಕಂದಕ ನಿರ್ಮಾಣ ಕಾಮಗಾರಿ 
ಕೊಡಗು

ನಿಯಂತ್ರಣಕ್ಕೆ ಬಾರದ ಕಾಡಾನೆಗಳ ಹಾವಳಿ

ಮಡಿಕೇರಿ:
ಸರ್ಕಾರ ಮತ್ತು ಅರಣ್ಯ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಹೊರತಾಗಿಯೂ ಕೊಡಗಿನಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ಬರುತ್ತಿಲ್ಲ. ಆನೆ ಸೇರಿದಂತೆ ಕಾಡುಪ್ರಾಣಿಗಳಿಂದ ಆಗುವ ದಾಳಿಗೆ ಸಂಬAಧಿಸಿದAತೆ ಆಗಾಗ್ಗೆ ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಕರಣಗಳು ವರದಿ ಆಗುತ್ತಲೇ ಇರುತ್ತದೆ. ಕಳೆದ ಆರು ವರ್ಷಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷದಿAದ ಜಿಲ್ಲೆಯಲ್ಲಿ 75 ಜನರು ಪ್ರಾಣ ಕಳೆದುಕೊಂಡಿದ್ದು, ಈ ವಿಷಯದಲ್ಲಿ ಕೊಡಗು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ಪಶ್ಚಿಮಘಟ್ಟದ ಸೆರಗಿನಲ್ಲಿರುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಆನೆ - ಮಾನವ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎಂಬAತಾಗಿದೆ. ಜಿಲ್ಲೆಯ ವಿಸ್ತೀರ್ಣದ ಪೈಕಿ ಶೇ. 33ರಷ್ಟು ಅರಣ್ಯ ಪ್ರದೇಶ ಹೊಂದಿರುವ ಕೊಡಗಿನಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ತಲಕಾವೇರಿ ವನ್ಯ ಜೀವಿಧಾಮ, ಪುಷ್ಪಗಿರಿ ಮತ್ತು ಬ್ರಹ್ಮಗಿರಿ ವನ್ಯಜೀವಿ ಧಾಮ ಸೇರಿದಂತೆ ಪ್ರಮುಖ ಉದ್ಯಾನವನಗಳಿವೆ. ಕೊಡಗಿನ ಮುಖ್ಯ ವಾಣಿಜ್ಯ ಬೆಳೆಯಾಗಿರುವ ಕಾಫಿಯನ್ನು ನೆರಳಿನ ವಾತಾವರಣದಲ್ಲಿ ಬೆಳೆಸುವುದರಿಂದ ಕಾಫಿ ತೋಟಗಳೂ ಒಂದು ರೀತಿಯಲ್ಲಿ ಅರಣ್ಯಗಳಂತಾಗಿದ್ದು, ಕಾಡಾನೆಗಳ ವಾಸಕ್ಕೆ ಅನುಕೂಲ ವಾತಾವÀರಣ ನಿರ್ಮಿಸಿವೆ.
ಕಳೆದ ದಶಕದಲ್ಲಿ ಬಿದಿರಿಗೆ ಕಟ್ಟೆ ಬಂದ ಕಾರಣದಿಂದ ಅರಣ್ಯದಲ್ಲಿ ಬಹುತೇಕ ಬಿದಿರು ನಾಶ ಆಗಿರುವುದು, ನೆಡು ತೋಪುಗಳಾಗಿ ಅರಣ್ಯಗಳು ಬದಲಾಗಿರುವುದು, ಹವಾಮಾನ ವೈಪರಿತ್ಯ ಮತ್ತಿತರ ಕಾರಣಗಳಿಂದ ಅರಣ್ಯದೊಳಗೆ ಈಚೆಗೆ ಆನೆಗಳಿಗೆ ಸೂಕ್ತ ಆಹಾರ ಸಿಗುತ್ತಿಲ್ಲ. ನೀರಿನ ಲಭ್ಯತೆಯೂ ಕಡಿಮೆ ಆಗಿದೆ. ಆನೆಗಳ ಗಣತಿ ವರದಿಯ ಮಾಹಿತಿ ಪ್ರಕಾರ ಕಾಡಿನಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ಆಹಾರ, ನೀರು ಸೇರಿದಂತೆ ಸುರಕ್ಷಿತ ವಾತಾವರಣ ಹುಡುಕಿಕೊಂಡು ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆ ಹಾಕುತ್ತಿರುವುದೇ ಆನೆ-ಮಾನವ ಸಂಘರ್ಷ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಕೋಟ್ಯಂತರ ರೂ. ಅನುದಾನವನ್ನು ಆನೆ ಹಾವಳಿ ತಡೆಗಾಗಿ ಖರ್ಚು ಮಾಡಲಾಗಿದೆ. ಕಾಡಾನೆ ಹಾವಳಿ ತಡೆಗಟ್ಟಲು ಪ್ರತಿ ಜಿಲ್ಲೆಗೊಂದರAತೆ ಅಧಿಕಾರಿ ಸಿಬ್ಬಂದಿ ಒಳಗೊಂಡ ಜಿಲ್ಲಾ ಆನೆ ಕಾರ್ಯಪಡೆ ರಚಿಸಲಾಗಿದೆ. ಕಾಡಾನೆ ಹಾವಳಿ ಹೆಚ್ಚಾಗಿರುವ ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ ಹಾಗೂ ಕೊಡಗು, ರಾಮನಗರ, ಬೆಂಗಳೂರ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಆನೆ ಕಾರ್ಯಾಚರಣೆ ಪಡೆಗಳು ಕಾರ್ಯನಿರ್ವಹಿಸುತ್ತಿವೆ.
ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಪುನಶ್ವೇತನಗೊಳಿಸಿ ವನ್ಯಪ್ರಾಣಿಗಳ ಆವಾಸ ಸ್ಥಾನವನ್ನು ಅಭಿವೃದ್ಧಿ ಗೊಳಿಸಲಾಗುತ್ತಿದೆ. ಈ ಮೂಲಕ ಕಾಡಾನೆ ಹಾಗೂ ಇತರ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಹುಲ್ಲುಗಾವಲು ಸಂರಕ್ಷಣೆ ಮತ್ತು ಅಭಿವೃದ್ಧಿಗೊಳಿಸಲು ಹೆಚ್ಚಿನ ಅರಣ್ಯ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆದ ಲಂಟಾನ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಹುಲ್ಲಿನ ಬೆಳವಣಿಗೆಗೆ ತೀವ್ರ ಅಡಚಣೆಯಾಗಿ ಅರಣ್ಯದಲ್ಲಿ ಹುಲ್ಲಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಹುಲ್ಲು ಬೆಳೆಯುವ ಪ್ರದೇಶಗಳಲ್ಲಿ ಬೆಳೆದಿರುವ ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಯಲು ಅವಕಾಶ ಕಲ್ಪಿಸಲಾಗಿದೆ.
ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ಹಳೆಯ ಬೇಲಿಗಳ ನಿರ್ವಹಣೆ, ಆನೆ ತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗಿದೆ. ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನೂ ಕೈಗೊಳ್ಳಲಾಗಿದೆ. ಕಾಡಾನೆ ಹಾವಳಿ ತುರ್ತು ನಿರ್ವಹಣೆಗಾಗಿ ಕ್ಷಿಪ ಕಾರ್ಯಪಡೆ ತಂಡಗಳನ್ನು ರಚಿಸಿ ನಿರ್ವಹಿಸಲಾಗುತ್ತಿದೆ. ಕಾಡಾನೆ ಹಿಮ್ಮೆಟ್ಟಿಸುವ ತಂಡಗಳನ್ನು ರಚಿಸಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ವೈಯರ್‌ಲೆಸ್ ಜಾಲದ ಮೂಲಕ ಮಾಹಿತಿ ಸಂವಹನ ಮಾಡಲಾಗುತ್ತಿದೆ. ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು ದಿನದ 24 ಗಂಟೆ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.
ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ, ಸೆರೆÀಹಿಡಿದು ಆಗ್ಗಿಂದಾಗ್ಗೆ ಸ್ಥಳಾಂತರಿಸಲಾಗುತ್ತಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಜನ ಸಂಪರ್ಕ ಸಭೆಯನ್ನು ಕರೆದು ಜನರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆದಿದೆ. ಇಷ್ಟಾದರೂ ಪೂರ್ಣ ಪ್ರಮಾಣದಲ್ಲಿ ಆನೆ-ಮಾನವ ಸಂಘರ್ಷವನ್ನು ಸಂರ್ಪೂವಾಗಿ ಹತ್ತಿಕ್ಕಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆನೆಗಳ ದಾಳಿಯಿಂದ ಕಳೆದ 6 ವರ್ಷಗಳಲ್ಲಿ ಕೊಡಗಿನಲ್ಲಿ 75 ಮಂದಿ ಮೃತಪಟ್ಟಿದ್ದಾರೆ.
2020-21ನೇ ಸಾಲಿನಲ್ಲಿ ನಾಗರಹೊಳೆ, ಮಡಿಕೇರಿ, ವಿರಾಜಪೇಟೆ ಹಾಗೂ ಮಡಿಕೇರಿ ವನ್ಯಜೀವಿ ವಲಯ ಒಳಗೊಂಡು ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ 13 ಜನ ಬಲಿಯಾಗಿದ್ದು, ಮೃತರ ಸಂಬAಧಿಕರಿಗೆ ಒಟ್ಟು 97.50 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 2021-22ನೇ ಸಾಲಿನಲ್ಲಿ 15 ಜನರು ಬಲಿಯಾಗಿದ್ದು 1.12 ಕೊಟಿ ರೂ. ಪರಿಹಾರ ಮೃತರ ಸಂಬAಧಿಕರಿಗೆ ಕೊಡಲಾಗಿದೆ. 2022-23ನೇ ಸಾಲಿನಲ್ಲಿ ಕಾಡಾನೆ ದಾಳಿಗೆ 10 ಜನ ಸಾವನ್ನಪ್ಪಿದ್ದು, 1.06 ಕೋಟಿ ಲಕ್ಷ ರೂ. ಪರಿಹಾರ ಕೊಡಲಾಗಿದೆ. 2023-24ನೇ ಸಾಲಿನಲ್ಲಿ 15 ಮಂದಿ ಮೃತರಾಗಿದ್ದು 2.10 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 8 ಮಂದಿ ಮೃತಪಟ್ಟಿದ್ದು, 1.20 ಕೋಟಿ ಪರಿಹಾರ ಕೊಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಇಲ್ಲಿಯ ತನಕ 14 ಮಂದಿ ಬಲಿಯಾಗಿದ್ದು 2.05 ಕೋಟಿ ರೂ. ಪರಿಹಾರ ಸರ್ಕಾರದಿಂದ ವಿತರಣೆ ಆಗಿದೆ.
ಕಾಡಾನೆಗಳನ್ನು ಒಳಗೊಂಡು ವನ್ಯಜೀವಿ-ಮಾನವ ಸಂಘರ್ಷದಿAದಾಗಿ ಅಂಗವೈಕಲ್ಯ, ಸಾಕು ಪ್ರಾಣಿಗಳ ಹತ್ಯೆ, ಬೆಳೆಗಳ ನಾಶ, ಆಸ್ತಿ ಹಾನಿಯಂತಹ ಪ್ರಕರಣಗಳೂ ನಡೆದಿದ್ದು, 2021-22ರಿಂದ ಈ ವರ್ಷದ ಮಾರ್ಚ್ 16ರ ನಡುವಿನ ಅವಧಿಯಲ್ಲಿ ಒಟ್ಟು 41,103 ಪ್ರಕರಣಗಳು ವರದಿಯಾಗಿದ್ದು, ಅರಣ್ಯ ಇಲಾಖೆ ಮೂಲಕ ಸಂತ್ರಸ್ತರಿಗೆ 43.58 ಕೊಟಿ ರೂ. ಪರಿಹಾರ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್ 16ರ ತನಕದ ಅವಧಿಯಲ್ಲೇ ಬರೋಬ್ಬರಿ 8,933 ಪ್ರಕರಣಗಳು ವರದಿಯಾಗಿದ್ದು, 11.74 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ.
ಸರ್ಕಾರ ಈಗ ತೆಗೆದುಕೊಳ್ಳುತ್ತಿರುವ ಕ್ರಮಗಳು ಆನೆ-ಮಾನವ ಸಂಘರ್ಷ ತಡೆಗಟ್ಟಲು ತಾತ್ಕಾಲಿಕ ಪರಿಹಾರವನ್ಮಷ್ಟೇ ನೀಡಬಲ್ಲದು ಎನ್ನುತ್ತಾರೆ ತಜ್ಞರು. ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊAಡಲ್ಲಿ ಮಾತ್ರ ಮಾನವ-ವನ್ಯಜೀವಿ ಸಂಘರ್ಷಕ್ಕೆ ಸಂಪೂರ್ಣ ಕಡಿವಾಣ ಹಾಕಬಹುದಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಕೊಡಗು ವೃತ್ತದಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟವುದಕ್ಕೋಸ್ಕರ ವಿವಿಧ ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದ್ದು ಅಂದಾಜು 290 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಿದೆ.
ನಾಗರಹೊಳೆ, ಮಡಿಕೇರಿ, ವಿರಾಜಪೇಟೆ ಹಾಗೂ ಮಡಿಕೇರಿ ವನ್ಯಜೀವಿ ವಲಯ ಒಳಗೊಂಡು ಕೊಡಗು ಅರಣ್ಯ ವೃತ್ತದಲ್ಲಿ ಒಟ್ಟು 899.10 ಕಿಮೀ ಅರಣ್ಯದಂಚಿನ ಪ್ರದೇಶದಲ್ಲಿ ಹೆಚ್ಚಿನ ಆನೆ-ಮಾನವ ಸಂಘರ್ಷ ಇರುವುದನ್ನು ಗುರುತಿಸಲಾಗಿದ್ದು, ಈ ಪೈಕಿ ಪ್ರದೇಶಕ್ಕೆ ಅನುಗುಣವಾಗಿ 23.75 ಕಿಮೀ ಆನೆ ಕಂದಕ, 102 ಕಿಮೀ ಸೋಲಾರ್ ಬೇಲಿ, 150.95 ಕಿಮೀ ರೈಲ್ವೇ ಬ್ಯಾರಿಕೇಡ್, 5.805 ಕಿಮೀ ಪ್ರದೇಶದಲ್ಲಿ ಇತರ ಕ್ರಮಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
"

ಸಿದ್ದಾಪುರದಲ್ಲಿ ಒಂದು ಆನೆ, ಚೆಂಬೆಳ್ಳೂರಿನಲ್ಲಿ ಒಂದು ಆನೆ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಮೂರು ಆನೆಗಳನ್ನು ಸೆರೆಹಿಡಿಯಲಾಗಿದೆ. ಇದೇ ರೀತಿಯಲ್ಲಿ ತೊಂದರೆ ಕೊಡುವ ಆನೆಗಳನ್ನು ಗುರುತಿಸಿ ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಆನೆಗಳನ್ನು ಹಿಡಿದ ಕೂಡಲೇ ಪರಿಸರವಾದಿಗಳು, ಎನ್‌ಜಿಒಗಳು ಇವರು ಆನೆಗಳನ್ನು ಹಿಡಿದುಬಿಟ್ಟರು ಎಂದು ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇವೆಲ್ಲವುಗಳ ನಡುವೆ ಸಮತೋಲನ ಕಾಯ್ದುಕೊಂಡು ಆನೆ-ಮಾನವ ಸಂಘರ್ಷ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. .

"

ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸ್ಥಳದ ಸೂಕ್ತತೆಯಂತೆ ಹಾಗೂ ಅನುದಾನದ ಲಭ್ಯತೆಗೆ ಅನುಗುಣವಾಗಿ ಸೌರಶಕ್ತಿ ಬೇಲಿ, ಆನೆತಡೆ ಕಂದಕ ನಿರ್ಮಾಣ ಮಾಡಲಾಗಿದ್ದು, ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ಉಪಯೋಗಿಸಿದ ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, 428 ಕಿಮೀ ರೈಲ್ವೇ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಈಶ್ವರ ಬಿ. ಖಂಡ್ರೆ, ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಖಾತೆ ಸಚಿವ