ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದಿಂದ ವಿರಾಜಪೇಟೆ ತಾಲೂಕು ಘಟಕಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. ರೆ.ಫಾ.ಮರಿಯರಾಜ್ ಜಾರ್ಜ್, ಜಾನ್ಸನ್ ಪಿಂಟೋ, ಅಂತೋಣಿ ಡಿ.ಸೋಜಾ, ಜೋಕಿಂ ರೋಡ್ರಿಗ್ರಸ್ಸ್, ಮರ್ವಿನ್ ಲೋಬೋ, ಜ್ಯೂಡಿವಾಜ್ ಇದ್ದರು. 
ಕೊಡಗು

ಸಮುದಾಯಗಳ ಅಭಿವೃದ್ಧಿಗೆ ಸಂಘಟನೆ ಮುಖ್ಯ

ಲೋಕೇಶ್ ಮನು. ಡಿ
ವಿರಾಜಪೇಟೆ : ಸಮುದಾಯ ಬಾಂಧವರು ಆಯೋಜಿಸುವ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸಂಘಟನೆ ಸಾಧ್ಯವಾಗುತ್ತದೆ. ಇದರಿಂದ ಸಮುದಾಯವೂ ಅಭಿವೃದ್ಧಿಯಾಗುತ್ತದೆ ಎಂದು ಪಾಲಿಬೆಟ್ಟ ಲೂರ್ದು ಮಾತೆ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ಮರಿಯರಾಜ್ ಜಾರ್ಜ್ ಅಭಿಪ್ರಾಯಪಟ್ಟರು.
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದಿಂದ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸಂಘಟನೆ ಮೂಲಕ ಭೇದ ಭಾವ ಇಲ್ಲದೆ ಹಿರಿಯ-ಕಿರಿಯ, ಬಡವ-ಬಲ್ಲಿದ ಎನ್ನದೆ ಸಮಾನವಾಗಿ ಬಾಳಬಹುದು. ಸಮುದಾಯಕ್ಕೆ ಸಂಘಟನೆ ಮುಖ್ಯ. ಕ್ರೈಸ್ತ ಬಾಂಧವರು ಸಂಘಟಿತರಾದಲ್ಲಿ ತಮಗೆ ಬೇಕಾದ ಸವಲತ್ತು ಪಡೆಯಬಹುದಾಗಿದೆ. ತಾಲೂಕು ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಲಾರೆನ್ಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಸುಭಾಷ್ ಮ್ಯಾಥ್ಯೂ, ಪ್ರಧಾನ ಕಾರ್ಯದರ್ಶಿಯಾಗಿ ತೆರೆಸಾ ವಿಕ್ಟರ್ ಆಯ್ಕೆಯಾದರು. ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಆಗಸ್ಟಿನ್ ಕ್ಸೆವಿಯರ್, ಪ್ರಧಾನ ಕಾರ್ಯದರ್ಶಿಯಾಗಿ ಬ್ಲೇಜ್ಹಿ ಸಿಕ್ವೇರ ಆಯ್ಕೆಯಾದರು. ಇವರೊಂದಿಗೆ ಪದಾಧಿಕಾರಿಗಳು ಹಾಗೂ ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೋಮನ್ ಕ್ಯಾಥೋಲಿಕ್ ಅಸೋಸಿಯೆಷನ್ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಂತೋಣಿ ಡಿಸೋಜಾ, ಉಪಧ್ಯಕ್ಷ ಜೋಕಿಂ ರೋಡ್ರಿಗಸ್ಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಮರ್ವಿನ್ ಲೋಬೋ, ಜಿಲ್ಲಾ ಸಂಚಾಲಕ ಜ್ಯೂಡಿವಾಜ್ ಇತರರಿದ್ದರು.