ಮಾರುಕಟ್ಟೆ ಕಳುಹಿಸಲು ಸಿದ್ಧವಾಗಿರುವ ಕೊಡಗಿನ ಕಿತ್ತಳೆ 
ಕೊಡಗು

ಕೊಡಗಿನಲ್ಲಿ ಕ್ಷೀಣಿಸುತ್ತಿದೆ ಕಿತ್ತಳೆ ಬೆಳೆ

ಸುನಿಲ್ ಪೊನ್ನೇಟಿ
ಮಡಿಕೇರಿ:
ಈಗ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡಿರುವ ಕೊಡಗು ಹಿಂದೊಮ್ಮೆ ಸವಿರುಚಿಯ ಕಿತ್ತಳೆಗೆ ಹೆಸರಾಗಿತ್ತು. ಇಲ್ಲಿಯ ಕಿತ್ತಳೆಯ ವಿಶೇಷ ರುಚಿ, ಪರಿಮಳ, ವಿಶಿಷ್ಟತೆ ಬಹಳ ಹಿಂದಿನಿAದಲೂ ವಿಶ್ವವ್ಯಾಪಿ. ಸ್ಥಳೀಯ ರೈತರಿಗೆ ಪ್ರಮುಖ ಆದಾಯದ ಮೂಲವಾಗಿದ್ದ ಕಿತ್ತಳೆ ಬೆಳೆಯುವ ಪ್ರದೇಶ ಕೊಡಗಿನಲ್ಲಿ ಈಗ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಅಲ್ಲಲ್ಲಿ ಕೆಲವರು ಮಾತ್ರ ಆಸಕ್ತಿ ತೋರಿಸುತ್ತಿದ್ದಾರೆ. ಈಗ ಅಂದಾಜು 7.5 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಕಿತ್ತಳೆ ಬೆಳೆಯಲಾಗುತ್ತಿದೆ.
1840ರ ಸುಮಾರಿಗೆ ಜಿಲ್ಲೆಯ ಬಾಣೆ ಭೂಮಿಯಲ್ಲಿ ಬ್ರಿಟಿಷರು ಕಿತ್ತಳೆ ಬೆಳೆಯಲು ಪ್ರಾರಂಭಿಸಲಾಯಿತು. 60, 70ರ ದಶಕದಲ್ಲಿ ಕೊಡಗಿನಲ್ಲಿ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಕಿತ್ತಳೆ ಬೆಳೆಯಲಾಗುತ್ತಿತ್ತು. 2005,06ಲ್ಲಿ ಕೊಡಗಿನ ವಿಶೇಷ ಕಿತ್ತಳೆಗೆ ಭೌಗೋಳಿಕ ಸೂಚಕದ ಸ್ಥಾನಮಾನವೂ ಸಿಕ್ಕಿದೆ. ಮೈಸೂರಿನ ವೀಳ್ಯದೆಲೆ, ನಂಜನಗೂಡಿನ ರಸಬಾಳೆಯಂತೆ ಕೊಡಗಿನ ಕಿತ್ತಳೆಯೂ ಕರ್ನಾಟಕದ ವೈಶಿಷ್ಟö್ಯವನ್ನು ಜಗತ್ತಿಗೆ ಸಾರಿದೆ.
ಕೃಷಿಗೆ ರಾಸಾಯನಿಕಗಳ ಸೋಂಕು ತಗುಲದಿದ್ದ ಆ ಕಾಲದಲ್ಲಿ ಕಿತ್ತಳೆ ಬೇಸಾಯ ಉನ್ನತ ಮಟ್ಟದಲ್ಲಿ ಇತ್ತು. ಮಣ್ಣು ಫಲವತ್ತಾಗಿ ಇದ್ದಿದ್ದರಿಂದ ಕೀಟ, ರೋಗಗಳ ಹಾವಳಿ ಇರದೇ ಸಮೃದ್ಧವಾಗಿ ಬೆಳೆಯುತ್ತಿತ್ತು.
ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಮಾರುಕಟ್ಟೆಯಲ್ಲಿ ಕೊಡಗಿನ ಕಿತ್ತಳೆಗೆ ಅಧಿಕ ಬೇಡಿಕೆ ಇತ್ತು. 1942-43ರಲ್ಲಿ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ ಸ್ಥಾಪನೆಯಾಯಿತು. ಕಿತ್ತಳೆ ಬೆಳೆಗೆ ಸಂಬAಧಿಸಿದ ಸಂಶೋಧನೆಗಳನ್ನು ನಡೆಸಲಿಕ್ಕಾಗಿಯೇ 1947ರಲ್ಲಿ ಚೆಟ್ಟಳ್ಳಿಯಲ್ಲಿ 200 ಎಕರೆ ಜಾಗದಲ್ಲಿ ಸಂಶೋಧನಾ ಕೇಂದ್ರವೂ ಆರಂಭವಾಯಿತು. ಕುಶಾಲನಗರದಲ್ಲಿ ಸಹಕಾರಿ ಸಂಘದ ಆಶ್ರಯದಲ್ಲಿ ಜ್ಯೂಸ್ ಫ್ಯಾಕ್ಟರಿ ಕೂಡ ಶುರುವಾಗಿತ್ತು. ಆದರೆ ಕಾಫಿ ತೋಟಗಳ ವಿಸ್ತಾರ ಹೆಚ್ಚುತ್ತಿದ್ದಂತೆಯೇ ಕಿತ್ತಳೆ ಅವನತಿಗೆ ಸರಿಯಲಾರಂಭಿಸಿತು.
ಕಾಫಿಗೆ ಉತ್ತಮ ಬೆಲೆ ಸಿಗಲಾರಂಭಿಸಿದಾಗ ಬೆಳೆಗಾರರು ಕಾಫಿಯನ್ನೇ ಪ್ರಮುಖ ಬೆಳೆ ಮಾಡಿಕೊಳ್ಳತೊಡಗಿದರು. ನೇರವಾಗಿ ಮತ್ತು ಎತ್ತರಕ್ಕೆ ಬೆಳೆಯುವ ಕಿತ್ತಳೆ ಗಿಡ ಕಾಫಿ ತೋಟದಲ್ಲಿ ನೆರಳಿನ ಗಿಡವಾಯಿತು. ಮುಖ್ಯ ಬೆಳೆಯಾಗಿದ್ದ ಕಾಫಿ ಅಂತರ ಬೆಳೆಯ ಸ್ಥಾನಕ್ಕೆ ಇಳಿಯಿತು. ಕಾಫಿ ತೋಟಗಳಲ್ಲಿ ರಾಸಾಯನಿಕ ಬಳಕೆ ಸಾಮಾನ್ಯವಾಗುತ್ತಿದ್ದಂತೆಯೇ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಕಿತ್ತಳೆಗೆ ಮಾರಕವಾಯಿತು. ಕೊಡಗಿನ ಕಿತ್ತಳೆ ತನ್ನ ನೈಸರ್ಗಿಕ ಸಾಮರ್ಥ್ಯ ಕಳೆದುಕೊಳ್ಳಲು ಇದು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
1950ರ ಸುಮಾರಿಗೆ ಕಿತ್ತಳೆ ಬೆಳೆಗೆ ಕಾಣಿಸಿಕೊಂಡ ಸಿಟ್ರಸ್ ಡೈ ಬ್ಯಾಕ್ ರೋಗ ಈ ಬೆಳೆಯನ್ನು ಬಹುತೇಕ ಆಪೋಶನ ತೆಗೆದುಕೊಂಡಿತು. 1980ರಿಂದ 90ರ ಅವಧಿಯಲ್ಲಿ ಕೊಡಗಿನ ಕಿತ್ತಳೆ ಸಂಪೂರ್ಣ ಮಾಯವಾಗುವ ಸ್ಥಿತಿ ತಲುಪಿಬಿಟ್ಟಿತು. ಕಾಫಿ ಗಿಡದ ಮೇಲೆ ಬಂದಣಿಕೆ ಪರಾವಲಂಬಿ ಗಿಡ ಬೆಳೆದದ್ದೂ ಮಾರಕವಾಯಿತು. ಇತ್ತೀಚಿನ ಕೆಲವು ವರ್ಷಗಳಿಂದ ಅಲ್ಲಲ್ಲಿ ಕೆಲವರು ಆಸಕ್ತಿಯಿಂದ ಕಿತ್ತಳೆಯನ್ನು ಉಪ ಬೆಳೆಯಾಗಿ ಬೆಳೆಯುತ್ತಿದ್ದರೂ ಬೇಡಿಕೆ ಪೂರೈಸುವಷ್ಟು ಸಿಗುತ್ತಿಲ್ಲ. ಕೊಡಗಿನ ಕಿತ್ತಳೆ ಜಾಗದಲ್ಲಿ ನಾಗಪುರ ಕಿತ್ತಳೆ ವಿಜೃಂಭಿಸುತ್ತಿದೆ. ಪ್ರವಾಸಿಗರಿಗೂ ಇದನ್ನೇ ಕೊಡಗಿನ ಕಿತ್ತಳೆ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ.
ಕೊಡಗಿನ ಕಿತ್ತಳೆ ಬಗ್ಗೆ ಆಸಕ್ತಿ ಇಟ್ಟು ಬೆಳೆಯುತ್ತಿರುವವರಲ್ಲಿ ಮಡಿಕೇರಿ ತಾಲೂಕು ದೇವಸ್ತೂರು ಗ್ರಾಮದ ಚಾಮೇರ ಸಂತು ಜಗನ್ ಕೂಡ ಒಬ್ಬರು. ಇವರಿಗೆ ಇರುವ 8 ಎಕರೆ ಜಾಗದಲ್ಲಿ ಸುಮಾರು 300 ಕಿತ್ತಳೆ ಗಿಡಗಳನ್ನು ನೆಟ್ಟಿದ್ದಾರೆ. 18 ವರ್ಷಗಳ ಹಿಂದೆ ನೆಟ್ಟ ಗಿಡಗಳು ಕಳೆದ 8 ವರ್ಷದಿಂದ ಸಮೃದ್ಧವಾಗಿ ಫಸಲು ಕೊಡುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಉತ್ತಮ ಫಸಲು ಬಂದಿದೆ ಎನ್ನುತ್ತಾರೆ ಸಂತು. ಕಿತ್ತಳೆ ವರ್ಷಕ್ಕೆರಡು ಬೆಳೆ ಬರುತ್ತದೆ. ಜೂನ್ - ಜುಲೈ ಮತ್ತು ಅಕ್ಟೊಬರ್ - ನವೆಂಬರ್ ತಿಂಗಳಿನಲ್ಲಿ ಫಲ ಸಿಗುತ್ತದೆ. ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ ಒಳ್ಳೆ ಫಲ ಇರುತ್ತದೆ. ದರವೂ ಚೆನ್ನಾಗಿರುತ್ತದೆ. ಅಕ್ಟೋಬರ್‌ನಲ್ಲಿ ನಾಗಪುರ ಕಿತ್ತಳೆ ಮಾರುಕಟ್ಟೆಗೆ ಬಂದು ಕೊಡಗಿನ ಕಿತ್ತಳೆಗೆ ಪೈಪೋಟಿ ನೀಡುತ್ತದೆ.
ಕೊಡಗಿನಲ್ಲಿ ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಕಿತ್ತಳೆ ಈಗ ಅಂದಾಜು 7.5 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದೆ. 60, 70ರ ದಶಕದಲ್ಲಿ ಮುಖ್ಯಬೆಳೆಯಾಗಿ ಮೆರೆದಿದ್ದ ಕೊಡಗಿನ ಕಿತ್ತಳೆ ಈಗ ಕಾಫಿ, ಕರಿ ಮೆಣಸಿನ ತೋಟದಲ್ಲಿ ಅಂತರಬೆಳೆಯಾಗಿ ಉಳಿದುಕೊಂಡಿದೆ. ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಕೊಡಗಿನ ಕಿತ್ತಳೆಯ ಹಳೆಯ ತೋಟಗಳ ಪುನಶ್ಚೇತನ ಕೆಲಸವೂ ನಡೆದಿದೆ. ರೋಗ ರಹಿತ ಕಸಿ ಗಿಡಗಳನ್ನು ರೈತರಿಗೆ ವಿತರಿಸುವ ಮೂಲಕ ಕಿತ್ತಳೆ ಬೆಳೆಯುವ ಪ್ರದೇಶ ವಿಸ್ತರಿಸುವ ಕೆಲಸವೂ ಆಗುತ್ತಿದೆ. ಹೊಸದಾಗಿ ಸುಮಾರು 7 ಸಾವಿರ ಎಕರೆ ಪ್ರದೇಶದಲ್ಲಿ ಕಿತ್ತಳೆ ಬೆಳೆಯಲು ತೋಟಗಾರಿಗೆ ಇಲಾಖೆ ಪ್ರಯತ್ನ ನಡೆಸಿದೆ.
"

ನಮ್ಮ ಕಾಫಿ ತೋಟದ ಮಧ್ಯದಲ್ಲಿ ಕಿತ್ತಳೆಯನ್ನು ಅಂತರಬೆಳೆಯನ್ನಾಗಿ ಬೆಳೆದಿದ್ದು, ಈಗ ಫಸಲು ಬಂದಿದೆ. ಮಳೆಗಾಲದ ಫಸಲು ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗುವ ಸಮಯದಲ್ಲಿ ಬರುತ್ತದೆ. ಕೊಡಗಿನ ಕಿತ್ತಳೆಗೆ ಎಲ್ಲೆಡೆ ಗ್ರಾಹಕರಿಂದ ತುಂಬಾ ಬೇಡಿಕೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರೋಗಗಳಿಂದಾಗಿ ಕೊಡಗಿನ ಕಿತ್ತಳೆ ಸಂಪೂರ್ಣ ನಾಶವಾಗುವ ಹಂತದಲ್ಲಿದ್ದು, ಇದಕ್ಕೆ ಇಲಾಖೆಯವರು ಕ್ರಮ ಕೈಗೊಂಡು ಕೊಡಗಿನ ಕಿತ್ತಳೆಯನ್ನು ಹೆಚ್ಚೆಚ್ಚು ಬೆಳೆಯುವಂತೆ ರೈತರನ್ನು ಪ್ರೇರೇಪಿಸಬೇಕಾಗಿದೆ.

— ಚಾಮೇರ ಸಂತು ಜಗನ್, ಕಿತ್ತಳೆ ಬೆಳೆಗಾರ, ದೇವಸ್ತೂರು

"

ಕಿತ್ತಳೆ ನೆನಪಿಸಿಕೊಳ್ಳದೇ ಕೊಡಗಿನ ಹೆಸರು ಹೇಳಲು ಸಾಧ್ಯವೇ ಇಲ್ಲದಷ್ಟರ ಮಟ್ಟಿಗೆ ಜಿಲ್ಲೆಯ ಜತೆಗೆ ಕಿತ್ತಳೆಯ ನಂಟು ಅಂಟಿಕೊAಡಿದೆ. ಇಲ್ಲಿಯ ವಿಶಿಷ್ಟ ಸ್ವಾಧ ಮತ್ತು ಗುಣದ ಕಿತ್ತಳೆ ಬೇರೆ ಎಲ್ಲಿ ಕೂಡ ಬೆಳೆಯಲು ಸಾಧ್ಯವೇ ಇಲ್ಲ. ಭೌಗೋಳಿಕ ಸೂಚಕದ ಮಾನ್ಯತೆ ಹೊಂದಿರುವ ಕೊಡಗಿನ ಕಿತ್ತಳೆಗೆ ಮತ್ತೆ ಗತ ವೈಭವ ಮರಳಬೇಕಿದೆ. ಈ ನಿಟ್ಟಿನಲ್ಲಿ ಕೊಡಗಿನ ಕಿತ್ತಳೆ ಪುನಶ್ಚೇತಕ್ಕೆ 2.37 ಕೋಟಿ ರೂ. ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

— ಡಾ. ಬಿ.ಎಂ ಮುರಳೀಧರ್, ಮುಖ್ಯಸ್ಥರು, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿ