ಮಡಿಕೇರಿ ನಗರಸಭೆಯ 2026-27ನೇ ಸಾಲಿನ ಬಜೆಟ್ ಮಂಡನೆ ಸಂದರ್ಭ ಆಡಳಿತ ಮತ್ತು ಪ್ರತಿಪಪಕ್ಷ ಸದಸ್ಯರ ಮಧ್ಯೆ ಬಿರುಸಿನ ಚರ್ಚೆ ನಡೆಯಿತು.
ಮಡಿಕೇರಿ: ಮಡಿಕೇರಿ ನಗರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು. ಅಧ್ಯಕ್ಷೆ ಪಿ. ಕಲಾವತಿ ಅವರಿಗೆ ಅನಾರೋಗ್ಯದ ಕಾರಣ ನೀಡಿ ಉಪಾಧ್ಯಕ್ಷ ಮಹೇಶ್ ಜೈನಿ 1.70 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು. ಆದರೆ ಬಜೆಟ್ ಮೇಲೆ ಚರ್ಚೆಗೆ ಅವಕಾಶ ಕೊಡದೆ ಸಭೆ ಮುಂದೂಡಿದ ಆಡಳಿತ ಪಕ್ಷದ ನಿರ್ಧಾರಕ್ಕೆ ಪ್ರತಿಪಕ್ಷ ಎಸ್‌ಡಿಪಿಐ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದು ಉಳಿತಾಯದ ಬಜೆಟ್ ಅಲ್ಲ, ಪಲಾಯನದ ಬಜೆಟ್ ಎಂದು ಲೇವಡಿ ಮಾಡಿದರು.
ಬಜೆಟ್ ಮಂಡನೆ ಸಂಬಂಧ ಕರೆಯಲಾಗಿದ್ದ ಸಭೆ ಆರಂಭದಿಂದಲೇ ಗೊಂದಲದ ಗೂಡಾಗಿತ್ತು. ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್ ಸ್ವಾಗತ ಭಾಷಣ ಮುಗಿಸಿ ಇನ್ನೇನು ಅಧ್ಯಕ್ಷೆ ಪಿ. ಕಲಾವತಿ ಬಜೆಟ್ ಮಂಡನೆ ಆರಂಭಿಸಬೇಕು ಎನ್ನುತ್ತಿದ್ದಂತೆಯೇ ಎಸ್‌ಡಿಪಿಐನ ಅಮೀನ್ ಮೊಹ್ಸಿನ್ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಬಜೆಟ್‌ಗೂ ಮೊದಲೇ ನಗರಸಭೆ ಬಜೆಟ್ ಮಂಡನೆ ಆಗಬೇಕಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಸಭೆ ಕರೆದಿರಲಿಲ್ಲ. ಆಯವ್ಯಯದ ಬಗ್ಗೆ ಸಂಪೂರ್ಣ ಚರ್ಚೆ ಆದ ನಂತರ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟರೆ ಮಾತ್ರ ಸೂಕ್ತ ಅನುದಾನ ಬರಲು ಸಾಧ್ಯ. ಆದರೆ ಆಡಳಿತ ಪಕ್ಷದ ಸದಸ್ಯರಿಗೆ ಇದರಲ್ಲಿ ಆಸಕ್ತಿಯೇ ಇಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಜವಾಬ್ದಾರಿ ಇದೆಯಾ ಎಂದು ಪ್ರಶ್ನಿಸಿದರು. ಎಂ.ಕೆ. ಮನ್ಸೂರ್ ಅಲಿ, ಮುಸ್ತಾಫ, ಬಷೀರ್ ಅಹಮ್ಮದ್ ಇದಕ್ಕೆ ಧ್ವನಿಗೂಡಿಸಿದರು.
ವಿರೋಧ ಪಕ್ಷದ ಆರೋಪದಿಂದ ಸಿಟ್ಟಾದ ಬಿಜೆಪಿಯ ಸತೀಶ್, ಅನಿತಾ ಪೂವಯ್ಯ, ಅರುಣ್ ಶೆಟ್ಟಿ, ಸವಿತಾ ರಾಕೇಶ್ ಎಸ್‌ಡಿಪಿಐ ಸದಸ್ಯರ ವಿರುದ್ಧ ಮುಗಿಬಿದ್ದರು. ಕೇವಲ ಪ್ರಚಾರಕ್ಕಾಗಿ ನೀವು ಈ ರೀತಿ ಮಾಡುತ್ತಿದ್ದೀರಿ. ಪ್ರತಿ ಬಾರಿಯೂ ಸಭೆಯ ದಾರಿ ತಪ್ಪಿಸುವ ಕೆಲಸ ನಿಮ್ಮಿಂದ ಆಗುತ್ತಿದೆ. ನಿಮಗೆ ಮಡಿಕೇರಿ ಅಭಿವೃದ್ಧಿ ಬೇಕಾಗಿಲ್ಲ. ಹಾಗಾಗಿ ನೀವುಗಳು ಪೂರ್ವಸಿದ್ಧತಾ ಸಭೆಗೂ ಆಗಮಿಸಿಲ್ಲ. ಆ ಸಭೆಗಳಿಗೆ ಯಾಕೆ ತಪ್ಪಿಸಿಕೊಂಡಿರಿ? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಮಹೇಶ್ ಜೈನಿ ಮಡಿಕೇರಿ ಅಭಿವೃದ್ಧಿಗೋಸ್ಕರ ಉತ್ತಮ ಬಜೆಟ್ ರೂಪಿಸಲಾಗಿದೆ. ಇದನ್ನು ಮಂಡಿಸಲು ಕರೆದಿರುವ ಸಭೆ ಹಾಳು ಮಾಡಬೇಡಿ. ಅಧ್ಯಕ್ಷರಿಗೆ ಅನಾರೋಗ್ಯದ ಕಾರಣ ತಾವೇ ಬಜೆಟ್ ಮಂಡಿಸುವುದಾಗಿ ಬಜೆಟ್ ಪ್ರತಿ ಓದಲು ಮುಂದಾಗುತ್ತಿದ್ದಂತೆಯೇ ವಿರೋಧ ಪಕ್ಷದ ಸದಸ್ಯರು ಮತ್ತೆ ಗದ್ದಲ ಶುರು ಮಾಡಿದರು.
ಅಮೀನ್ ಮೊಹಿಸೀನ್ ಮಾತನಾಡಿ, ಅಧ್ಯಕ್ಷರ ಉಪಸ್ಥಿತಿಯಲ್ಲೇ ಉಪಾಧ್ಯಕ್ಷರು ಬಜೆಟ್ ಮಂಡಿಸುವುದು ಯಾವ ಸಂಪ್ರದಾಯ? ಕಾನೂನಿನ ಪರಿಜ್ಞಾನ ಇಲ್ಲದವರು ಮಾತ್ರ ಮಾಡುವ ಕೆಲಸ ಇದು. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಮಾತ್ರ ಉಪಾಧ್ಯಕ್ಷರು ಬಜೆಟ್ ಮಂಡನೆ ಮಾಡಬಹುದು. ಬಜೆಟ್ ಮಂಡಿಸುವ ಸುವರ್ಣ ಅವಕಾಶವನ್ನು ಅಧ್ಯಕ್ಷರಿಂದ ಕಿತ್ತುಕೊಳ್ಳುವ ಮೂಲಕ ಉಪಾಧ್ಯಕ್ಷರು ದರ್ಪ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮಹೇಶ್ ಜೈನಿ, ಅಧ್ಯಕ್ಷರಿಗೆ ಆರೋಗ್ಯ ಸರಿ ಇಲ್ಲ. ಹಾಗಾಗಿ ಅವರ ಅನುಮತಿ ಪಡೆದುಕೊಂಡು ನಾನು ಬಜೆಟ್ ಮಂಡನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಎಂ.ಕೆ. ಮನ್ಸೂರ್ ಅಲಿ ಮಾತನಾಡಿ, ಅಧ್ಯಕ್ಷರಿಗೆ ಆರೋಗ್ಯ ಸರಿ ಇಲ್ಲ. ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಒಬ್ಬ ಮಹಿಳೆಗೆ ಅವಕಾಶ ಕೊಡದೇ ಅನ್ಯಾಯ ಮಾಡಲಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ ಜೈನಿ ಎಸ್‌ಡಿಪಿಐಗೆ ಮಹಿಳೆಯರ ಪರ ಕಾಳಜಿ ಇಲ್ಲ. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದರೂ ಒತ್ತಡ ಹೇರುವುದು ಸರಿಯಲ್ಲ ಎಂದರು. ಈ ಸಂದರ್ಭ ಮಾತನಾಡಿದ ಮಾಜಿ ಅಧ್ಯಕ್ಷೆಯೂ ಆದ ನಾಮನಿರ್ದೇಶಿತ ಸದಸ್ಯೆ ಜುಲೈಕಾಭಿ ನಾನೂ ನಗರಸಭೆ ಅಧ್ಯಕ್ಷೆ ಆಗಿದ್ದೆ. ಉಪಾಧ್ಯಕ್ಷರಿಗೆ ಇಂಥ ಯಾವುದೇ ಅಧಿಕಾರ ಬಿಟ್ಟುಕೊಟ್ಟಿರಲಿಲ್ಲ. ಅಧ್ಯಕ್ಷೆಯಾಗಿ ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೆ ಎನ್ನುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಅಧ್ಯಕ್ಷೆ ಪಿ. ಕಲಾವತಿ ಬಜೆಟ್ ಪ್ರತಿಯ ಒಂದೆರಡು ಸಾಲು ಓದಿ ನಂತರ ಉಪಾಧ್ಯಕ್ಷ ಮಹೇಶ್ ಜೈನಿ ಅದನ್ನು ಮುಂದುವರಿಸಿದರು. ಬಜೆಟ್ ಪ್ರತಿ ಓದಿ ಮುಗಿಸುತ್ತಿದ್ದಂತೆಯೇ ಸಭೆಯನ್ನೂ ಮುಗಿಸುತ್ತಿರುವುದಾಗಿ ಉಪಾಧ್ಯಕ್ಷರು ಘೋಷಣೆ ಮಾಡಿದರು. ಇದರಿಂದ ಸಿಟ್ಟಾದ ಪ್ರತಿಪಕ್ಷ ಸದಸ್ಯರು ಇದೆಂಥ ಬಜೆಟ್? ಚರ್ಚೆಗೆ ಅವಕಾಶ ಇಲ್ಲದೆ ಮುಗಿಸುತ್ತಿರುವುದು ಸರಿಯಲ್ಲ. ಇದು ಉಳಿತಾಯದ ಬಜೆಟ್ ಅಲ್ಲ, ಖೋತಾ ಬಜೆಟ್. ಚರ್ಚೆಗೆ ನಿಲ್ಲದೆ ಪಲಾಯನ ಮಾಡಿದ್ದಾರೆ. ಆಡಳಿತ ಪಕ್ಷದವರೇ ಸಭಾತ್ಯಾಗ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದರು. ಆದರೆ ಆಡಳಿತ ಪಕ್ಷದವರು ಇದಕ್ಕೂ ತಮಗೂ ಸಂಬಂಧ ಇಲ್ಲದಂತೆ ಎಲ್ಲರೂ ಸಭಾಂಗಣದಿಂದ ಹೊರನಡೆದರು.
1.76 ಕೋಟಿ ರೂ. ಉಳಿತಾಯದ ನಿರೀಕ್ಷೆ
ಮಡಿಕೇರಿ ನಗರಸಭೆಯಲ್ಲಿ 2026-27ನೇ ಸಾಲಿಗೆ 51,87,34,664 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಾಯಿತು. ಆರಂಭಿಕ ಶಿಲ್ಕು 13,30,64,164 ರೂ. ಆಗಿದ್ದು, ಸರ್ಕಾರದ ಅನುದಾನ ಸೇರಿದಂತೆ ಒಟ್ಟು 38,56,70,500 ರೂ. ಗಳ ಆದಾಯವನ್ನು ನಿರೀಕ್ಷಿಸಲಾಗಿದೆ. 50,16,70,500 ರೂ. ಖರ್ಚು ಅಂದಾಜಿಸಲಾಗಿದ್ದು, 1,70,64,164 ರೂ. ಉಳಿತಾವನ್ನು ಅಂದಾಜಿಸಲಾಗಿದೆ.
ಆದಾಯದ ಪೈಕಿ ಎಸ್‌ಎಫ್‌ಸಿ ವೇತನ ಅನುದಾನ 5 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನ 4.22 ಕೋಟಿ ರೂ., 15 ಮತ್ತು 16ನೇ ಹಣಕಾಸು ಯೋಜನೆ ಅನುದಾನ 3.32 ಕೋಟಿ ರೂ., ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ದಂಡ 1.18 ಕೋಟಿ ರೂ., ನೀರಿನ ತೆರಿಗೆ ಶುಲ್ಕಗಳು, ನೀರು ಸರಬರಾಜು ಸಂಪರ್ಕ ಶುಲ್ಕಗಳು ಮತ್ತು ದಂಡ 1.26 ಕೋಟಿ ರೂ., ಗುತ್ತಿಗೆದಾರರು, ಸರಬರಾಜುದಾರರಿಂದ ಠೇವಣಿಗಳು, ಬಾಡಿಗೆ ಠೇವಣಿಗಳಿಂದ 1.03 ಕೋಟಿ ರೂ. ಗುತ್ತಿಗೆದಾರರು, ನೌಕರರಿಂದ ಕಡಿತವಾದ ತೆರಿಗೆ ಮತ್ತು ವಸೂಲಾತಿಯಿಂದ 1.27 ಕೋಟಿ ರೂ. ಹಾಗೂ ಆಸ್ತಿ ತೆರಿಗೆ, ಕಟ್ಟಡ ಪರವಾನಗಿಯಲ್ಲಿ ಸಂಗ್ರಹಿಸಿದ ಉಪಕರಗಳು 1.42 ಕೋಟಿ ರೂ. ಸೇರಿದಂತೆ ನಗರಸಭೆಯ ವಿವಿಧ ಮೂಲಗಳಿಂದ ಒಟ್ಟು 31.685 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ.
ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರೂ., ತಡೆಗೋಡೆ ನಿರ್ಮಾಣ, ರಸ್ತೆ, ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿಗೆ 3.75 ಕೋಟಿ ರೂ., ವಾರ್ಡ್ ಅಭಿವೃದ್ಧಿ 2 ಕೋಟಿ ರೂ., ಪಾವತಿಸಿ ಉಪಯೋಗಿಸುವ ಶೌಚಗೃಹ ನಿರ್ಮಾಣಕ್ಕೆ 2.25 ಕೋಟಿ ರೂ., ನೈರ್ಮಲ್ಯ ವಾಹನ ಖರೀದಿಗೆ 1 ಕೋಟಿ ರೂ., ನೀರು ಸರಬರಾಜು ಯಂತ್ರೋಕರಣಗಳ ಖರೀದಿಗೆ 1.25 ಕೋಟಿ ರೂ., ಕೆರೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರೂ., ಅಧಿಕಾರಿ, ಸಿಬ್ಬಂದಿ ವೇತನ ಮತ್ತು ಭತ್ಯೆಗೆ 5 ಕೋಟಿ ರೂ., ಸೇರಿದಂತೆ 43.285 ಕೋಟಿ ರೂ.ಗಳ ಖರ್ಚು ನಿರೀಕ್ಷಿಸಲಾಗಿದೆ.