ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಬದಂಚೆಟ್ಟಿರ ದೇವಿ ದೇವಯ್ಯ ಅವರ ಮನೆ ಸಮೀಪದ ತೋಟ ಮೂಲಕ ಹಾದುಹೋದ ಕಾಡಾನೆಗಳು.
ನಾಪೋಕ್ಲು: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಶನಿವಾರ ಜರಗಿತು.
ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ಕಾಡಾನೆಗಳ ಉಪಟಳದಿಂದ ತತ್ತರಿಸಿದ್ದು ಕಾಡಾನೆಗಳನ್ನು ಕಾಡಿಗಟ್ಟುವಂತೆ ಅರಣ್ಯ ಇಲಾಖೆಯ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳನ್ನು ಕಾಡಿಗಟ್ಟಲಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಿದರು. ಗ್ರಾಮದ ಕಾಫಿ ಬೆಳೆಗಾರ ಬದಂಚೆಟ್ಟಿರ ದೇವಿ ದೇವಯ್ಯ ಅವರ ಮನೆಯ ಸಮೀಪದಲ್ಲಿ ಕಾಫಿ ತೋಟ ಸೇರಿದಂತೆ ಹಲವರ ತೋಟಗಳ ಮೂಲಕ ಹಾದುಹೋದ ಕಾಡಾನೆಗಳನ್ನು ಯಶಸ್ವಿಯಾಗಿ ಕಾಡಿಗಟ್ಟಲಾಯಿತು.
ಈ ಭಾಗದಲ್ಲಿ ಪದೇ ಪದೆ ಕಾಡಾನೆಗಳ ಉಪಟಳ ಇದೆ. ಒಮ್ಮೆ ಕಾಡಿಗಟ್ಟಿದರೆ ಮತ್ತೆ ಕೆಲವೇ ದಿನಗಳಲ್ಲಿ ಕಾಡಾನೆಗಳು ಬರುತ್ತಿವೆ. ಕಾಫಿ, ಬಾಳೆ, ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಧ್ವಂಸಗೊಳಿಸುತ್ತಿವೆ. ಕೃಷಿಕರಿಗೆ ನಿರಂತರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು. ಕಾಡಾನೆಗಳನ್ನು ಕಾಡಿಗಟ್ಟಿ ರೈತರ ಹಿತ ಕಾಪಾಡಬೇಕೆಂದು ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.