ಡ್ರೋನ್‌ನಲ್ಲಿ ಸೆರೆಯಾದ ಕಾಡಾನೆ ಹಿಂಡು. 
ಕೊಡಗು

ಕಾಟಿಬಾಣೆ ಬೆಟ್ಟದಕಾಡು ಭಾಗದಲ್ಲಿ ಕಾಡಾನೆ ಓಡಿಸುವ ಕಾರ್ಯಾಚರಣೆ

ಸಿದ್ದಾಪುರ: ಕುಶಾಲನಗರ ಅರಣ್ಯ ವಲಯದ ಮೀನುಕೊಲ್ಲಿ ಶಾಖೆ ವ್ಯಾಪ್ತಿಯ ಅಭ್ಯತ್‌ಮಂಗಲ, ನೆಲ್ಲಿಹುದಿಕೇರಿ ಗ್ರಾಮದ ಕಾಟಿಬಾಣೆ ಹಾಗೂ ಬೆಟ್ಟದಕಾಡು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಶುಕ್ರವಾರ ಭರದಿಂದ ನಡೆಯಿತು.
ಕಾರ್ಯಾಚರಣೆಯಲ್ಲಿ ಮಡಿಕೇರಿ, ಅರೆಕಾಡು, ಆನೆಕಾಡು, ಅತ್ತೂರು, ಮೀನುಕೊಲ್ಲಿ, ದುಬಾರೆ ಹಾಗೂ ಮಾಲ್ದಾರೆ ಭಾಗಗಳ ಆರ್‌ಆರ್‌ಟಿ ಇಟಿಎಫ್ ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ಕಾಡಾನೆಗಳ ಚಲನವಲನವನ್ನು ಪತ್ತೆ ಹಚ್ಚಲು ಡ್ರೋನ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಆನೆಗಳು ಒಂದು ಕಾಫಿ ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಸಿಬ್ಬಂದಿ ನಿರಂತರ ನಿಗಾವಹಿಸಿ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯ ವೇಳೆ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಸ್ಪಂದಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಮೀನುಕೊಲ್ಲಿ ಡಿಆರ್‌ಎಫ್‌ಒ ಸಚಿನ್ ನಿಂಬಾಳ್ಕರ್, ಮೂರ್ನಾಡು ಡಿಆರ್‌ಎಫ್‌ಒ ರವಿ ಮುಂಡ್ರೋಟೆ, ಮೀನುಕೊಲ್ಲಿ ಬಿಎಫ್‌ಒ ನಾಗರಾಜ್ ರಾಡರಟ್ಟಿ, ಮೂರ್ನಾಡು ಬಿಎಫ್‌ಒ ಮಂಜುನಾಥ್ ಅವರ ನೇತೃತ್ವದಲ್ಲಿ ಕುಶಾಲನಗರ ವಲಯದ ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾಡಾನೆಗಳು ಇನ್ನೂ ತೋಟಗಳ ನಡುವೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸಂಪೂರ್ಣವಾಗಿ ಕಾಡಿಗೆ ಹಿಮ್ಮೆಟ್ಟಿಸುವ ಉದ್ದೇಶದಿಂದ ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ತೋಟ ಕಾರ್ಮಿಕರು ಎಚ್ಚರಿಕೆ ವಹಿಸಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.