ಸೋಮವಾರಪೇಟೆ ಹಿಂದು ಮಲೆಯಾಳ ಸಂಘದ ವತಿಯಿಂದ ನಡೆದ ಓಣಂ ಉತ್ಸವ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು. ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಗಂಗಾಜೀ ನಾಯರ್, ಪ್ರಕಾಶ್, ಭರತ್ ಇದ್ದರು.
- ಸಂಸ್ಕೃತಿಯನ್ನು ಬಿಂಬಿಸುವ ಉಡುಪುಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳ ಸೊಬಗು
ಸೋಮವಾರಪೇಟೆ : ಹಿಂದು ಮಲೆಯಾಳಿ ಸಮಾಜದ ಆಶ್ರಯದಲ್ಲಿ ಓಣಂ ಉತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ 7ಗಂಟೆಯಿಂದ ಜಾನಕಿ ಹಾಲ್‌ನಲ್ಲಿ ನಡೆದ ಪೂಕಳಂ ಸ್ಪರ್ಧೆ ಜನಮೆಚ್ಚಿಗೆ ಗಳಿಸಿತು. ಜಾವ ಶ್ರೀ ಮುತ್ತಪ್ಪ ದೇವಾಲಯದಿಂದ ಸಿಂಗಾರಿ ಮೇಳದೊಂದಿಗೆ ಓಣಂ ಘೋಷಯಾತ್ರೆ ಮಲೆಯಾಳಿ ಸಮಾಜದವರ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಪುಗಳೊಂದಿಗೆ ಮಹಿಳೆಯರು ಮತ್ತು ಮಕ್ಕಳು ಸೊಬಗು ತುಂಬಿದರು.
ಘೋಷಯಾತ್ರೆ ಜಾನಕಿ ಕನ್ವೆನಸನ್ ಹಾಲ್‌ನಲ್ಲಿ ಅಂತ್ಯಗೊಂಡ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿ ಮಾತನಾಡಿದ ಅವರು, ಓಣಂ ಎಂದರೆ ಕೇವಲ ಹಬ್ಬವಲ್ಲ ಅದು ಸಮಾನತೆಯ ಸಂಕೇತ, ಪ್ರೀತಿಸೌಹಾರ್ದದ ಪರಂಪರೆ, ಪ್ರಕೃತಿ, ಕೃಷಿ ಮತ್ತು ಮಾನವೀಯ ಮೌಲ್ಯಗಳ ಆಚರಣೆ. ಕೇರಳ ರಾಜ್ಯದ ವಿಶೇಷ ಸಂಸ್ಕೃತಿಯನ್ನು ಮಲೆಯಾಳ ಸಮುದಾಯವು ಸೋಮವಾರಪೇಟೆಯಲ್ಲಿ ಉಳಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮಹಾಬಲಿ ಚಕ್ರವರ್ತಿಯ ಕಾಲದ ಸಮೃದ್ಧಿ, ಸುಖ-ಸೌಹಾರ್ದದ ನೆನಪಾಗಿ ಈ ಹಬ್ಬ ಬರುವುದರಿಂದ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಗೆ ಹೆಚ್ಚಿನ ಒತ್ತುವರಿ ನೀಡಬೇಕು ಎಂದು ಹೇಳಿದರು.
ಸಮಾಜದ ಅಭಿವೃದ್ಧಿ, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಯುವಕರಿಗೆ ಅವಕಾಶ ಸೃಷ್ಟಿಸುವ ದಿಶೆಯಲ್ಲಿ ಸಂಘಟನೆ ಕೈಗೊಂಡಿರುವ ಕಾರ್ಯಗಳನ್ನು ಶಾಸಕರು ಹೊಗಳಿದರು.
ಇಂತಹ ಸಾಂಸ್ಕೃತಿಕ ಹಬ್ಬಗಳು ನಾಡಿನ ಒಗ್ಗಟ್ಟು ಹೆಚ್ಚಿಸುತ್ತವೆ. ಮಕ್ಕಳಲ್ಲಿ ಕಲೆ-ಸಂಸ್ಕೃತಿಯ ಅರಿವು ಬೆಳೆಸುತ್ತವೆ. ನಾವು ಸದಾ ಸಮಾಜದ ಒಳ್ಳೆಯ ಕಾರ್ಯಗಳಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ತಾಲೂಕು ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಸೋಲೂರು ಆರ್ಯ ಈಡಿಗಾ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೇರಳ ಕಾಞಂಗಾಡ್ ಗೃಹಸ್ಥಾಶ್ರಮದ ಶ್ರೀ ಗಂಗಾಜೀ ನಾಯರ್, ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಾದವನ್, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್,ಪ್ರಮುಖರಾದ ರಾಜೇಶ್,ಉಣ್ಣಿಕೃಷ್ಣ, ಎಲ್.ರಾಜೇಶ್, ವಿ.ಕೆ. ಲೋಕೇಶ್, ಪದ್ಮನಾಭ, ವಿನೋದ್ ಕುಮಾರ್,ಸಂತೋಷ್,ಬಾಲಕೃಷ್ಣ,ಹರೀಂದ್ರನ್ ಮತ್ತಿತರ ಗಣ್ಯರು ಇದ್ದರು. 40 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.