ಶ್ರೀ ಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥಾ ಪುಸ್ತಕ ಸೋಮವಾರ ಲೋಕಾರ್ಪಣೆಗೊಂಡಿತು. ಬಿ.ಕೆ.ಗಣೇಶ್ ರೈ, ಕೊಂಗಂಡ ಎಸ್.ದೇವಯ್ಯ, ಚುಮ್ಮಿ ದೇವಯ್ಯ ಇತರರಿದ್ದರು.
- ಓಂಕಾರೇಶ್ವರ ದೇವಾಲಯ ಚಿತ್ರಕಥಾ ಲೋಕಾರ್ಪಣೆ
ಮಡಿಕೇರಿ: ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ವಿನ್ಯಾಸಗೊಳಿಸಿರುವ ಶ್ರೀ ಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥಾ ಪುಸ್ತಕ ಸೋಮವಾರ ಲೋಕಾರ್ಪಣೆಗೊಂಡಿತು.
ಶ್ರೀಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಅರ್ಪಿಸಿದ ನಂತರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಅವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕಥಾ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಶ್ರೀ ಓಂಕಾರೇಶ್ವರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ಅವರು ಪಾಲ್ಗೊಂಡು ಪ್ರಥಮ ಕೃತಿಯನ್ನು ಸ್ವೀಕರಿಸಿದರು.
ಪುಸ್ತಕ ಲೋಕಾರ್ಪಣೆಗೊಂಡ ನಂತರ ಮಾತನಾಡಿದ ಬಿ.ಕೆ.ಗಣೇಶ್ ರೈ, ಮಡಿಕೇರಿಯನ್ನು ಆಳಿರುವ ಹಾಲೇರಿ ವಂಶದ ರಾಜಮನೆತನದ ವಿವರ, ಐತಿಹಾಸಿಕ ಅರಮನೆ ಹಾಗೂ ಶ್ರೀ ಓಂಕಾರೇಶ್ವರ ದೇವಾಲಯ ನಿರ್ಮಾಣದ ಹಿನ್ನೆಲೆಯನ್ನು ವರ್ಣರಂಜಿತ ಚಿತ್ರಗಳೊಂದಿಗೆ ಸುಂದರವಾಗಿ ಮೂಡಿ ಬಂದಿದೆ. ಚಿತ್ರಕಥಾ ಪುಸ್ತಕ ಮಾಲಿಕೆಯು ಕನ್ನಡ ಮತ್ತು ಇಂಗೀಷ್ ಭಾಷೆಯಲ್ಲಿ ಮುದ್ರಣವಾಗಿದೆ ಎಂದರು.