ಸುದ್ದಿಗೋಷ್ಠಿಯಲ್ಲಿ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಕೆ.ಸುದೀಪ್‌ಕುಮಾರ್, ಕಾರ್ಯದರ್ಶಿ ಬಿ .ಕೆ. ರವಿಕುಮಾರ್, ನಿರ್ದೇಶಕರಾದ ಎಂ .ಎನ್. ಮೊಣ್ಣಪ್ಪ, ಎಂ.ಸಿ.ಸತೀಶ್, ಎ .ಎನ್ .ಸುಬ್ಬಯ್ಯ ಎಚ್. ಆರ್. ಸುರೇಶ್ ಉಪಸ್ಥಿತರಿದ್ದರು. 
ಕೊಡಗು

26ರಂದು ಸಿಸಿ ಕ್ಯಾಮರಾಗಳ ಅಧಿಕೃತ ಉದ್ಘಾಟನೆ

ಪ್ರಮುಖ ಮುಖ್ಯಾಂಶಗಳು

  • ಅಪರಾಧ ಪತ್ತೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಉದ್ದೇಶ
  • ಆಯಾಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾ
ಕುಶಾಲನಗರ: ಅಪರಾಧ ಪತ್ತೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಉದ್ದೇಶದೊಂದಿಗೆ ಇಲ್ಲಿನ ಆಯಾಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾಗಳ ಅಧಿಕೃತ ಉದ್ಘಾಟನೆ ಮತ್ತು ಅವುಗಳನ್ನು ಕುಶಾಲನಗರ ಪುರಸಭೆ ಮತ್ತು ಪೊಲೀಸ್ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮ ಡಿ.26ರಂದು ನಡೆಯಲಿದೆ ಎಂದು ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ತಿಳಿಸಿದ್ದಾರೆ.
ಕುಶಾಲನಗರದಿಂದ ಮುಳ್ಳುಸೋಗೆ ಮೂಲಕ ಹಾರಂಗಿ ಕಡೆಗೆ ತೆರಳುವ ರಸ್ತೆಯಲ್ಲಿ ನಿರಂತರವಾಗಿ ತ್ಯಾಜ್ಯ ಎಸೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರದೇಶ ಮಾಲಿನ್ಯಕ್ಕೊಳಗಾಗಿತ್ತು. ಇದರ ಕುರಿತಾಗಿ ಫಲಕಗಳನ್ನು ಅಳವಡಿಸಿದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ದೇವಾಲಯ ಸಮಿತಿ ಹಾಗೂ ವೈಯಕ್ತಿಕವಾಗಿ ಹಣ ಕ್ರೋಡೀಕರಿಸಿ ಸುಮಾರು 15ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದು, ಇದೀಗ ಈ ವ್ಯಾಪ್ತಿಯಲ್ಲಿ ಸಮಸ್ಯೆಗೊಂದು ಪರಿಹಾರ ದೊರಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿರುವ ಕಾಫಿ ಮತ್ತು ಇತರ ಉತ್ಪಾದಕಾ ಘಟಕಗಳ ಮುಖ್ಯಸ್ಥರು ತಮ್ಮೊಂದಿಗೆ ಕೈಜೋಡಿಸಿದ್ದಾರೆ. ಅಂದು ಸಂಜೆ 4 ಗಂಟೆಗೆ ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕವಾಗಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಸ್ತಾಂತರ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಮಿತಿ ಅಧ್ಯಕ್ಷ ಬಿ.ಕೆ. ಸುದೀಪ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಡಿಕೇರಿ ಶಾಸಕ ಮಂತರ್‌ಗೌಡ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಉದ್ಯಮಿಗಳಾದ ಎನ್.ಸಾತಪ್ಪನ್, ಎನ್.ವಿಶ್ವನಾಥನ್ ಮತ್ತು ಈಶ್ವರನ್ ಜವಾಹರ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಪೌರಕಾರ್ಮಿಕರಾದ ಸತೀಶ್ ಮತ್ತು ರಾಜೇಶ್ವರಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ನಿರ್ದೇಶಕರಾದ ಎಂ.ಎನ್.ಮೊಣ್ಣಪ್ಪ, ಎಂ.ಸಿ. ಸತೀಶ್, ಎ.ಎನ್.ಸುಬ್ಬಯ್ಯ ಎಚ್.ಆರ್.ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.