ಸಿದ್ದಾಪುರದಲ್ಲಿ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳು ಆಟೋ, ಟ್ಯಾಕ್ಸಿ, ಬಸ್ ಚಾಲಕರು, ಅಂಗಡಿ ಮಾಲೀಕರು ಹಾಗೂ ಚಿಕನ್ ವ್ಯಾಪಾರಿಗಳೊಂದಿಗೆ ಗುರವಾರ ಸಂಜೆ ಸಭೆ ನಡೆಸಿ ಚರ್ಚಿಸಿದರು. ಪ್ರದೀಪ್‌ಕುಮಾರ್, ಮಂಜುನಾಥ್ ಇತರರಿದ್ದರು. 
ಕೊಡಗು

ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ

ಎಂ.ರವಿ
ಸಿದ್ದಾಪುರ: ಸಾರ್ವಜನಿಕರ ಸುರಕ್ಷಿತ ಸಂಚಾರ, ಪಟ್ಟಣದ ಸ್ವಚ್ಛತೆ ಹಾಗೂ ವಾಹನ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ಸಿದ್ದಾಪುರದಲ್ಲಿ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳು ಆಟೋ, ಟ್ಯಾಕ್ಸಿ, ಬಸ್ ಚಾಲಕರು, ಅಂಗಡಿ ಮಾಲೀಕರು ಹಾಗೂ ಚಿಕನ್ ವ್ಯಾಪಾರಿಗಳೊಂದಿಗೆ ಗುರವಾರ ಸಂಜೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಆರ್‌ಟಿಒ ಅಧಿಕಾರಿ ಪ್ರದೀಪ್‌ಕುಮಾರ್ ಮಾತನಾಡಿ, ವಾಹನಗಳಲ್ಲಿ ನಿಯಮಬಾಹಿರ ಬದಲಾವಣೆ (ಆಲ್ಟರೇಷನ್) ಮಾಡಿರುವುದು ಕಂಡುಬಂದರೆ ಅಂತಹ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಟೋ ಹಾಗೂ ಟ್ಯಾಕ್ಸಿ ಚಾಲಕರು ವಾಹನಗಳ ವಿಮೆ, ಫಿಟ್‌ನೆಸ್ ಪ್ರಮಾಣಪತ್ರ, ಮಾಲಿನ್ಯ ನಿಯಂತ್ರಣ (ಎಮಿಷನ್) ಪ್ರಮಾಣಪತ್ರ ಸೇರಿದಂತೆ ಎಲ್ಲ ದಾಖಲೆಗಳನ್ನು ನವೀಕರಿಸಿಕೊಂಡಿರಬೇಕು ಎಂದು ಸೂಚಿಸಿದರು.
ನಿಗದಿತ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಬಾರದು ಹಾಗೂ ಬಸ್ ನಿಲ್ದಾಣದೊಳಗೆ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ ಅವರು, ಕರ್ತವ್ಯದ ವೇಳೆ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದರು.
ಸಭೆಯಲ್ಲಿ ಸ್ವಚ್ಛ ಸಿದ್ದಾಪುರ ಅಭಿಯಾನದ ಅಂಗವಾಗಿ ಚಿಕನ್ ಅಂಗಡಿ ಮಾಲೀಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚಿಕನ್ ತ್ಯಾಜ್ಯ ಎಸೆಯುವುದನ್ನು ತಕ್ಷಣವೇ ನಿಲ್ಲಿಸಬೇಕು. ನಿಯಮ ಉಲ್ಲಂಘಿಸಿದರೆ ಪಂಚಾಯಿತಿ ಕ್ರಮದ ಜತೆಗೆ ಪೊಲೀಸ್ ಇಲಾಖೆಯೂ ನೇರವಾಗಿ ಪ್ರಕರಣ ದಾಖಲಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದರು.
ಇದೇ ವೇಳೆ ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಪಾಕಿರ್ಂಗ್ ಸಮಸ್ಯೆ ಕುರಿತು ಚರ್ಚೆ ನಡೆಸಲಾಯಿತು. ಆಸ್ಪತ್ರೆಗಳ ಮುಂಭಾಗ ಸೇರಿದಂತೆ ರಸ್ತೆ ಬದಿಯಲ್ಲಿ ದಿನವಿಡೀ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಎಲ್ಲ ಅಂಗಡಿ ಮಾಲೀಕರ ಸಭೆ ಕರೆದು ಪಾಕಿರ್ಂಗ್ ವ್ಯವಸ್ಥೆ ಹಾಗೂ ಸಂಚಾರ ಸುಗಮಗೊಳಿಸುವ ಕುರಿತು ಮಾರ್ಗಸೂಚಿ ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿದ್ದಾಪುರ ಠಾಣಾ ಅಧಿಕಾರಿ ಮಂಜುನಾಥ್,ಆರ್‌ಟಿಒ ಅಧಿಕಾರಿಗಳು, ಆಟೋ-ಟ್ಯಾಕ್ಸಿ ಸಂಘದ ಪ್ರತಿನಿಧಿಗಳು, ಬಸ್ ಚಾಲಕರು, ಅಂಗಡಿ ಮಾಲೀಕರು ಹಾಗೂ ಚಿಕನ್ ವ್ಯಾಪಾರಿಗಳು ಉಪಸ್ಥಿತರಿದ್ದರು.