ಸುಂಟಿಕೊಪ್ಪದ ಮಂಜುನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆ ಕಾರ್ಯಕ್ರಮದಲ್ಲಿ ಎಪಿಸಿಎಂಎಸ್ ಅಧ್ಯಕ್ಷ ಮತ್ತು ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು. ಜೆರ್ಮಿಡಿಸೋಜ, ಎಂ.ಎಂ.ಶಾಮಲಾ, ಲೀಲಾಮೇದಪ್ಪ ಇತರರಿದ್ದರು. 
ಕೊಡಗು

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಬೇಡ

ಪ್ರಮುಖ ಮುಖ್ಯಾಂಶಗಳು

  • ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ಅಭಿಮತ
  • 72ನೇ ಅಖಿಲ ಭಾರತ ಸಹಕಾರ ಸಪ್ತಾಹ
ಸುಂಟಿಕೊಪ್ಪ: ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳ ಆಯ್ಕೆಗೆ ಮೀಸಲಾತಿ ಅಳವಡಿಸಿದಲ್ಲಿ ಅದು ಸಹಕಾರ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಅಲ್ಲದೇ ಸಹಕಾರಿ ಕ್ಷೇತ್ರ ಕುಂಠಿತಗೊಳ್ಳಲು ಕಾರಣವಾಗುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ ಸಹಕಾರ ಇಲಾಖೆ ಕೊಡಗು ಜಿಲ್ಲೆ ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಮತ್ತು ಸುಂಟಿಕೊಪ್ಪ ಮಹಿಳಾ ಸಹಕಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸುಂಟಿಕೊಪ್ಪದ ಮಂಜುನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಹಕಾರ ಕ್ಷೇತ್ರ ಏಕಸೇವಾ ಕ್ಷೇತ್ರವಾಗಿ ಉಳಿಯದೆ ಬಹುಸೇವಾ ಕ್ಷೇತ್ರವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರದ ಮಹತ್ವವನ್ನು ಅರಿತ ಕೇಂದ್ರ ಸರ್ಕಾರ ನೂತನ ಸಹಕಾರ ಸಚಿವಾಲಯ ಪ್ರಾರಂಭಿಸಿದ ಮೇಲೆ ಏಕರೂಪ ಗಣಕೀಕರಣ ವ್ಯವಸ್ಥೆ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುತ್ತಿದೆ. ವಿಶೇಷವಾಗಿ ಆಹಾರ, ಜನೌಷಧ, ಪೆಟ್ರೋಲ್ ಬಂಕ್, ಅಡುಗೆ ಅನಿಲ ವಿತರಣಾ ವ್ಯವಸ್ಥೆ ನಿರ್ಮಾಣ ಮಾಡಲು ಸಹಕಾರ ಸಚಿವಾಲಯ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುಜರಾತ್ ,ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಪ್ರಾಯೋಗಿಕವಾಗಿ ಏಕರೂಪದ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಸೂಚಿಸಿದೆ. ಆದರೆ ಕರ್ನಾಟಕದಲ್ಲಿ ಇಚ್ಛಾಶಕ್ತಿಯಿಂದ ಮುಂದೂಡಲಾಗಿದೆ. ಅತ್ಯುತ್ತಮವಾಗಿರುವ ಕರ್ನಾಟಕ ಸಹಕಾರ ಕ್ಷೇತ್ರದ ಕಾಯ್ದೆಯನ್ನು ಚರ್ಚೆ ಇಲ್ಲದೆ, ಪರವಿರೋಧ ಲೆಕ್ಕಿಸದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಷಾಧಿಸಿದರು.
ಕರ್ನಾಟಕದಲ್ಲಿ ಕೊಡಗು ದಕ್ಷಿಣ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕೊಡಗಿನಲ್ಲಿ ಶೇ.60 ಪ್ರಾಥಮಿಕ ಕೃಷಿಪತ್ತಿನ ಸಂಘಗಳು 600 ಕೋಟಿ ರೂ.ಯವರೆಗೂ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳೀದರು. ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 10ಲಕ್ಷ ರೂ. ಠೇವಣಿ ಮತ್ತು 4.25 ಕೋಟಿ ರೂ. ವಹಿವಾಟಿನಿಂದ ಈ ಸಾಲಿನಲ್ಲಿ 232 ಕೋಟಿ ರೂ. ವಹಿವಾಟು ನಡೆದಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕೊಡಗು ರಾಜ್ಯ ಮತ್ತು ದೇಶಕ್ಕೆ ಕ್ರೀಡೆ ಹಾಗೂ ಸೇನೆಗೆ ನೀಡಿರುವ ಮಹತ್ತರ ಕೊಡುಗೆಯಷ್ಟೇ ಸಹಕಾರ ಕ್ಷೇತ್ರದಲ್ಲೂ ನೀಡಿದೆ. ರಾಜ್ಯದಲ್ಲಿ ಮೊದಲ ಸಹಕಾರ ಸಂಘ ಗದಗ ಜಿಲ್ಲೆಯಲ್ಲಿ 1905 ರಂದು ಅಸ್ತಿತ್ವಕ್ಕೆ ಬಂದ 15 ದಿನಗಳಲ್ಲಿ ಸೋಮವಾರಪೇಟೆ ತಾಲೂಕಿನ ತಲ್ತಾರೆಶೆಟ್ಟಳ್ಳಿಯಲ್ಲಿ ಕೆ.ದೊಡ್ಡಯ್ಯ ಮತ್ತು ಅವರ ತಂಡದಿಂದ 2ನೇ ಸಂಘ ಅಸ್ವಿತ್ವಕ್ಕೆ ಬಂತು. ಆಗ ಹಣಕಾಸು ವ್ಯವಸ್ಥೆ ಇದ್ದರೂ ಸಹಕಾರ ಸಂಘಗಳು ವಸ್ತು ವಿನಿಮಯ ರೂಪದಲ್ಲಿ ಕಾರ್ಯ ನಿರ್ವಹಿಸಿ ಸಹಕಾರ ಕ್ಷೇತ್ರವನ್ನು ಪ್ರಾಮಾಣಿಕತೆ ಪಾರದರ್ಶಕತೆಯಿಂದ ಕಟ್ಟಿದರು. ನಾವು ಯಾವ ಕ್ಷೇತ್ರವನ್ನು ಪ್ರತಿನಿಧಿಸುತ್ತೇವೆಯೋ ಅದರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಹೊಂದಿ ನ್ಯಾಯ ಒದಗಿಸಬೇಕೆಂದು ಅವರು ಕರೆ ನೀಡಿದರು.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ.ಶಾಮಲಾ, ಸುಂಟಿಕೊಪ್ಪ ಮಹಿಳಾ ಸಂಘದ ಅಧ್ಯಕ್ಷೆ ಲೀಲಾಮೇದಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಪಟ್ಟೆಮನೆ ಗಿರಿಜಾ ಉದಯಕುಮಾರ್, ಅಪ್ಪಚಟ್ಟೊಳಂಡ ಸಾವಿತ್ರಿ ಕಾವೇರಪ್ಪ ಅತ್ತೂರು ನಲ್ಲೂರು ಗ್ರಾಮದ ಐ.ಎಸ್.ಬಾಲಕಿ, ಉಲುಗುಲಿ ಗ್ರಾಮದ ಯಂಕನ ಎಂ.ಕರುಂಬಯ್ಯ, ಕಲ್ಲೂರಿನ ಕೆ.ಬಿ.ರಾಜಪ್ಪ, ಅಂದಗೋವೆ ಗ್ರಾಮದ ಚಿಕ್ಕಂಡ ಕೆ. ಸಾಬು ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.
ಸುಂಟಿಕೊಪ್ಪ ಪ್ಯಾಕ್ಸ್ ಉಪಾಧ್ಯಕ್ಷ ಪಿ.ಪಿ.ಉದಯಕುಮಾರ್, ಜಿಲ್ಲಾ ಸಹಕಾರ ಸಂಘದ ಉಪ ನಿಬಂಧಕ ಎಚ್.ಡಿ.ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಎಲ್ಲ ನಿರ್ದೇಶಕರುಗಳು, ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕುಶಾಲನಗರದ ಎಪಿಎಂಎಸ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎಂ.ಕೊಮೊರಪ್ಪ, ನಿರ್ದೇಶಕರಾದ ಎನ್. ಸಿ. ಕ್ಲೈವ ಪೊನ್ನಪ್ಪ,ಡಿ.ಕೆ.ಗಂಗಾಧರ, ಕೆ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.