ಸುಂಟಿಕೊಪ್ಪ ಸಮೀಪದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಯೋಜಿಸಿದ್ದ ಮದ್ಯವರ್ಜನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಎಂ.ಬಿ.ಅಭಿಮನ್ಯು ಕುಮಾರ್, ಡಿ.ನರಸಿಂಹ, ಪಿ.ಆರ್.ಸುನಿಲ್ ಕುಮಾರ್ ಇತರರಿದ್ದರು.
ಸುಂಟಿಕೊಪ್ಪ: ಮಹಾತ್ಮ ಗಾಂಧೀಜಿ ಮದ್ಯಪಾನಮುಕ್ತ ಸಮಾಜದಿಂದ ಮಾತ್ರ ರಾಮರಾಜ್ಯ ಸ್ಥಾಪನೆ ಎಂಬುದನ್ನು ಪ್ರತಿಪಾದಿಸಿದ್ದರು. ಆದರೆ ಗಾಂಧೀಜಿಯ ತತ್ವ-ಆದರ್ಶಗಳನ್ನು ಯಾರೂ ಪಾಲಿಸುತ್ತಿಲ್ಲ ಎಂದು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಬೇಸರವ್ಯಕ್ತಪಡಿಸಿದರು.
ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಮಡಿಕೇರಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕೊಡಗು ಜಿಲ್ಲೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಪಗ್ರತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಅರಕ್ಷಕ ಠಾಣೆ ಪ್ರಾಥಮಿಕ ಆರೋಗ್ಯ ಕೇಂದ್ರ, ನವಜೀವನ ಸಮಿತಿ ಶೌರ್ಯ ವಿಪತ್ತು ನಿರ್ವಹಣ ಘಟಕ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 2040ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.
ಸಮಾಜದ ದೊಡ್ಡ ಪಿಡುಗು ಆಗಿರುವ ಮದ್ಯಪಾನ ಮತ್ತು ಅಮಲು ಪದಾರ್ಥಗಳ ಸೇವನೆಯನ್ನು ನಿಲ್ಲಿಸುವುದು ನಾವೆಲ್ಲರೂ ಮಾಡಬೇಕಾದ ಪುಣ್ಯದ ಕೆಲಸ ಎಂದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, 10 ವರ್ಷಗಳ ಹಿಂದೆ ಸುಂಟಿಕೊಪ್ಪದಲ್ಲಿ ಮದ್ಯವರ್ಜನ ಶಿಬಿರ ನಡೆದಾಗ ಸ್ವಯಂ ಸೇವಕನಾಗಿದ್ದೆ. ಇಂದು ಸಮಿತಿಯ ಅಧ್ಯಕ್ಷನಾಗಿ ಸುಂಟಿಕೊಪ್ಪ ಪ್ರಥಮ ಪ್ರಜೆಯಾಗಿ 8 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ತಮ್ಮ ಶಕ್ತಿ ಮೀರಿ ಸೇವೆ ಸಲ್ಲಿಸುವುದಾಗಿ ಘೋಷಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದರು. ಆದರೆ, ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಗಳಲ್ಲಿ ಸತ್ಯ ಏನು ಎಂಬುದನ್ನು ತಿಳಿದು ಬಂದಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ, ಜನರಿಂದ ಜನರಿಗಾಗಿ ಜನರಿಗೋಸ್ಕರ ತಮ್ಮ ಕ್ಷೇತ್ರದಲ್ಲಿ ಬಂದ ಕಾಣಿಕೆ ಹಣವನ್ನು ಮರಳಿ ಜನರಿಗೆ ನೀಡಿದ ಅಪರೂಪದಲ್ಲಿ ಅಪರೂಪದ ಶ್ರೀ ಕ್ಷೇತ್ರ ಧರ್ಮಸ್ಥಳ ಎಂದು ಬಣ್ಣಿಸಿದರು. ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಜೀವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪರಿಮಿತ ಎಂದು ಅವರು ಉಲ್ಲೇಖಿಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ಮದ್ಯವರ್ಜನ ಶಿಬಿರವು ಸೇರಿದಂತೆ ಕ್ಷೇತ್ರದ ಎಲ್ಲ ಕಾರ್ಯಕ್ರಮಗಳು ಜನೋಪಯೋಗಿ ಮತ್ತು ಸಮಾಜಮುಖಿಯಾಗಿವೆ ಎಂದರು. ಮದ್ಯಪಾನ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಬಸಪ್ಪ, ಮದ್ಯವರ್ಜನ ಶಿಬಿರದ ಗೌರವಧ್ಯಕ್ಷರಾದ ವಿ.ಎ.ಸಂತೋಷ್, ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಎಸ್.ಬಿ.ಶಂಕರ್, ತಾಲೂಕು ಯೋಜನಾಧಿಕಾರಿ ಎನ್.ಪುರೋಷತ್ತಮ್, ಶಿಬಿರದ ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಇತರರು ಇದ್ದರು.