ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಹೊರನೋಟ.  
ಕೊಡಗು

ಸರ್ಕಾರಿ ಆಸ್ಪತ್ರೆಯಲ್ಲಿಲ್ಲ ಔಷಧ

ಪ್ರಮುಖ ಮುಖ್ಯಾಂಶಗಳು

  • ಶಾಸಗಿ ಮೆಡಿಕಲ್‌ನಲ್ಲಿ ಖರೀದಿಸಬೇಕಾದ ಪರಿಸ್ಥಿತಿ
  • ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯ ಕೊರತೆ
ಸಿದ್ದಾಪುರ: ಬಡವರು ಮತ್ತು ಕಾರ್ಮಿಕ ವರ್ಗಕ್ಕೆ ಆಸರೆಯಾಗಬೇಕಿದ್ದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಔಷಧ ಕೊರತೆ ಹಾಗೂ ವೈದ್ಯಕೀಯ ಸೌಲಭ್ಯ ಅಭಾವ ರೋಗಿಗಳನ್ನು ಸಂಕಷ್ಟ ದೂಡಿದೆ.
ಉಚಿತ ಚಿಕಿತ್ಸೆ ಹಾಗೂ ಔಷಧ ಸಿಗಲಿದೆ ಎಂಬ ನಿರೀಕ್ಷೆಯೊಂದಿಗೆ ಆಸ್ಪತ್ರೆಗೆ ಬರುವ ನೂರಾರು ರೋಗಿಗಳು ವೈದ್ಯರ ತಪಾಸಣೆ ಬಳಿಕ ಔಷಧಕ್ಕಾಗಿ ಖಾಸಗಿ ಮೆಡಿಕಲ್ ಶಾಪ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿದ್ದಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತುಕ್ಕೂ ಹೆಚ್ಚು ಗ್ರಾಮಗಳ ಜನರು ಈ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ. ನಿತ್ಯ ಕೃಷಿ ಕಾರ್ಮಿಕರು, ತೋಟದ ಕಾರ್ಮಿಕರು ಹಾಗೂ ಬಡ ಕುಟುಂಬಗಳ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಅಗತ್ಯ ಔಷಧ ಲಭ್ಯವಿಲ್ಲದ ಕಾರಣ ವೈದ್ಯರು ಬರೆದುಕೊಡುವ ಚೀಟಿ ಹಿಡಿದು ಖಾಸಗಿ ಅಂಗಡಿಗಳಿಗೆ ತೆರಳಬೇಕಾಗಿದೆ.
ದಿನದ ವೇತನ ಕಳೆದುಕೊಂಡು ಆಸ್ಪತ್ರೆಗೆ ಬರುವ ಬಡವರಿಗೆ ಔಷಧಕ್ಕಾಗಿ ಹೆಚ್ಚುವರಿಯಾಗಿ 400 ರಿಂದ 500 ರೂಪಾಯಿವರೆಗೆ ಖರ್ಚು ಮಾಡಬೇಕಾಗುತ್ತಿದೆ. ಇದರಿಂದ ಬಡ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದ್ದು, ಸರ್ಕಾರಿ ಆರೋಗ್ಯ ಸೇವೆಯ ಉದ್ದೇಶವೇ ಪ್ರಶ್ನಾರ್ಹವಾಗುತ್ತಿದೆ.
ಜ್ವರ, ಕೆಮ್ಮು, ಶೀತ, ಸೋಂಕು, ರಕ್ತದೊತ್ತಡ, ಮಧುಮೇಹ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಅಗತ್ಯವಿರುವ ಔಷಧಗಳೂ ಹಲವು ಬಾರಿ ಲಭ್ಯವಿರುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆಸ್ಪತ್ರೆಯ ಔಷಧ ವಿತರಣಾ ವಿಭಾಗದಲ್ಲಿ ಔಷಧ ಇಲ್ಲ ಎಂಬ ಉತ್ತರ ಸಿಗುತ್ತಿದ್ದು, ರೋಗಿಗಳು ಅನಿವಾರ್ಯವಾಗಿ ಮೆಡಿಕಲ್ ಶಾಪ್‌ಗಳಿಗೆ ತೆರಳಬೇಕಾಗಿದೆ.
ಅಲ್ಲದೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯೂ ರೋಗಿಗಳನ್ನು ಕಾಡುತ್ತಿದೆ. ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಾಗ ಅಥವಾ ವಿಶೇಷ ತಪಾಸಣೆ ಅಗತ್ಯವಿದ್ದಾಗ ರೋಗಿಗಳು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಆಸ್ಪತ್ರೆಯ ಮೂಲಸೌಕರ್ಯ ಮತ್ತು ಸೇವೆಗಳ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ಸ್ಥಾನಮಾನ ಹೊಂದಿರುವ ಆಸ್ಪತ್ರೆಯಲ್ಲಿ ಎಲ್ಲ ಮೂಲಸೌಲಭ್ಯಗಳು ಲಭ್ಯವಾಗಬೇಕು. ಆದರೆ ಪ್ರಸ್ತುತ ಪರಿಸ್ಥಿತಿ ನೋಡಿದರೆ ಆರೋಗ್ಯ ಕೇಂದ್ರ ಕೇವಲ ಪ್ರಾಥಮಿಕ ಚಿಕಿತ್ಸಾ ಕೇಂದ್ರದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಉಚಿತ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತೇವೆ. ಆದರೆ, ವೈದ್ಯರು ಬರೆದ ಔಷಧಗಳನ್ನು ಹೊರಗಿನಿಂದ ಖರೀದಿಸಬೇಕಾಗುತ್ತದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧ, ವೈದ್ಯರು ಮತ್ತು ಪರೀಕ್ಷಾ ಸೌಲಭ್ಯಗಳು ಇರಬೇಕು. ಆದರೆ ಇಲ್ಲಿ ಸಣ್ಣ ಸಮಸ್ಯೆಗೂ ಮಡಿಕೇರಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಭರತ್
ಕಾರ್ಮಿಕ ಮುಖಂಡ
ಮಂಗಳವಾರ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಹೊರ ರೋಗಿಗಳು ಅಧಿಕವಾಗಿರುವುದರಿಂದ ಖರೀದಿಸಿದ ಔಷಧಗಳು ಬೇಗ ಖಾಲಿಯಾಗುತ್ತಿವೆ. ಜೆಮ್ ಪೋರ್ಟಲ್ ಮೂಲಕ ಔಷಧಗಳನ್ನು ಖರೀದಿಸುವುದರಿಂದ ಔಷಧಗಳು ಬರಲು ವಿಳಂಬವಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ.
ಡಾ.ಯತಿರಾಜ್
ತಾಲೂಕು ವೈದ್ಯಾಧಿಕಾರಿ, ವಿರಾಜಪೇಟೆ