ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಮಾಲೋಚಕ ಡಾ. ಜಿ. ಅಚ್ಯುತನ್ ಮಾತನಾಡಿದರು.
ಸಂಪನ್ಮೂಲಗಳ ಕೊರತೆಯಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದAತೆ ನೋಡುವುದು ಮತ್ತು ಅವರ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ನೋಟ್ ಪುಸ್ತಕ ವಿತರಣೆ ಒಂದು ಅತ್ಯುತ್ತಮ ಮತ್ತು ಶ್ಲಾಘನೀಯ ಕಾರ್ಯಕ್ರಮ ಎಂದು ಶಿಕ್ಷಣ ತಜ್ಞರೂ ಆದ ಶೈಕ್ಷಣಿಕ ಸಮಾಲೋಚಕ ಡಾ. ಜಿ. ಅಚ್ಯುತನ್ ಹೇಳಿದರು. ಮೈಸೂರಿನ ಸೇವಾ ಭಾರತಿ ಸಂಸ್ಥೆ ವತಿಯಿಂದ ನಿರಂತರ ಮಿತ್ರ ವೃಂದ ಹಾಗೂ ಭವಿಷ್ಯ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಸಮಾಜ ಸೇವೆಯ ಒಂದು ಭಾಗವಾಗಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕೆಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಬರವಣಿಗೆ ಪುಸ್ತಕಗಳು, ಪೆನ್, ಪೆನ್ಸಿಲ್, ಬ್ಯಾಗ್ ಸೇರಿದಂತೆ ಅಗತ್ಯ ಶೈಕ್ಷಣಿಕ ಪರಿಕರಗಳನ್ನು ನೀಡಲಾಗುತ್ತಿದೆ. ಶಿಕ್ಷಣವೇ ದೇಶದ ಭವಿಷ್ಯ. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಬೇಕು. ಈ ಸಾಮಾಜಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಹಲವಷ್ಟು ದಾನಿಗಳು ಸಹಕರಿಸಿದ್ದಾರೆ ಎಂದರು.
ಕೂಡಮಂಗಳೂರು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಪೆರುಮಾಳ್ ಮಾತನಾಡಿ, ದಾನಿಗಳು ಮಕ್ಕಳಿಗೆ ಉಚಿತವಾಗಿ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆಯಲ್ಲಿ ತೊಡಗಬೇಕು ಎಂದು ಹೇಳಿದರು.
ನಿರಂತರ ಫೌಂಢಶನ್ ಪ್ರಮುಖರಾದ ಸಿ.ಎಸ್. ವೆಂಕಟೇಶ್ ಬಾಬು ಹಾಗೂ ರಾಧಾ ವೆಂಕಟೇಶ್ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ಕುರಿತು ಮಾತನಾಡಿದರು.
ಬಿ.ಆರ್.ಸಿ. ಎಂ.ವಿ. ಮಂಜೇಶ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಪಿ. ನವೀನ್ ಕುಮಾರ್, ಶಿಕಷಕಿ 1ಇ.ವಿ. ಶೈಲಾ, ಮತ್ತಿತರರು ಇದ್ದರು.