ಮುಕ್ಕಾಟಿರ ಶಿಲ್ಪಾ ನಂಜಪ್ಪ ಅವರಿಂದ ಭರತನಾಟ್ಯ ಪ್ರದರ್ಶನ
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಂಗೀತ ನಾಟಕ ಅಕಾಡೆಮಿ ಕೊಡ ಮಾಡುವ 2024ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಪಾತ್ರರಾಗುವ ಮೂಲಕ ಜಿಲ್ಲೆಯ ಮುಕ್ಕಾಟಿರ ಶಿಲ್ಪಾ ನಂಜಪ್ಪ ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ರಾಷ್ಟçಮಟ್ಟದಲ್ಲಿ ಗೌರವ ತಂದುಕೊಟ್ಟಿದ್ದಾರೆ. ಭರತನಾಟ್ಯ ಕಲಾವಿದೆ ಮಾತ್ರವಲ್ಲದೆ ಇವರು ಸಂಶೋಧಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕೊಡವ ಭಾಷೆಯಲ್ಲಿರುವ ಸಾಹಿತ್ಯವನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಅದಕ್ಕೆ ಭರತನಾಟ್ಯ ಸಂಯೋಜನೆ ಮಾಡಿರುವುದು ಶಿಲ್ಪಾ ಅವರ ಹೆಗ್ಗಳಿಕೆ ಆಗಿದೆ.
ಕೊಡಗಿನ ಕಲಾವಿದೆ ಮುಕ್ಕಾಟಿರ ಶಿಲ್ಪಾ ನಂಜಪ್ಪ ಅವರ ಪ್ರತಿಭೆಗೆ ಮನ್ನಣೆ ನೀಡಿರುವ ಕೇಂದ್ರ ಸರ್ಕಾರ ಪ್ರತಿಷ್ಠಿತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಕೆಲಸ ಮಾಡಿದೆ. 40 ವರ್ಷದೊಳಗಿನ ಯುವ ಸಮುದಾಯಕ್ಕೆ ಕಲೆ, ಸಂಸ್ಕೃತಿ ವಿಭಾಗದಲ್ಲಿ ನೀಡಲಾಗುವ ದೇಶದ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, 25 ಸಾವಿರ ರೂ. ನಗದು ಮತ್ತು ತಾಮ್ರಪತ್ರವನ್ನು ಒಳಗೊಂಡಿದೆ.
ಕೊಡಗು ಎಂದ ಕೂಡಲೇ ಸೇನಾ ಪರಂಪರೆ, ಕ್ರೀಡಾ ಲೋಕದ ತಾರೆಗಳು ಹಾಗೂ ಸಿನಿಮಾ ಕ್ಷೇತ್ರದ ಸಾಧಕರು ನೆನಪಾಗುತ್ತಾರೆ. ಇವರ ಮಧ್ಯೆ ಅನೇಕರು ಸಾಂಸ್ಕೃತಿಕ ವಿಭಾಗದಲ್ಲೂ ಸಾಧನೆ ಮಾಡಿದ್ದು ಮುಕ್ಕಾಟಿರ ಶಿಲ್ಪಾ ನಂಜಪ್ಪ ಕೂಡ ಇವರಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಿದ್ದಾರೆ. ಮೂಲತಃ ಕಕ್ಕಬ್ಬೆಯ ನಾಲೇರಿ ಗ್ರಾಮದ ಅಲ್ಲಾರಂಡ ಉತ್ತಪ್ಪ ಮತ್ತು ಕಾವೇರಿಯಮ್ಮ ದಂಪತಿ ಪುತ್ರಿಯಾಗಿರುವ ಶಿಲ್ಪಾ ನಂಜಪ್ಪ ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸ ಮಾಡಿರುವುದು ಬೆಂಗಳೂರಿನಲ್ಲಿ. ತಮ್ಮ 7ನೇ ವಯಸ್ಸಿನಲ್ಲೇ ಗೆಜ್ಜೆ ಕಟ್ಟಿ ಭರತನಾಟ್ಯ ಅಭ್ಯಾಸಕ್ಕೆ ಇಳಿದ ಇವರು ನಂತರ ಇದೇ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಪದ್ಮಿನಿ ರಾಮಚಂದ್ರನ್ ಇವರ ಗುರುಗಳಾಗಿದ್ದಾರೆ.
ಕೊಡವ ಭಾಷೆಯ ಸಾಹಿತ್ಯವನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಅದಕ್ಕೆ ಭರತನಾಟ್ಯ ಸಂಯೋಜನೆ ಮಾಡುವ ಮೂಲಕ ಶಾಸ್ತಿçÃಯವಾಗಿ ಜನರಿಗೆ ತಲುಪಿಸಿದ್ದಾರೆ. ಕೊಡಗಿನ ಸುದ್ದಿ ಹಬ್ಬ ಹುತ್ತರಿ ಬಗ್ಗೆ ಕೊಡವ ಭಾಷೆಯಲ್ಲಿ ಕವನ ಬರೆದು ಅದಕ್ಕೆ ಸಂಗೀತ ಸಂಯೋಜನೆ ಮಾಡಿ ನೃತ್ಯಕ್ಕೆ ಅಳವಡಿಸಿ ಪ್ರದರ್ಶನ ಮಾಡಿದ ಹೆಗ್ಗಳಿಕೆ ಇವರದ್ದು. ಕೊಡವ ಸಂಸ್ಕೃತಿ ಬಿಂಬಿಸುವ 1.15 ಗಂಟೆ ಅವಧಿಯ ಟೇಲ್ಸ್ ಇನ್ ಕೊಡವ ಎಂಬ ಕಾರ್ಯಕ್ರಮವನ್ನೂ ಮಾಡಿದ್ದು, ಕೊಡವ ಭಾಷೆಯಲ್ಲಿನ ಅಪರೂಪದ ಪ್ರಯೋಗ ಎಂಬ ಗೌರವಕ್ಕೆ ಪಾತ್ರವಾಗಿದೆ.
ಮುಂಬೈನಲ್ಲಿರುವ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್‌ಎಂಎಸಿಸಿ)ದಲ್ಲಿ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿರುವ ಸಂಗA ಆರ್ಟ್ಸ್ನಲ್ಲೂ ಪ್ರದರ್ಶನ ಕೊಟ್ಟಿದ್ದಾರೆ. ದೂರದರ್ಶನದಲ್ಲಿ ಎ ಶ್ರೇಣಿ ಕಲಾವಿದರಾಗಿ, ಕೇಂದ್ರ ಸರ್ಕಾರದ ಐಸಿಸಿಆರ್ ಮೂಲಕ ಮಾಲ್ಡೀವ್ಸ್ನಲ್ಲಿ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯ ಕಲಾವಿದರಿಗೆ ಉನ್ನತ ತರಬೇತಿಯನ್ನೂ ಕೊಡುತ್ತಿದ್ದಾರೆ. 200ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.
ಭರತನಾಟ್ಯ ಕಲಾವಿದೆ ಆಗಿರುವುದರ ಜತೆಗೆ ಇವರು ಸಂಶೋಧಕರಾಗಿಯೂ ಕೆಲಸ ಮಾಡಿದ್ದಾರೆ. ಈ ಮೂಲಕ ಅಪರೂಪದ ಕೊಡವ ಭಾಷೆಯ ಉಳಿವಿಗಾಗಿಯೂ ಶ್ರಮಿಸುತ್ತಿದ್ದಾರೆ. ಇವರ ಸಂಶೋಧನಾ ಕಾರ್ಯಕ್ಕೆ ಕೇಂದ್ರ ಸರ್ಕಾರದ ಜ್ಯೂನಿಯರ್ ರಿಸರ್ಚ್ ಫೆಲೊಶಿಪ್ ಅವಾರ್ಡ್ 2019-21 ಲಭಿಸಿದೆ. 2006ರಲ್ಲಿ ಚೆನ್ನೆöÊನ ಮ್ಯೂಸಿಕ್ ಅಕಾಡೆಮಿ ನಡೆಸುವ ನ್ಯಾಷನಲ್ ಸ್ಪಿರಿಟ್ ಆಫ್ ಯೂತ್ ಫೆಸ್ಟಿವಲ್‌ನಲ್ಲಿ ಮೊದಲ ಸ್ಥಾನ ಪಡೆದು ಡಾ. ಎಂಜಿಆರ್ ಅವಾರ್ಡ್ಗೆ ಪಾತ್ರರಾಗಿದ್ದಾರೆ. 2012ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2004ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುವ ಕಲಾ ಪ್ರತಿಭೋತ್ಸವದಲ್ಲಿ ಮೊದಲ ಸ್ಥಾನ ಪಡೆದಿದ್ದರು.
ಭಾವಪೂರ್ಣ ಮುಖಭಾವ, ಚುರುಕಾದ ದೇಹಚಲನೆ ಮೂಲಕ ಅದ್ಭುತ ನೃತ್ಯ ಪ್ರದರ್ಶನ ನೀಡುವ ಶಿಲ್ಪಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಪಟ್ಟಿಯಲ್ಲಿರುವ ಅಧಿಕೃತ ಕಲಾವಿದೆಯೂ ಆಗಿದ್ದಾರೆ.
ಜರ್ಮನಿಯ ಕಾರ್ಲ್ಸ್ರೂಹೆಯಲ್ಲಿ ವರ್ಲ್ಡ್ ಯೂತ್ ಸಿಟಿಜನ್ಸ್ ಆಯೋಜಿಸಿದ್ದ ಒನ್ ವರ್ಲ್ಡ್-2006 ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿ, ಭಾರತೀಯ ಶಾಸ್ತ್ರೀಯ ನೃತ್ಯ-ಭಾರತನಾಟ್ಯ ಕುರಿತು ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಲ್ಲದೆ ಏಕವ್ಯಕ್ತಿ ಪ್ರದರ್ಶನವನ್ನೂ ನೀಡಿದ್ದರು.
ನೃತ್ಯದ ಜತೆಗೆ ನೃತ್ಯ ಸಂಯೋಜಕಿ, ಲೇಖಕಿ, ಶಿಕ್ಷಕಿ ಹಾಗೂ ಕವಯತ್ರಿಯೂ ಆಗಿದ್ದಾರೆ. ಕರ್ನಾಟಕ ಸಂಗೀತ, ಇಂಗ್ಲೀಷ್ ಸಾಹಿತ್ಯ, ಯೋಗದಲ್ಲೂ ಪರಿಣಿತಿ ಸಾಧಿಸುವ ಮೂಲಕ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಕೊಡವ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಕೊಡಗಿನ ಸಂಸ್ಕೃತಿ, ಪರಂಪರೆ ಮತ್ತು ಜನಪದ ಅಂಶಗಳ ಕುರಿತ ಅಧ್ಯಯನ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ನೃತ್ಯ ಕಾರ್ಯಾಗಾರಗಳು, ಕಲಾ ತರಬೇತಿ ಕಾರ್ಯಕ್ರಮಗಳು ಮತ್ತು ವಿವಿಧ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುವ ಕಲಾವಿದರನ್ನು ಪ್ರೋತ್ಸಾಹಿಸುವುದರಲ್ಲೂ ಮುಂದಿದ್ದಾರೆ.
"
ಈ ಪ್ರಶಸ್ತಿ ಸ್ವೀಕರಿಸಲು ನಾನು ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಪ್ರಸಾರದಲ್ಲಿ ನಾನು ಮಾಡಿದ ಕ್ರಾಂತಿಕಾರಿ ಕೆಲಸಕ್ಕೆ ಇದು ಸಿಕ್ಕ ದೊಡ್ಡ ಪ್ರಶಂಸೆಯಾಗಿದೆ. ಕೇಂದ್ರ ಸರ್ಕಾರದಿಂದ ದೊರೆತಿರುವ ಇಂತಹ ಮನ್ನಣೆ ನನಗೆ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಮತ್ತು ನನ್ನ ಪ್ರದರ್ಶನಗಳನ್ನು ಇನ್ನು ಹೆಚ್ಚಿನ ಸ್ಥಳಗಳಿಗೆ ಕೊಂಡೊಯ್ಯಲು ಪ್ರೇರಣೆ ನೀಡುತ್ತದೆ. ನನ್ನ ಗುರುಗಳು, ಪೋಷಕರು ಮತ್ತು ಕುಟುಂಬದವರ ಆಶೀರ್ವಾದ ಹಾಗೂ ಬೆಂಬಲಕ್ಕಾಗಿ ನಾನು ಅವರಿಗೆ ಅಪಾರ ಕೃತಜ್ಞಳಾಗಿದ್ದೇನೆ.
— ಮುಕ್ಕಾಟಿರ ಶಿಲ್ಪಾ ನಂಜಪ್ಪ, ಕಲಾವಿದೆ