ಮದನಾಡಿನಲ್ಲಿ ಭಾನುವಾರ ಆಯೋಜಿಸಿದ್ದ ಶೋಭಾ ಯಾತ್ರೆ.
ನಾಪೋಕ್ಲು: ಹಿಂದೂ ಸಂಘಟನೆಯ ಮೂಲಕ ರಾಷ್ಟ್ರವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಮಿರನ್ ಕುಟ್ಟಪ್ಪ ಹೇಳಿದರು.
ಸಮೀಪದ ಮದನಾಡಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಸಮಾವೇಶದಲ್ಲಿ ಮಾತನಾಡಿದರು. ರಾಷ್ಟ್ರದ ಅನೇಕ ಸವಾಲು ಮತ್ತು ಸಮಸ್ಯೆಗಳಿಗೆ ಉತ್ತರವನ್ನು ನೀಡುತ್ತಾ ನೂರು ವರ್ಷಗಳು ತುಂಬುವ ಸಂದರ್ಭದಲ್ಲಿ ವಿಶ್ವವೇ ತಿರುಗಿ ನೋಡುವಂತೆ ಬಲಾಢ್ಯ ಭಾರತ ನಿರ್ಮಾಣವಾಗಿದೆ. ಸಮಾಜದ ಪ್ರತಿಯೊಬ್ಬ ರೂ ಭಾರತವನ್ನು ಪ್ರೀತಿಸಬೇಕು, ಆ ಮೂಲಕ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತಮ್ಮಿಂದಾಗುವ ಕೆಲಸ ಕೈಗೊಳ್ಳಬೇಕು. ಸಂಘಕ್ಕೆ ನೂರು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಪಂಚ ವಿಷಯಗಳಲ್ಲಿ ಪರಿವರ್ತನೆ ಸಂಗ್ರಹಿಸಿದೆ. ಕುಟುಂಬ ಪ್ರಬೋಧನ, ಸಾಮಾಜಿಕ ಪರಿವರ್ತನೆ, ಸ್ವದೇಶಿ ಭಾವನೆ, ಪರಿಸರ ಕಾಳಜಿ, ನಾಗರಿಕ ಶಿಷ್ಠಾಚಾರ ದೇಶದ ಪ್ರತಿಯೊಂದು ಮನೆಯೂ ಕುಟುಂಬ ವ್ಯವಸ್ಥೆ ಉಳಿಸಿಕೊಳ್ಳಬೇಕು ಮನೆಯ ಮಕ್ಕಳು ದೇಶದ ಸಂಸ್ಕೃತಿ ಸನಾತನ ಪರಂಪರೆಯ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು. ನಮ್ಮೆಲ್ಲ ಜಾತಿ ಮತ ಪಕ್ಷ ಪಂತಗಳನ್ನು ಮರೆತು ನಾವೆಲ್ಲ ಒಂದು ನಾವೆಲ್ಲ ಹಿಂದೂ ಎನ್ನುವ ಭಾವನೆ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಗಳನ್ನಾಡಿದ ನಿವೃತ್ತ ಮುಖ್ಯಶಿಕ್ಷಕ ಶಿವರಾವ್ ಮಾತನಾಡಿ, ಹಲವು ವರ್ಷಗಳಿಂದ ಹಿಂದೂ ಸಂಘಟನೆಯ ಕೆಲಸಗಳು ನಡೆಯುತ್ತಿದೆ. ಒಳ್ಳೆಯ ರೀತಿಯ ಬೆಂಬಲವನ್ನು ಹಿಂದುಗಳು ನೀಡಿದ್ದಾರೆ. ರಾಷ್ಟ್ರದ ಉಳಿವಿಗಾಗಿ ಸಂಘಟಿತ ಹಿಂದೂ ಶಕ್ತಿ ಅನಿವಾರ್ಯ ಎಂದರು.
ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬಟ್ಯನ ಉತ್ತಪ್ಪ ಮಾತನಾಡಿದರು. ಗಿರೀಶ್ ತಾಳ್ತಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮೊದಲು ನಡೆದ ಭವ್ಯವಾದ ಶೋಭಾಯಾತ್ರೆಯಲ್ಲಿ ಕುಣಿತ, ಭಜನೆ, ಸಿಂಗಾರಿ ಮೇಳ ಗಮನ ಸೆಳೆಯಿತು.
ಪ್ರಮುಖರಾದ ಸುರೇಶ್, ಧನಂಜಯ ಅಗೋಳಿಕಜೆ, ಯೋಗೇಶ್, ಬಿಂದು ಹುಲಿ ಮನೆ, ವಿಠ್ಠಲ್ ಇತರರು ಇದ್ದರು.