ಶ್ರೀ ಅಣ್ಣಪ್ಪಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವದ ದೃಶ್ಯ.  
ಕೊಡಗು

ಅಭಿವೃದ್ಧಿ ಪಥದಲ್ಲಿದೆ ನಾರ್ಗಾಣೆ ಗ್ರಾಮ

ಎ. ಆರ್. ರಘುರಾಮ
ಸುಂಟಿಕೊಪ್ಪ: ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಗ್ರಾಮಗಳ ಸಾಲಿನಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರ್ಗಾಣೆ ಅಗ್ರ ಪಂಕ್ತಿಯಲ್ಲಿದೆ. ಫುಟ್‌ಬಾಲ್ ಕ್ರೀಡೆಗೆ ತನ್ನದೇ ಆದ ಕ್ರೀಡಾ ಪ್ರತಿಭೆಗಳನ್ನು ನೀಡಿರುವ ಗ್ರಾಮ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವುದು ಇನ್ನೊಂದು ಮಹತ್ವದ ಸಂಗತಿಯಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಗ್ರಾಮಗಳಿವೆ. ಸುಂಟಿಕೊಪ್ಪ, ಉಲುಗುಲಿ ಮತ್ತು ನಾರ್ಗಾಣೆ. ಈ ಗ್ರಾಮದ ನಡುವೆ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಗ್ರಾಮದ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವರು ಕಾಫಿ, ಭತ್ತದ ಕೃಷಿ ಕಾರ್ಯ ಗಳನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಭತ್ತದ ಕೃಷಿಯ ದುಬಾರಿಯಾದ ಕಾರಣ ಹಾಗೂ ಕಾರ್ಮಿಕರ ಕೊರತೆ ಎದುರಾಗಿರುವುದರಿಂದ ಹಲವರು ಗದ್ದೆ ನಿರ್ವಹಿಸುವ ಕಾಯಕಕ್ಕೆ ಮಂಗಳ ಹಾಡಿದ್ದಾರೆ. ಸಾಂಪ್ರದಾಯಿಕ ಕೃಷಿ ಚಟುವಟಿಕೆಯನ್ನು ತೊರೆದ ಅವರೆಲ್ಲರೂ ವಾಣಿಜ್ಯ ಬೆಳೆಯಾದ ಕಾಫಿ ತೋಟಗಳನ್ನು ಮಾಡುವತ್ತ ಮುಖ ಮಾಡಿದ್ದಾರೆ. ಗ್ರಾಮವು ಇತ್ತೀಚಿನ ದಶಕಗಳಲ್ಲಿ ಪ್ರಗತಿ ಪಥದಲ್ಲಿ ಇದೆ.
*
ಕಂಪ್ಯೂಟರೀಕೃತ ದಾಖಲೆಗಳು
ರಾಜ್ಯ ಸರ್ಕಾರದ ಪಂಚತಂತ್ರ ಮತ್ತು ಇ-ಸ್ವತ್ತು ಯೋಜನೆ ಅನುಷ್ಠಾನ ಸಂದರ್ಭ ಅಧಿಕಾರಿಗಳ ಕಣ್ ತಪ್ಪಿನಿಂದಾಗಿ ಈ ಗ್ರಾಮವನ್ನು ಕೈಬಿಡಲಾಗಿತ್ತು. ಹಾಗಾಗಿ ಗ್ರಾಮದ ನಿವಾಸಿಗಳು ಆಸ್ತಿಗಳನ್ನು ಮಾರಾಟ ಮಾಡುವುದು, ಖರೀದಿಸಲು ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡ ಪ್ರಮುಖರಾದ ಯಂಕನ ಕರುಂಬಯ್ಯ ಹಾಗೂ ಪಿಎಫ್.ಸಬಾಸ್ಟೀನ್ ಅವರು ದಶಕಗಳ ದಾಖಲಾತಿಗಳನ್ನು ಸಂಗ್ರಹಿಸುವ ಮೂಲಕ ಈ ಗ್ರಾಮವನ್ನು ಇ ಸ್ವತ್ತಿನ ದಾಖಲಾತಿಗೆ ಸೇರ್ಪಡೆಗೊಳಿಸುವಲ್ಲಿ ಶ್ರಮಿಸಿದರು. ಸಣ್ಣ ಗ್ರಾಮವಾಗಿದ್ದ ನಾರ್ಗಾಣೆಯಲ್ಲಿ ಇತ್ತೀಚಿನ ದಶಕದಲ್ಲಿ ಜನಸಂಖ್ಯೆಯು ದ್ವಿಗುಣಗೊಂಡಿದೆ. ಸಾಕಷ್ಟು ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿವೆ. ಕಂದಾಯ ಇಲಾಖೆಯ ಇ ಸ್ವತ್ತು ಪ್ರಕ್ರಿಯೆಯಲ್ಲಿ ಉತ್ತಮ ಪ್ರಗತಿ ತೋರಿದ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಾಗಾಗಿ ಕಂಪ್ಯೂಟರೀಕೃತ ದಾಖಲೆಗಳು ಕಂದಾಯ ಕಚೇರಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವುದು ಗ್ರಾಮದ ಹಿರಿಮೆಯ ಪ್ರತೀಕವಾಗಿದೆ.
*
ಬಡಕೂಲಿ ಕಾರ್ಮಿಕರ ಗ್ರಾಮ
ನಾರ್ಗಾಣೆ ಗ್ರಾಮವು 5 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಕಾರ್ಯ ನಿರ್ವಹಿಸಲು ನೂರಾರು ಬಡಕೂಲಿ ಕಾರ್ಮಿಕರು ಇಲ್ಲಿ ವಾಸ ವಾಗಿದ್ದಾರೆ. ಅವರೆಲ್ಲರೂ ಸಣ್ಣ ಪ್ರಮಾಣದ ಸೂರುಗಳನ್ನು ನಿರ್ಮಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ 2 ಅಂಗನವಾಡಿ, 1 ಪ್ರಾಥಮಿಕ ಶಾಲೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, 2 ನ್ಯಾಯಬೆಲೆ ಅಂಗಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಸತಿ ನಿಲಯ, ಉಪ ಅಂಚೆಕಚೇರಿಗಳಿವೆ.
*
ಜಾತ್ರೆ, ವಾರ್ಷಿಕೋತ್ಸವದಿಂದ ಹಿರಿಮೆ
ಧಾರ್ಮಿಕವಾಗಿಯೂ ನೆಲೆ ಹೊಂದಿರುವ ಗ್ರಾಮದಲ್ಲಿ ಶ್ರೀ ಅಣ್ಣಸ್ವಾಮಿ ದೈವ ಸನ್ನಿಧಿ, ಕೊಡಂಗಲ್ಲೂರು ಭಗವತಿ ದೇವಸ್ಥಾನ, ಬಾಳೆಕಾಡುವಿನ ಮುತ್ತಪ್ಪ ದೇವಸ್ಥಾನ ಸೇರಿದಂತೆ 2 ಮಸೀದಿಗಳು ಇವೆ. ಗ್ರಾಮದಲ್ಲಿ ವಾರ್ಷಿಕವಾಗಿ ನಡೆಯುವ ಅಣ್ಣಪ್ಪ ದೇವಸ್ಥಾನ ಕೊಡಂಗಲ್ಲೂರು ಜಾತ್ರೆ, ಭಗವತಿ ದೇವಸ್ಥಾನ ಹಾಗೂ ಮುತ್ತಪ್ಪ ದೇವಾಲಯಗಳ ವಾರ್ಷಿಕೋತ್ಸವಗಳಿಂದ ಗ್ರಾಮದ ಹಿರಿಮೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯುವ ದೇವ ಸನ್ನಿಧಿಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ನೆರೆಯ ಜಿಲ್ಲೆಯ ಭಾಗಗಳಿಂದ ಭಕ್ತಾದಿಗಳು ಬಂದು ಒಗ್ಗೂಡಿ ವಾರ್ಷಿಕೋತ್ಸವ ಸಂಭ್ರಮಿಸುತ್ತಾರೆ ಎಂಬುದೇ ಹೆಮ್ಮೆ ಮತ್ತು ಧನ್ಯತೆಯ ಪ್ರತೀಕವಾಗಿದೆ.
*
ಆರೋಗ್ಯ ಸೇವೆ ಬಹುದೂರ
ಕೂಗು ಅಳತೆಯಲ್ಲಿರುವ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸವಲತ್ತು ಈ ಗ್ರಾಮಕ್ಕೆ ದೊರೆಯದೆ ವಂಚಿಗೊಂಡಿದೆ ಎಂಬುದೇ ಬೇಸರ. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವ ಸಂದರ್ಭ ಜಿಲ್ಲಾ ಆರೋಗ್ಯ ಕೇಂದ್ರವು ಈ ಗ್ರಾಮದ ಶ್ರೀದೇವಿ ಭಾಗವನ್ನು (16 ಕಿ.ಮೀ.ದೂರದ ) ಸೇರ್ಪಡೆಗೊಳಿಸಿತು. ಇದು ಶ್ರೀದೇವಿ ಭಾಗದ ನಿವಾಸಿಗಳಿಗೆ ತ್ರಾಸದಯಕವಾಗಿದೆ. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಲು ಹೆಚ್ಚಿನ ಹಣ ವ್ಯಯಿಸಿ ತೆರಳಲು ಆಗದ ಕಾರಣ ಇವರೆಲ್ಲರೂ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬನೆ ಮಾಡುವ ಅನಿವಾರ್ಯತೆ ಎದುರಾಗಿದೆ.
*
ಪಂದ್ಯಾವಳಿ ಆಯೋಜನೆ
ನಾರ್ಗಾಣೆಯು ಪುಟ್ಟ ಗ್ರಾಮವಾದರೂ ಕಳೆದ 5 ವರ್ಷಗಳಿಂದ ಅತ್ಯುತ್ತಮ ಪುಟ್ಬಾಲ್ ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಖ್ಯಾತಿ ಗಳಿಸಿದೆ. ಕ್ರೀಡಾಕೂಟ ಆಯೋಜನೆ ಮೂಲಕ ಗ್ರಾಮವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಕ್ರೀಡಾ ಕ್ಷೇತ್ರವಾಗಿ ಬೆಳೆಯುತ್ತಿರುವುದು ಒಂದು ಮಾದರಿ ಆಗಿದೆ. ಫುಟ್ಬಾಲ್ ಪ್ರೇಮಿಗಳನ್ನು, ಆಟಗಾರರನ್ನು, ಪಂದ್ಯಾವಳಿ ಆಯೋಜಕರನ್ನು ಹೊಂದಿರುವುದು ಗ್ರಾಮದ ಹೆಚ್ಚುಗಾರಿಕೆಯಾಗಿದೆ.
**
ಮಳೆಗಾಲದಲ್ಲಿ ಮನೆಗಳು ಜಲಾವೃತವಾಗುತ್ತವೆ
ನಾರ್ಗಾಣೆ ಗ್ರಾಮದ ಸುತ್ತಮುತ್ತಲ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸಿ ಅರೆಹೊಟ್ಟೆ ತುಂಬಿಸಿಕೊಂಡು ಬದುಕು ಕಟ್ಟಿಕೊಂಡವರು ಈ ಗ್ರಾಮದಲ್ಲಿ ಚಿಕ್ಕದಾಗಿ ಸ್ವಂತ ಸೂರು ನಿರ್ಮಿಸಿಕೊಂಡಿದ್ದಾರೆ. ಸಮಸ್ಯೆ ಎಂದರೆ ಈ ನಿವಾಸಿಗಳ ಮನೆಗಳು ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದೆ. ಸುಂಟಿಕೊಪ್ಪ ಹಾಗೂ ಉಲುಗುಲಿ ಗ್ರಾಮದಿಂದ ಹರಿಯುವ ತೊಡುನೀರು ಮಳೆಗಾಲದಲ್ಲಿ ಉಕ್ಕಿ ಹರಿಯುವ ಸಂದರ್ಭ ಗ್ರಾಮದ ಮನೆಗಳಿಗೆ ನುಗ್ಗಿ ಹಾನಿ ಉಂಟು ಮಾಡುತ್ತಿದೆ. ಈ ಭಾಗದ ಬಡಕಾರ್ಮಿಕರ ಪ್ರತಿ ವರ್ಷದ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಕ್ರಮ ವಹಿಸಬೇಕಿದೆ.
**
ಪ್ರತಿ ವರ್ಷವೂ ಮಳೆಗಾಲ ಸಂದರ್ಭದಲ್ಲಿ ತೋಡು ಉಕ್ಕಿಹರಿದು ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಅವಾಂತರ ಸೃಷ್ಟಿಯಾಗುತ್ತಿದೆ. ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗುತ್ತದೆ. ವಿಶೇಷ ಕಾಳಜಿ ಶ್ರಮವಹಿಸಿ ಮೂಲಸಮಸ್ಯೆ ಪರಿಹಾರಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಗ್ರಾಮದ ಸುತ್ತ ದೊಡ್ಡ ನಾಲೆಗಳನ್ನು ನಿರ್ಮಿಸುವ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಅನುದಾನ ದೊರಕಿದ ಕೂಡಲೇ ಸಮಸ್ಯೆ ಪರಿಹಾರವಾಗಲಿದೆ.
ಪಿ.ಆರ್. ಸುನಿಲ್‌ಕುಮಾರ್
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ
**
12 ವರ್ಷಗಳ ಹಿಂದೆ ಇ ಸ್ವತ್ತು ಯೋಜನೆಯನ್ನು ಸರ್ಕಾರ ಜಾರಿಗೆ ತಂದ ಸಂದರ್ಭದಲ್ಲಿ ನಾರ್ಗಾಣೆ ಗ್ರಾಮವು ಬಿಟ್ಟು ಹೋಗಿತ್ತು. ಇದರ ಗಂಭೀರತೆಯನ್ನು ಆರಿತ ಸಮಾನ ಮನಸ್ಕರು ಒಂದಾಗಿ ಗ್ರಾಮದ ಹಿರಿಯ ಮುಖಂಡರಾದ ವೈ.ಎಂ.ಕರುಂಬಯ್ಯ ಅವರ ನೇತೃತ್ವದಲ್ಲಿ ನಡೆಸಿದ ಪತ್ರ ವ್ಯವಹಾರಗಳಿಂದ ಕಂದಾಯ ಇಲಾಖೆ ಮಟ್ಟದಲ್ಲಿ ಸಂಚಲನವಾಯಿತು. ಇದರ ಫಲವಾಗಿ ಗ್ರಾಮದ ಜನರು ತಮ್ಮ ಆಸ್ತಿಗಳನ್ನು ಸುಲಲಿತವಾಗಿ ಮಾರಾಟ ಮಾಡುವ, ಖರೀದಿಸುವ ಪ್ರಕ್ರಿಯೆಗೆ ಅನುವಾಗಿದೆ.
ಪಿ.ಎಫ್.ಸಬಾಸ್ಟೀನ್
ಗ್ರಾಮ ಪಂಚಾಯಿತಿ ಸದಸ್ಯ
*
ನಾರ್ಗಾಣೆ ಗ್ರಾಮದ ಶ್ರೀದೇವಿ ಭಾಗದ ನಿವಾಸಿಗಳು 16 ಕಿ.ಮೀ. ದೂರದ ಚೆಟ್ಟಳ್ಳಿ ಪ್ರಾಥಮಿ ಆರೋಗ್ಯ ಕೇಂದ್ರಕ್ಕೆ ಸೇರ್ಪಡೆಗೊಂಡಿರುವುದೇ ದೊಡ್ಡ ಸಮಸ್ಯೆಯಾಗಿದೆ. ಗ್ರಾಮದಲ್ಲಿ ಬಡಕೂಲಿ ಕಾರ್ಮಿಕ ವರ್ಗದವರೇ ಹೆಚ್ಚಾಗಿ ನೆಲೆಸಿದ್ದಾರೆ. ಗರ್ಭಿಣಿಯರು, ಪುಟ್ಟಕಂದಮ್ಮಗಳ ಲಸಿಕೆ, ಚುಚ್ಚುಮದ್ದು ಸೇವೆಗೆ 16 ಕಿ.ಮೀ. ಸಾಗಬೇಕಾಗಿದೆ. ಈ ಭಾಗದ ಜನರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇವೆ ಒದಗಿಸಿಕೊಡುವಲ್ಲಿ ಆರೋಗ್ಯ ಇಲಾಖೆ ಗಮನ ಹರಿಸಬೇಕಿದೆ.
ಗೀತಾ
ಗ್ರಾಮ ಪಂಚಾಯಿತಿ ಸದಸ್ಯೆ