ನಾಪೋಕ್ಲು ಸಮೀಪದ ಇತಿಹಾಸ ಪ್ರಸಿದ್ಧ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತವು ಶ್ರೀ ವಿಷ್ಣು ಮೂರ್ತಿ ಮೇಲೇರಿ (ಚೌಂಡಿ ಅಗ್ನಿ ಪ್ರವೇಶ) ಸಂದರ್ಭದಲ್ಲಿ ದೇವರಿಗೆ ಹರಕೆ ಸಮರ್ಪಣೆ ಮಾಡುತ್ತಿರುವ ಭಕ್ತರು.
ನಾಪೋಕ್ಲು : ಇತಿಹಾಸ ಪ್ರಸಿದ್ಧ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತವು ದೇವರ ಹಬ್ಬವು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಉತ್ಸವದ ಅಂಗವಾಗಿ ಶಾಸ್ತವು ಸನ್ನಿಧಿಯಲ್ಲಿ ಸೋಮವಾರವೇ ಭಕ್ತಾದಿಗಳು ಹಾಗೂ ದೇವಾಲಯದ ತಕ್ಕ ಮುಖ್ಯಸ್ಥರು ದೇವರಿಗೆ ಹರಕೆ ರೂಪದಲ್ಲಿ ಮಣ್ಣಿನ ಪ್ರತಿಕೃತಿ ನಾಯಿ ಒಪ್ಪಿಸುವ ಕಾರ್ಯಕ್ರಮ ನೆರವೇರಿತು.
ಬುಧವಾರ ದೇವಾಲಯದ ಆವರಣದಲ್ಲಿ ತಕ್ಕ ಮುಖ್ಯಸ್ಥರು ಸೇರಿ ಕೊಟ್ಟಿ ಹಾಡುವ ಕಾರ್ಯಕ್ರಮ ನಡೆಸಲಾಯಿತು. ಗುರುವಾರ ರಾತ್ರಿ ಅಂಧಿಬೊಳ್ಕ್ (ದೀಪಾರಾಧನೆ), ಶುಕ್ರವಾರ ಬೆಳಗಿನ ವರೆಗೆ ವಿವಿಧ ದೈವಗಳ ಕೋಲ
ನೆರವೇರಿತು. ಶುಕ್ರವಾರ ಅಜ್ಜಪ್ಪ ದೈವದ ಕೋಲದ ನಂತರ ಮಧ್ಯಾಹ್ನ ನೆರೆದಿದ್ದ ಜನರಿಗೆ ಅನ್ನದಾನ ಮಾಡಲಾಯಿತು.
ಅಪರಾಹ್ನ ವಿಷ್ಣು ಮೂರ್ತಿ ಮೇಲೇರಿ (ಚೌಂಡಿ ಅಗ್ನಿ ಪ್ರವೇಶ) ದೃಶ್ಯ ಭಕ್ತರನ್ನು ಭಾವ ಪರವಶರನ್ನಾಗಿಸಿತು. ದೇವರ ಆವೇಶದೊಂದಿಗೆ ಭಕ್ತರಿಗೆ ಆಶೀರ್ವಾದ ನೀಡುವುದು, ದೈವಕ್ಕೆ ಹರಕೆ ಕಾಣಿಕೆ ಒಪ್ಪಿಸುವ ಕಾರ್ಯಕ್ರಮದೊಂದಿಗೆ ಹಬ್ಬಕ್ಕೆ ಮಂಗಳ ಹಾಡಲಾಯಿತು.
ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಮತ್ತು ಪರವೂರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಕ್ಕಿ ಶಾಸ್ತವು ದೇವರ ಹಬ್ಬ ಕೊಡಗಿನ ಎಲ್ಲಾ ದೇವಳದಲ್ಲೂ ವಾರ್ಷಿಕವಾಗಿ ಒಂದು ಬಾರಿ ನೆರವೇರಿದರೆ ಬೇತು ಗ್ರಾಮದ ಮಕ್ಕಿ ಶಾಸ್ತವು ಸನ್ನಿಧಿಯಲ್ಲಿ ಪೂರ್ವ ಪದ್ಧತಿಯಂತೆ 2 ಬಾರಿ ವಿಜೃಂಭಣೆಯಿಂದ, ನೂರಾರು ಭಕ್ತರ ಸಮ್ಮುಖ ನೆರವೇರುತ್ತದೆ.